ಭಾರತ-ಅಮೆರಿಕದ್ದು ಐತಿಹಾಸಿಕ ಬಂಧ; 77ನೇ ಗಣರಾಜ್ಯೋತ್ಸವಕ್ಕೆ ಶುಭಾಶಯ ಕೋರಿದ ಟ್ರಂಪ್

ಭಾರತಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 77ನೇ ಗಣರಾಜ್ಯೋತ್ಸವದ ಸಂದೇಶವನ್ನು ಕಳುಹಿಸಿದ್ದಾರೆ. ಈ ವೇಳೆ ಅವರು ಅಮೆರಿಕದೊಂದಿಗೆ ಭಾರತ 'ಐತಿಹಾಸಿಕ ಬಂಧ'ವನ್ನು ಹೊಂದಿದೆ ಎಂದಿದ್ದಾರೆ. ವ್ಯಾಪಾರ ವಿವಾದಗಳು ಮತ್ತು ಸುಂಕ ನೀತಿಯ ಭಿನ್ನಾಭಿಪ್ರಾಯಗಳ ನಡುವೆಯೂ ಭಾರತದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಟ್ರಂಪ್ ಶುಭಾಶಯ ಕೋರಿದ್ದಾರೆ.

ಭಾರತ-ಅಮೆರಿಕದ್ದು ಐತಿಹಾಸಿಕ ಬಂಧ; 77ನೇ ಗಣರಾಜ್ಯೋತ್ಸವಕ್ಕೆ ಶುಭಾಶಯ ಕೋರಿದ ಟ್ರಂಪ್
Trump And Modi

Updated on: Jan 26, 2026 | 5:24 PM

ನವದೆಹಲಿ, ಜನವರಿ 26: ಭಾರತದ 77ನೇ ಗಣರಾಜ್ಯೋತ್ಸವಕ್ಕೆ (Republic Day) ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತದಾದ್ಯಂತ ಗಣರಾಜ್ಯೋತ್ಸವದ ಆಚರಣೆಗಳು ನಡೆಯುತ್ತಿದ್ದಂತೆ ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಈ ಸಂದೇಶವನ್ನು ಹಂಚಿಕೊಂಡಿದೆ. ಎರಡೂ ದೇಶಗಳ ನಡುವಿನ ಸಾಮಾನ್ಯ ನೆಲೆಯನ್ನು ಎತ್ತಿ ತೋರಿಸುತ್ತಾ, ಭಾರತ ಮತ್ತು ಅಮೆರಿಕ ತಮ್ಮ ಪ್ರಜಾಪ್ರಭುತ್ವ ಸಂಪ್ರದಾಯಗಳಿಂದ ಒಂದಾಗಿವೆ ಮತ್ತು ಹಲವು ದಶಕಗಳಿಂದ ಬಂಧವನ್ನು ಹೊಂದಿವೆ ಎಂದು ಟ್ರಂಪ್ ಒತ್ತಿ ಹೇಳಿದ್ದಾರೆ.

“ಯುನೈಟೆಡ್ ಸ್ಟೇಟ್ಸ್ ಜನರ ಪರವಾಗಿ ಭಾರತದ 77ನೇ ಗಣರಾಜ್ಯೋತ್ಸವಕ್ಕೆ ನಾನು ಭಾರತ ಸರ್ಕಾರ ಮತ್ತು ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ವಿಶ್ವದ ಅತ್ಯಂತ ಹಳೆಯ ಮತ್ತು ದೊಡ್ಡ ಪ್ರಜಾಪ್ರಭುತ್ವಗಳಾಗಿ ಅಮೆರಿಕ ಮತ್ತು ಭಾರತ ಐತಿಹಾಸಿಕ ಬಂಧವನ್ನು ಹಂಚಿಕೊಂಡಿವೆ” ಎಂದು ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ನಮ್ಮ ಸೈನಿಕರ ದೊಡ್ಡ ಪಡೆ ಸಾಗುತ್ತಿದೆ, ಇರಾನ್​ಗೆ ಹೊಸ ಎಚ್ಚರಿಕೆ ಕೊಟ್ಟ ಡೊನಾಲ್ಡ್​ ಟ್ರಂಪ್


ಭಾರತದ ಯುಎಸ್ ರಾಯಭಾರಿ ಸೆರ್ಗಿಯೊ ಗೋರ್ ಅವರು ಕರ್ತವ್ಯ ಮಾರ್ಗದಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಿದರು. ಈ ಅನುಭವವನ್ನು ದ್ವಿಪಕ್ಷೀಯ ಸಂಬಂಧಗಳ ಸಂಕೇತವೆಂದು ಬಣ್ಣಿಸಿದರು. ಭಾರತದ ಗಣರಾಜ್ಯೋತ್ಸವದ ಶುಭಾಶಯಗಳು! ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮನೋಭಾವದ ಆಚರಣೆಯಾದ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಮೊದಲ ಬಾರಿಗೆ ಭಾಗವಹಿಸುವ ಗೌರವ ಇಂದು ದಕ್ಕಿತು ಎಂದು ಗೋರ್ ಹೇಳಿದ್ದಾರೆ.

ಇದನ್ನೂ ಓದಿ: ತಾನೊಬ್ಬ ಸರ್ವಾಧಿಕಾರಿ ಎಂದು ಒಪ್ಪಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

“ಭಾರತದ ಆಕಾಶದಲ್ಲಿ ಅಮೆರಿಕ ನಿರ್ಮಿತ ವಿಮಾನ ಹಾರಾಡುವುದನ್ನು ನೋಡಿ ರೋಮಾಂಚನವಾಯಿತು. ಇದು ಅಮೆರಿಕ-ಭಾರತ ಕಾರ್ಯತಂತ್ರದ ಪಾಲುದಾರಿಕೆಯ ಬಲದ ಪ್ರಬಲ ಸಂಕೇತವಾಗಿದೆ” ಎಂದು ಅವರು ಹೇಳಿದ್ದಾರೆ. ಗಣರಾಜ್ಯೋತ್ಸವದ ಪರೇಡ್ ಸಮಯದಲ್ಲಿ ವೈಮಾನಿಕ ಪ್ರದರ್ಶನದಲ್ಲಿ ಅಮೆರಿಕ ಮೂಲದ ಸಾರಿಗೆ ವಿಮಾನ C-130J ಮತ್ತು ಅಪಾಚೆ ಹೆಲಿಕಾಪ್ಟರ್‌ಗಳು ಕಾಣಿಸಿಕೊಂಡವು.

ಟ್ರಂಪ್ ಸರ್ಕಾರವು ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕವನ್ನು ವಿಧಿಸಿದ ನಂತರ ಎರಡೂ ದೇಶಗಳ ಸಂಬಂಧಗಳಲ್ಲಿ ಬಿರುಕು ಉಂಟಾಗಿತ್ತು. ಅದರ ಬೆನ್ನಲ್ಲೇ ಅಮೆರಿಕದಿಂದ ಭಾರತಕ್ಕೆ ಶುಭಾಶಯದ ಸಂದೇಶ ಬಂದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ