Kabul Blast: ಅಫ್ಘಾನಿಸ್ತಾನದ ಕಾಬೂಲ್ನ ಮಸೀದಿ ಬಳಿ ಬಾಂಬ್ ಸ್ಫೋಟ; 8 ಜನ ಸಾವು, 18 ಮಂದಿಗೆ ಗಾಯ
ಈ ಬಾಂಬ್ ಸ್ಫೋಟದ ಹೊಣೆಯನ್ನು ಇನ್ನೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಈ ಘಟನೆಯಲ್ಲಿ 8 ಜನರು ಸಾವನ್ನಪ್ಪಿದ್ದಾರೆ. 18 ಮಂದಿ ಗಾಯಗೊಂಡಿದ್ದಾರೆ.
ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನ (Kabul) ಮಸೀದಿಯೊಂದರ ಬಳಿ ಕಾರ್ಟ್‌ನಲ್ಲಿ ಅಡಗಿಸಿಟ್ಟಿದ್ದ ಬಾಂಬ್ (Bomb Blast) ಸ್ಫೋಟಗೊಂಡಿದ್ದು, 8 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 18 ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ (taliban) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಬೂಲ್ ಪೊಲೀಸ್ ಮುಖ್ಯಸ್ಥರ ಪ್ರಕಾರ, ಕಾರ್ಟ್ ಬಾಂಬ್ ಸ್ಫೋಟವು ಪಶ್ಚಿಮ ಕಾಬೂಲ್‌ನಲ್ಲಿ ಸರ್-ಇ ಕರೇಜ್ ಪ್ರದೇಶದಲ್ಲಿ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ಮೊದಲು ಇಬ್ಬರು ಸಾವನ್ನಪ್ಪಿದ್ದರು. ಆದರೆ, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ಕೊಂಡೊಯ್ಯುತ್ತಿದ್ದಂತೆ ಸಾವಿನ ಸಂಖ್ಯೆ ವೇಗವಾಗಿ ಏರಿತು.
ಈ ಬಾಂಬ್ ಸ್ಫೋಟದ ಹೊಣೆಯನ್ನು ಇನ್ನೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಈ ಹಿಂದೆ ದೊಡ್ಡ ಪ್ರಮಾಣದ ದಾಳಿಗಳಲ್ಲಿ ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಶಿಯಾಗಳನ್ನು ಗುರಿಯಾಗಿಸಿಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಗುಂಪಿನ ಮೇಲೆ ಈ ಸ್ಫೋಟದ ಆರೋಪ ಬರುವ ಸಾಧ್ಯತೆಯಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತೀವ್ರ ಭೂಕಂಪದ ನಂತರ ಕಾಬೂಲ್ಗೆ ಮಾನವೀಯ ನೆರವು ಕಳುಹಿಸಿದ ಭಾರತ
ಖೊರಾಸನ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಎಂದು ಕರೆಯಲ್ಪಡುವ IS ನ ಪ್ರಾದೇಶಿಕ ಅಂಗಸಂಸ್ಥೆಯು ಕಳೆದ ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ದೇಶಾದ್ಯಂತ ಮಸೀದಿಗಳು ಮತ್ತು ಅಲ್ಪಸಂಖ್ಯಾತರ ಮೇಲೆ ದಾಳಿಗಳನ್ನು ಹೆಚ್ಚಿಸಿದೆ.
2014ರಿಂದ ಅಫ್ಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಎಸ್ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಗಾರರಿಗೆ ಅತಿದೊಡ್ಡ ಭದ್ರತಾ ಸವಾಲಾಗಿದೆ. ಬುಧವಾರ ತಾಲಿಬಾನ್ ಮತ್ತು ಐಎಸ್ ಬಂದೂಕುಧಾರಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ತಾಲಿಬಾನಿಗರು ಸೇರಿದಂತೆ ಐವರು ಸಾವನ್ನಪ್ಪಿದ್ದರು.