ವಾಷಿಂಗ್ಟನ್: ತನ್ನ ಮಾರ್-ಎ-ಲಾಗೊ ಎಸ್ಟೇಟ್ ಮೇಲೆ ದಾಳಿ ನಡೆಸಿರುವ ಎಫ್‌ಬಿಐ ಹುಡುಕಾಟ ನಡೆಸುತ್ತಿದೆ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donal Trump) ಹೇಳಿದ್ದಾರೆ. ಈ ಬಗ್ಗೆ ಫೆಡರಲ್ ಕಾನೂನು ಜಾರಿ ಸಂಸ್ಥೆಯಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲವಾದರೂ ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ ತಮ್ಮ ಶ್ವೇತಭವನದಿಂದ ಫ್ಲೋರಿಡಾದಲ್ಲಿರುವ ನಿವಾಸಕ್ಕೆ ವರ್ಗೀಕೃತ ಅಧ್ಯಕ್ಷೀಯ ದಾಖಲೆಗಳನ್ನು ತೆಗೆದುಕೊಂಡಿದ್ದಾರೆಯೇ ಎಂಬ ತನಿಖೆಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.
“ಇದು ನಮ್ಮ ರಾಷ್ಟ್ರಕ್ಕೆ ಕರಾಳ ಸಮಯವಾಗಿದೆ. ಏಕೆಂದರೆ ಫ್ಲೋರಿಡಾದ ಪಾಮ್ ಬೀಚ್‌ನಲ್ಲಿರುವ ನನ್ನ ಸುಂದರವಾದ ಮನೆ ಮಾರ್-ಎ-ಲಾಗೊ ಮೇಲೆ ದಾಳಿ ನಡೆಸಲಾಗಿದೆ. ನನ್ನ ಮನೆಯನ್ನು ಎಫ್‌ಬಿಐ ಏಜೆಂಟ್‌ಗಳ ದೊಡ್ಡ ಗುಂಪು ಆಕ್ರಮಿಸಿಕೊಂಡಿದೆ” ಎಂದು ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ನ್ಯಾನ್ಸಿ ಪೆಲೋಸಿ ಭೇಟಿಯ ನಂತರ ಚೀನಾ ತೈವಾನ್ ನಡುಗಡ್ಡೆಯ ಸುತ್ತಮುತ್ತ ಮಿಲಿಟರಿ ಕವಾಯತುಗಳನ್ನು ಹೆಚ್ಚಿಸಿದೆ: ತೈವಾನ್ ಸರ್ಕಾರ
donald trumpಅವರ ಮನೆಯ ಆವರಣವನ್ನು ಪ್ರವೇಶಿಸಲು ಎಫ್‌ಬಿಐ ಸರ್ಚ್ ವಾರಂಟ್ ಅನ್ನು ಕಾರ್ಯಗತಗೊಳಿಸಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಈಗಾಗಲೇ ಟ್ರಂಪ್ ಹಲವಾರು ಕಾನೂನು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಅವರ ವೈಟ್ ಹೌಸ್ನಲ್ಲಿ ಅವರ ಅಧಿಕಾರಾವಧಿಯಲ್ಲಿ ಕಾಣೆಯಾದ ರಾಷ್ಟ್ರೀಯ ದಾಖಲೆಗಳು, ಯುಎಸ್ ಕ್ಯಾಪಿಟಲ್ ಮೇಲಿನ ದಾಳಿ, ವೈರ್ ವಂಚನೆ, ಜಾರ್ಜಿಯಾ ಚುನಾವಣಾ ಟ್ಯಾಂಪರಿಂಗ್ ಸೇರಿದಂತೆ ಹಲವು ವಿಚಾರಗಳಲ್ಲಿ ಕಾನೂನು ಸಮಸ್ಯೆಯನ್ನು ಅವರು ಎದುರಿಸುತ್ತಿದ್ದಾರೆ.
ಟ್ರಂಪ್ ನಿವಾಸ ಮಾರ್-ಎ-ಲಾಗೊದ ಹೊರಗಿನ ವೈಮಾನಿಕ ದೃಶ್ಯಾವಳಿಗಳು ವೈರಲ್ ಆಗಿದ್ದು, ಇದರಲ್ಲಿ ಅವರ ಮನೆಯ ಹೊರಗೆ ಪೊಲೀಸ್ ಕಾರುಗಳು ನಿಂತಿರುವುದನ್ನು ನೋಡಬಹುದು. ಅಮೆರಿಕಾದ ಮಾಜಿ ಅಧ್ಯಕ್ಷ ಟ್ರಂಪ್ನ ಬೆಂಬಲಿಗರು ಅವರ ಮನೆಯ ಹೊರಗೆ ಜಮಾಯಿಸಿದ್ದಾರೆ. ಟ್ರಂಪ್ ಹೆಸರಿನ ಬ್ಯಾನರ್ ಅಥವಾ ಅವರ ಫೋಟೋಗಳನ್ನು ಹಿಡಿದುಕೊಂಡು, ಅಮೆರಿಕನ್ ಧ್ವಜಗಳನ್ನು ಬೀಸುತ್ತಿರುವ ದೃಶ್ಯ ಕಂಡುಬಂದಿತು.
ನ್ಯಾಷನಲ್ ಆರ್ಕೈವ್ಸ್ ಫೆಬ್ರವರಿಯಲ್ಲಿ ಟ್ರಂಪ್ ಅವರ ಫ್ಲೋರಿಡಾ ಎಸ್ಟೇಟ್‌ನಿಂದ 15 ಬಾಕ್ಸ್‌ಗಳಷ್ಟು ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿತ್ತು.