ಇಸ್ರೇಲ್-ಇರಾನ್ ತಕ್ಷಣದ ಕದನ ವಿರಾಮಕ್ಕೆ ಒಪ್ಪಿವೆ; ಟ್ರಂಪ್ ಘೋಷಣೆ

ಬೈರೂತ್ ಮತ್ತು ಲೆಬನಾನ್ ಮೇಲಿನ ದಾಳಿಗೆ ಪ್ರತಿಕಾರವಾಗಿ ಇರಾನ್, ಇಸ್ರೇಲ್ ಮೇಲೆ ಭಾರಿ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೊಮ್ಮೆ ಉದ್ವಿಗ್ನಗೊಂಡಿತ್ತು. ಫೆಬ್ರವರಿ 28ರಂದು ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಬಹುತೇಕ ಹಿರಿಯ ನಾಯಕರನ್ನು ಇಸ್ರೇಲ್ ಹತ್ಯೆಗೈದ ನಂತರ ಆರಂಭವಾದ ಈ ಸಂಘರ್ಷವನ್ನು ಕೊನೆಗೊಳಿಸುವ ಸಂಧಾನದ ಪ್ರಯತ್ನಗಳು ಯಶಸ್ವಿಯಾಗಿರಲಿಲ್ಲ. ಆದರೆ, ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮತ್ತು ಇಸ್ರೇಲ್ ತಕ್ಷಣದ ಕದನವಿರಾಮಕ್ಕೆ ಒಪ್ಪಿವೆ ಎಂದು ಘೋಷಿಸಿದ್ದಾರೆ.

ಇಸ್ರೇಲ್-ಇರಾನ್ ತಕ್ಷಣದ ಕದನ ವಿರಾಮಕ್ಕೆ ಒಪ್ಪಿವೆ; ಟ್ರಂಪ್ ಘೋಷಣೆ
Trump
Image Credit source: AP

Updated on: Jun 08, 2026 | 5:51 PM

ಟೆಹ್ರಾನ್, ಜೂನ್ 8: ಇಸ್ರೇಲ್ ಮತ್ತು ಇರಾನ್ ನಡುವೆ ಇತ್ತೀಚೆಗೆ ನಡೆದ ಕ್ಷಿಪಣಿ ದಾಳಿಗಳ ಬಳಿಕ, ಇರಾನ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಬೈರೂತ್ ಮತ್ತು ಲೆಬನಾನ್ ಮೇಲಿನ ಇಸ್ರೇಲ್ ದಾಳಿಗೆ ಪ್ರತಿಕಾರವಾಗಿ ಇರಾನ್ (Iran) ಇತ್ತೀಚೆಗೆ ಇಸ್ರೇಲ್ ಮೇಲೆ ಭಾರಿ ಪ್ರಮಾಣದ ಕ್ಷಿಪಣಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ತಡೆಯಲು ಇರಾನ್‌ನ ಮಿಲಿಟರಿ ಜಂಟಿ ಕಮಾಂಡ್, ಇಸ್ರೇಲ್ ವಿರುದ್ಧದ ತನ್ನ ಮಿಲಿಟರಿ ಕಾರ್ಯಾಚರಣೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸುತ್ತಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.

ಆದರೆ, “ಒಂದು ವೇಳೆ ಇಸ್ರೇಲ್ ಮತ್ತೆ ನಮ್ಮ ವಿರುದ್ಧ ಯಾವುದೇ ರೀತಿಯ ಆಕ್ರಮಣಶೀಲತೆ ತೋರಿದರೆ, ನಮ್ಮ ಮುಂದಿನ ಪ್ರತಿಕ್ರಿಯೆ ಮತ್ತಷ್ಟು ತೀವ್ರವಾಗಿರುತ್ತದೆ” ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಎಚ್ಚರಿಕೆ ನೀಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಿಕ್ಕಟ್ಟನ್ನು ಶಾಂತಗೊಳಿಸಲು ಸಕ್ರಿಯವಾಗಿ ಮಧ್ಯಪ್ರವೇಶಿಸಿದ್ದಾರೆ. ಇರಾನ್‌ನ ಕ್ಷಿಪಣಿ ದಾಳಿಗೆ ತಕ್ಷಣವೇ ಪ್ರತಿಕಾರ ತೀರಿಸಿಕೊಳ್ಳದಂತೆ ಟ್ರಂಪ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಫೋನ್ ಕರೆ ಮಾಡಿ ಮನವಿ ಮಾಡಿದ್ದಾರೆ.


ಇದನ್ನೂ ಓದಿ: ವಿಶ್ವ ಶಾಂತಿಗೆ ಬಿಗ್ ಬೂಸ್ಟ್: ಇಸ್ರೇಲ್-ಲೆಬನಾನ್ ಕದನ ವಿರಾಮಕ್ಕೆ ಒಪ್ಪಿಗೆ, ಇರಾನ್ ಮಾತುಕತೆಗೂ ಮುಕ್ತವಾದ ಹಾದಿ

ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಏರ್ಪಡಲು ತುಂಬಾ ಹತ್ತಿರದಲ್ಲಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಈ ಅಂತಿಮ ಒಪ್ಪಂದಕ್ಕೆ ಸಹಿ ಬೀಳುವವರೆಗೆ ಇರಾನ್ ಮೇಲಿನ ಮತ್ತು ‘ಸ್ಟ್ರೈಟ್ ಆಫ್ ಹಾರ್ಮುಜ್’ ಮಾರ್ಗದ ಮೇಲಿನ ಅಮೆರಿಕದ ದಿಗ್ಬಂಧನ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.


ಕದನ ವಿರಾಮಕ್ಕೆ ಉಭಯ ದೇಶಗಳು ಒಲವು ತೋರಿದ್ದರೂ, ಇರಾನ್‌ನ ನೈಋತ್ಯ ಭಾಗದಲ್ಲಿರುವ ‘ಮಹಶಹರ್’ (Mahshahr) ಪೆಟ್ರೋಕೆಮಿಕಲ್ ಸ್ಥಾವರ ಮತ್ತು ಇತರ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ಇತ್ತೀಚೆಗೆ ಬಾಂಬ್ ದಾಳಿ ನಡೆಸಿತ್ತು. ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸಲು ಇರಾನ್ ಈ ಇಂಧನ ಘಟಕವನ್ನು ಬಳಸುತ್ತಿತ್ತು ಎಂದು ಇಸ್ರೇಲ್ ಆರೋಪಿಸಿದೆ. ಇಸ್ರೇಲ್‌ನ ಈ ದಾಳಿಗೆ ಪ್ರತಿಯಾಗಿ ಇರಾನ್ ಸಹ ಇಸ್ರೇಲ್‌ನ ‘ಹೈಫಾ’ (Haifa) ನಗರದಲ್ಲಿರುವ ಇಂಧನ ಘಟಕವನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಿತ್ತು.

ಇದನ್ನೂ ಓದಿ: ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ಬೆನ್ನಲ್ಲೇ ಶಾಂತಿ ಮಾತುಕತೆಗೆ ಮುಂದಾದ ಟ್ರಂಪ್

ಇಸ್ರೇಲ್ ಮತ್ತು ಇರಾನ್ ಎರಡೂ ದೇಶಗಳು ‘ತಕ್ಷಣದ ಕದನ ವಿರಾಮ’ಕ್ಕೆ ಎದುರು ನೋಡುತ್ತಿವೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಈ ಕುರಿತು ತಮ್ಮ ‘ಟ್ರುತ್ ಸೋಷಿಯಲ್’ ಖಾತೆಯಲ್ಲಿ ಬರೆದುಕೊಂಡಿರುವ ಅವರು, “ಶಾಂತಿಯ ಕೊನೆಯ ಹಂತದ ಮಾತುಕತೆಗಳು ಪ್ರಗತಿಯಲ್ಲಿವೆ. ಈ ವಿಷಯದಲ್ಲಿ ಯಾವುದೇ ಮೂರ್ಖತನ ಅಡ್ಡಿಯಾಗದಿದ್ದರೆ ಸಾಕು. ಅಂತಿಮ ಒಪ್ಪಂದಕ್ಕೆ ಬರುವವರೆಗೆ ಇರಾನ್ ಮೇಲಿನ ದಿಗ್ಬಂಧನ ಸಂಪೂರ್ಣವಾಗಿ ಜಾರಿಯಲ್ಲಿರುತ್ತದೆ. ಪ್ರಕ್ರಿಯೆಗಳು ವೇಗವಾಗಿ ನಡೆಯಬೇಕು” ಎಂದಿದ್ದಾರೆ.

ಭಾರತೀಯ ಕಾಲಮಾನದ ಪ್ರಕಾರ, ಭಾನುವಾರ ರಾತ್ರಿಯಿಂದ ಇರಾನ್ ತನ್ನ ದೇಶದ ಮೇಲೆ ಸುಮಾರು 30 ಕ್ಷಿಪಣಿಗಳನ್ನು ಹಾರಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us