Kharg Island: ವೆನೆಜುವೆಲಾ ಬಳಿಕ ಖಾರ್ಗ್ ದ್ವೀಪದ ಮೇಲೆ ಕಣ್ಣಿಟ್ಟ ಟ್ರಂಪ್; ಇರಾನ್​ಗೆ ಈ ಸಣ್ಣ ಪ್ರದೇಶವೇಕೆ ಬಹಳ ಮುಖ್ಯ?

ಖಾರ್ಗ್ ದ್ವೀಪವು ಪರ್ಷಿಯನ್ ಕೊಲ್ಲಿಯಲ್ಲಿರುವ ಇರಾನ್‌ನ ಅತ್ಯಂತ ನಿರ್ಣಾಯಕ ಆಸ್ತಿಯಾಗಿದೆ. ಇರಾನ್ ದೇಶದ ಒಟ್ಟು ಕಚ್ಚಾ ತೈಲ ರಫ್ತಿನ ಸುಮಾರು ಶೇ. 90ಕ್ಕೂ ಹೆಚ್ಚು ಭಾಗವು ಇದೇ ದ್ವೀಪದಲ್ಲಿರುವ ಬೃಹತ್ ತೈಲ ಟರ್ಮಿನಲ್‌ಗಳ ಮೂಲಕವೇ ಜಗತ್ತಿಗೆ ಸರಬರಾಜಾಗುತ್ತದೆ. ಹೀಗಾಗಿ, ಇರಾನ್‌ನ ಆರ್ಥಿಕ ಬೆನ್ನೆಲುಬನ್ನು ಮುರಿಯಲು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಯಾವಾಗಲೂ ಈ ದ್ವೀಪವನ್ನೇ ಪ್ರಮುಖ ಗುರಿಯಾಗಿಸಿಕೊಂಡಿವೆ. ಇದೀಗ ಡೊನಾಲ್ಡ್ ಟ್ರಂಪ್ ಕೂಡ ಈ ಖಾರ್ಗ್ ದ್ವೀಪದ ಮೇಲೆ ಕಣ್ಣಿಟ್ಟಿದ್ದಾರೆ. ವೆನೆಜುವೆಲಾವನ್ನು ತನ್ನ ವಶಕ್ಕೆ ಪಡೆದಂತೆ ಖಾರ್ಗ್ ದ್ವೀಪವನ್ನು ಕೂಡ ತೆಕ್ಕೆಗೆ ತೆಗೆದುಕೊಳ್ಳಲು ಟ್ರಂಪ್ ಪ್ಲಾನ್ ಮಾಡಿದ್ದಾರೆ.

Kharg Island: ವೆನೆಜುವೆಲಾ ಬಳಿಕ ಖಾರ್ಗ್ ದ್ವೀಪದ ಮೇಲೆ ಕಣ್ಣಿಟ್ಟ ಟ್ರಂಪ್; ಇರಾನ್​ಗೆ ಈ ಸಣ್ಣ ಪ್ರದೇಶವೇಕೆ ಬಹಳ ಮುಖ್ಯ?
Kharg Island
Image Credit source: x

Updated on: Jun 11, 2026 | 9:10 PM

ವಾಷಿಂಗ್ಟನ್, ಜೂನ್ 11: ಇರಾನ್ ಜೊತೆಗಿನ ಸಂಘರ್ಷ ಆರಂಭವಾದಾಗಿನಿಂದಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಖಾರ್ಗ್ ದ್ವೀಪದ ಮೇಲೆ ಕಣ್ಣಿಟ್ಟಿದ್ದಾರೆ. ಖಾರ್ಗ್ ದ್ವೀಪವು (Kharg Island) ಇರಾನ್‌ನ ತೈಲ ವ್ಯಾಪಾರದ ಬೆನ್ನೆಲುಬಾಗಿದ್ದು, ದೇಶದ ಬಹುಪಾಲು ಕಚ್ಚಾ ತೈಲದ ರಫ್ತನ್ನು ಇದೊಂದೇ ದ್ವೀಪ ನಿರ್ವಹಿಸುತ್ತದೆ. ಪ್ರತಿದಿನ ಸುಮಾರು 20 ಲಕ್ಷ (2 ಮಿಲಿಯನ್) ಬ್ಯಾರೆಲ್ ತೈಲವು ಈ ಸಣ್ಣ ಗಲ್ಫ್ ದ್ವೀಪದಿಂದ ಹೊರಹೋಗುತ್ತದೆ. ಅದರಲ್ಲಿ ಬಹುಪಾಲು ಚೀನಾ ದೇಶಕ್ಕೆ ರಫ್ತಾಗುತ್ತದೆ. ಹೀಗಾಗಿ, ಇರಾನ್ ಪಾಲಿಗೆ ಈ ಖಾರ್ಗ್ ದ್ವೀಪ ಚಿನ್ನದ ಮೊಟ್ಟೆ ಇಡುವ ಕೋಳಿ ಎಂದರೂ ತಪ್ಪಿಲ್ಲ.

ಪರ್ಷಿಯನ್ ಕೊಲ್ಲಿಯಲ್ಲಿರುವ ಕೇವಲ 20 ಚದರ ಕಿಲೋಮೀಟರ್ ವಿಸ್ತೀರ್ಣದ ಈ ಪುಟ್ಟ ಹವಳದ ದ್ವೀಪ ಇರಾನ್ ದೇಶದ ಆರ್ಥಿಕ ಸಾಮ್ರಾಜ್ಯದ ಅತ್ಯಂತ ನಿರ್ಣಾಯಕ ಕೇಂದ್ರವಾಗಿದೆ. ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ನಿಯಂತ್ರಣ ಸಾಧಿಸಲು ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವುದು ನನ್ನ ಮೊದಲ ಆದ್ಯತೆ ಎಂದು ಹೇಳಿರುವುದು ಈ ದ್ವೀಪದ ಜಾಗತಿಕ ಪ್ರಾಮುಖ್ಯತೆಯನ್ನು ತೋರಿಸುತ್ತದೆ.

ಇರಾನ್‌ನ ಆರ್ಥಿಕ ಜೀವನಾಡಿಯಾಗಿರುವ ಮತ್ತು ದೇಶದ ಶೇ. 90ರಷ್ಟು ಕಚ್ಚಾ ತೈಲ ರಫ್ತನ್ನು ನಿರ್ವಹಿಸುವ ‘ಖಾರ್ಗ್ ದ್ವೀಪ’ವನ್ನು ತನ್ನ ವಶಕ್ಕೆ ಪಡೆಯಲಿದೆ ಎಂದು ಟ್ರಂಪ್ ಹೇಳಿದ್ದಾರೆ. “ಬಹಳ ದೂರವಿಲ್ಲದ ಭವಿಷ್ಯದ ಒಂದು ಹಂತದಲ್ಲಿ, ನಾವು ಖಾರ್ಗ್ ದ್ವೀಪ ಮತ್ತು ಇತರ ತೈಲ ಮೂಲಸೌಕರ್ಯ ಕೇಂದ್ರಗಳನ್ನು ನಮ್ಮ ವಶಕ್ಕೆ ಪಡೆಯಲಿದ್ದೇವೆ. ವೆನೆಜುವೆಲಾದಲ್ಲಿ ನಾವು ಮಾಡಿದಂತೆಯೇ ಅವರ ತೈಲ ಮತ್ತು ಅನಿಲ ಮಾರುಕಟ್ಟೆಗಳ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳಲಿದ್ದೇವೆ” ಎಂದು ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ದಾಳಿ ಕೊನೆಗೊಳ್ಳಬೇಕು; 3 ಭಾರತೀಯರು ಸಾವನ್ನಪ್ಪಿದ ಒಮಾನ್ ಹಡಗಿನ ಮೇಲಿನ ಅಮೆರಿಕದ ದಾಳಿಗೆ ಭಾರತ ಖಂಡನೆ

ಖಾರ್ಗ್ ದ್ವೀಪದಿಂದ ತೈಲ ಸರಬರಾಜು ನಿಲ್ಲುವ ಮುನ್ಸೂಚನೆ ಹಾಗೂ ಹಾರ್ಮುಜ್ ಜಲಸಂಧಿ ಬಂದ್ ಆಗಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ದಾಖಲೆ ಮಟ್ಟಕ್ಕೆ ಏರತೊಡಗಿವೆ. ಖಾರ್ಗ್ ದ್ವೀಪವು ಇರಾನ್‌ನ ಇಡೀ ತೈಲ ರಫ್ತು ಉದ್ಯಮದ ಕೇಂದ್ರ ಬಿಂದುವಾಗಿದೆ.

ಇರಾನ್ ದೇಶವು ಜಗತ್ತಿಗೆ ರಫ್ತು ಮಾಡುವ ಒಟ್ಟು ಕಚ್ಚಾ ತೈಲದ ಸುಮಾರು ಶೇ. 90ಕ್ಕೂ ಹೆಚ್ಚು ಭಾಗ ಕೇವಲ ಇದೇ ದ್ವೀಪದಲ್ಲಿರುವ ಬೃಹತ್ ತೈಲ ಟರ್ಮಿನಲ್‌ಗಳ ಮೂಲಕವೇ ಹಡಗುಗಳನ್ನು ತಲುಪುತ್ತದೆ. ಈ ದ್ವೀಪದಿಂದ ಪ್ರತಿದಿನ ಸರಾಸರಿ 20 ಲಕ್ಷ (2 ಮಿಲಿಯನ್) ಬ್ಯಾರೆಲ್ ಕಚ್ಚಾ ತೈಲವು ಜಾಗತಿಕ ಮಾರುಕಟ್ಟೆಗೆ ರವಾನೆಯಾಗುತ್ತದೆ. ಪಾಶ್ಚಿಮಾತ್ಯ ದೇಶಗಳು ಇರಾನ್‌ನ ತೈಲ ರಫ್ತಿನ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದರೂ, ಇರಾನ್ ರಹಸ್ಯವಾಗಿ ತೈಲ ಮಾರಾಟ ಮಾಡಲು ಈ ದ್ವೀಪವನ್ನೇ ಬಳಸಿಕೊಳ್ಳುತ್ತದೆ.

ಖಾರ್ಗ್ ದ್ವೀಪದಿಂದ ಹೊರಡುವ ಬಹುಪಾಲು ತೈಲ ಟ್ಯಾಂಕರ್‌ಗಳು ನೇರವಾಗಿ ಚೀನಾ ದೇಶವನ್ನು ತಲುಪುತ್ತವೆ. ಚೀನಾದ ಇಂಧನ ಅಗತ್ಯತೆಯನ್ನು ಪೂರೈಸುವಲ್ಲಿ ಮತ್ತು ಇರಾನ್‌ಗೆ ಹಣದ ಹರಿವು ನಿರಂತರವಾಗಿ ಇರುವಂತೆ ನೋಡಿಕೊಳ್ಳುವಲ್ಲಿ ಈ ದ್ವೀಪದ ಪಾತ್ರ ದೊಡ್ಡದಿದೆ. ಖಾರ್ಗ್ ದ್ವೀಪವು ವಿಶ್ವದ ಅತಿ ದೊಡ್ಡ ಕಡಲ ತೈಲ ಟರ್ಮಿನಲ್‌ಗಳಲ್ಲಿ ಒಂದನ್ನು ಹೊಂದಿದೆ. ಇಡೀ ವಿಶ್ವದಲ್ಲೇ ಅತಿ ದೊಡ್ಡದಾದ ಸೂಪರ್ ಟ್ಯಾಂಕರ್‌ಗಳು ಇಲ್ಲಿಗೆ ಬಂದು ಅತ್ಯಂತ ವೇಗವಾಗಿ ತೈಲವನ್ನು ತುಂಬಿಸಿಕೊಳ್ಳುವಂತಹ ಅತ್ಯಾಧುನಿಕ ‘ಡೀಪ್-ವಾಟರ್’ (ಆಳ ಸಮುದ್ರದ) ಜೆಟ್ಟಿ ಮತ್ತು ಪೈಪ್‌ಲೈನ್ ವ್ಯವಸ್ಥೆಯನ್ನು ಇರಾನ್ ಇಲ್ಲಿ ನಿರ್ಮಿಸಿದೆ.

ಇದನ್ನೂ ಓದಿ: ಒಮಾನ್ ಬಳಿ ಭಾರತೀಯ ಸಿಬ್ಬಂದಿಯಿದ್ದ ಹಡಗಿನ ಮೇಲೆ ದಾಳಿ ನಡೆಸಿದ್ದನ್ನು ಒಪ್ಪಿಕೊಂಡ ಅಮೆರಿಕ

ಅಮೆರಿಕ ಏನಾದರೂ ಖಾರ್ಗ್ ದ್ವೀಪದ ಮೇಲೆ ದಾಳಿ ನಡೆಸಿ ಅಥವಾ ಅದನ್ನು ತನ್ನ ವಶಕ್ಕೆ ಪಡೆದರೆ, ಇರಾನ್‌ನ ಆದಾಯದ ಮೂಲ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ತೈಲ ಹಣವಿಲ್ಲದೆ ಇರಾನ್ ಆರ್ಥಿಕವಾಗಿ ದಿವಾಳಿಯಾಗಲಿದ್ದು, ಅದರ ಮಿಲಿಟರಿ ಶಕ್ತಿ ತನ್ನಷ್ಟಕ್ಕೆ ತಾನೇ ಕುಸಿಯುತ್ತದೆ ಎಂಬುದು ಟ್ರಂಪ್ ಲೆಕ್ಕಾಚಾರ. ವೆನೆಜುವೆಲಾದ ತೈಲ ಮಾರುಕಟ್ಟೆಯನ್ನು ನಿಯಂತ್ರಿಸಿದ ಮಾದರಿಯಲ್ಲೇ ಇರಾನ್‌ನ ತೈಲ ಮತ್ತು ಅನಿಲ ಮಾರುಕಟ್ಟೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದು ಅಮೆರಿಕದ ದೀರ್ಘಕಾಲದ ತಂತ್ರವಾಗಿದೆ.

ಖಾರ್ಗ್ ದ್ವೀಪವನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿದರೆ ಅಥವಾ ಇರಾನ್ ಇದಕ್ಕೆ ಪ್ರತಿಯಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದರೆ ಜಾಗತಿಕವಾಗಿ ತೈಲ ಬೆಲೆಗಳು ತೀವ್ರವಾಗಿ ಹೆಚ್ಚಾಗಲಿವೆ. ಇದು ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ (LPG) ಬೆಲೆಗಳ ಮೇಲೆ ನೇರ ಹಾಗೂ ಗಂಭೀರ ಪರಿಣಾಮ ಬೀರಲಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us