
ವಾಷಿಂಗ್ಟನ್, ಅಕ್ಟೋಬರ್ 13: ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಈ ಹಿಂದೆಯೂ ಹಲವು ಬಾರಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ತಾನೇ ನಿಲ್ಲಿಸಿದ್ದೇನೆಂದು ಹೇಳಿದ್ದರು. ಅವರ ಈ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನಿರಾಕರಿಸಿದ್ದರೂ ಟ್ರಂಪ್ ತನ್ನ ಹೇಳಿಕೆಯನ್ನು ಬದಲಿಸಿರಲಿಲ್ಲ. ಈಗ ಮತ್ತೆ ಇದರ ಕುರಿತು ಹೇಳಿಕೆ ನೀಡಿರುವ ಅವರು,ಹೆಚ್ಚಿನ ತೆರಿಗೆ ವಿಧಿಸುತ್ತೇನೆಂದು ಬೆದರಿಸುವ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ನಾನೇ ನಿಲ್ಲಿಸಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
“ನಾನು ಕೆಲವು ಯುದ್ಧಗಳನ್ನು ಸುಂಕಗಳ ಆಧಾರದ ಮೇಲೆಯೇ ಇತ್ಯರ್ಥಪಡಿಸಿದ್ದೇನೆ. ಉದಾಹರಣೆಗೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಸಮಯದಲ್ಲಿ ನಿಮ್ಮ ಬಳಿ ಪರಮಾಣು ಶಸ್ತ್ರಾಸ್ತ್ರಗಳಿದ್ದು, ನೀವು ಯುದ್ಧ ಮಾಡಲು ಬಯಸಿದರೆ ನಾನು ನಿಮ್ಮಿಬ್ಬರ ಮೇಲೂ ಶೇ. 100, ಶೇ. 150 ಮತ್ತು ಶೇ. 200 ರಷ್ಟು ಸುಂಕಗಳನ್ನು ವಿಧಿಸುತ್ತೇನೆ ಎಂದು ಬೆದರಿಸುವ ಮೂಲಕ ನಾನು ಯುದ್ಧ ನಿಲ್ಲಿಸುವಲ್ಲಿ ಕಾರಣವಾಗಿದ್ದೇನೆ” ಎಂದು ಟ್ರಂಪ್ ಈಜಿಪ್ಟ್‌ನಲ್ಲಿ ನಡೆಯಲಿರುವ ಶಾಂತಿ ಶೃಂಗಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳು-ಕೈದಿ ವಿಚಾರವಾಗಿ ಇಸ್ರೇಲ್ಗೆ ಹೋಗುವಾಗ ಮುನ್ನ ವರದಿಗಾರರೊಂದಿಗೆ ಮಾತನಾಡಿದ ಅವರು,”ನಾನು 8 ಜಾಗತಿಕ ಸಂಘರ್ಷಗಳನ್ನು ಕೊನೆಗೊಳಿಸಿದ್ದೇನೆ. ಇದು ಬೇರೆ ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಈ ವರ್ಷ ನಡೆದ ಭಾರತ ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಸುಂಕದ ಬೆದರಿಕೆ ಇಟ್ಟು ಒಪ್ಪಂದ ಮಾಡಿಸಿದ್ದೇನೆ” ಎಂದು ಹೇಳಿಕೊಂಡಿದ್ದಾರೆ. ಆದರೆ ಭಾರತ ಮಾತ್ರ ಆಪರೇಷನ್ ಸಿಂಧೂರ್ ಅಥವಾ ಪಾಕಿಸ್ತಾನದೊಂದಿಗಿನ ಕದನದಲ್ಲಿ ಟ್ರಂಪ್ ಎಂದಿಗೂ ಮಧ್ಯಪ್ರವೇಶ ಮಾಡಿಲ್ಲ ಎಂದಿದೆ.
“ಆಪರೇಷನ್ ಸಿಂಧೂರ್ ನಂತರ ಮೇ 2025 ರಲ್ಲಿ ಕದನ ವಿರಾಮ ಘೋಷಿಸಿದಾಗಿನಿಂದ, ಟ್ರಂಪ್ ಪದೇ ಪದೇ ಮಿಲಿಟರಿ ಸಂಘರ್ಷ ನಿಲ್ಲಿಸುವಲ್ಲಿ ತಾನು ಮಹತ್ವದ ಪಾತ್ರ ವಹಿಸಿದ್ದೇನೆ, ಇದಕ್ಕೆ ತನ್ನ ಸುಂಕ ವ್ಯವಸ್ಥೆಯೇ ಕಾರಣ” ಎಂದು ಹೇಳಿಕೊಂಡಿದ್ದಾರೆ. ಹೀಗಿರುವಾಗ ಎರಡೂ ಕಡೆಯ ಮಿಲಿಟರಿ ನಾಯಕತ್ವದ ನಡುವಿನ ನೇರ ಮಾತುಕತೆಗಳ ಮೂಲಕ ಕದನ ವಿರಾಮದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಭಾರತ ಹೇಳಿದೆ.
ನಾನು ಈಗಾಗಲೇ ಹಲವು ಕದನಗಳನ್ನು ಕೊನೆಗೊಳಿಸಿದ್ದು, ಗಾಜಾ ನಾನು ಕೊನೆಗೊಳಿಸಿರುವ 8 ನೇ ಕದನವಾಗಿದೆ ಎಂದು ಪದೇ ಪದೇ ಹೇಳುತ್ತಾ ಬಂದಿರುವ ಟ್ರಂಪ್,ತಾನು ಯುದ್ಧ ನಿಲ್ಲಿಸುವಲ್ಲಿ ನಿಪುಣನಾಗಿದ್ದೇನೆ. ಮುಂದೆ ಕಾಬೂಲ್ ಮತ್ತು ಇಸ್ಲಾಮಾಬಾದ್ ನಡುವಿನ ಉದ್ವಿಗ್ನತೆಯ ಕುರಿತಾಗಿಯೂ ಯೋಚಿಸುತ್ತೇನೆ ಎಂದರು.
“ಮುಂದಿನ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ನಾಮನಿರ್ದೇಶನಗಳಿಗಾಗಿ ಅವರು ತಮ್ಮನ್ನು ಸಕ್ರಿಯವಾಗಿ ಪ್ರಚಾರ ಮಾಡಿಕೊಂಡಿರುವ ಟ್ರಂಪ್,ನಾನು ಸಂಘರ್ಷಗಳನ್ನು ಬಗೆಹರಿಸುವಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದೇನೆ” ಎಂದಿದ್ದಾರೆ.
“30 ರಿಂದ 40 ವರ್ಷಗಳನ ಸುದೀರ್ಘ ಅವಧಿಯವರೆಗೆ ನಡೆದಿದ್ದ ಯುದ್ಧಗಳನ್ನು ನಾನು ನಿಲ್ಲಿಸಿದ್ದೇನೆ. ಈ ಯುದ್ಧಗಳಲ್ಲಿ ಕೋಟಿಗಟ್ಟಲೆ ಜನರು ತಮ್ಮ ಪ್ರಾಣ ಕಳೆದುಕೊಳ್ಳಬೇಕಿತ್ತು. ಆದರೆ ನನ್ನಿಂದಾಗಿ ಅಷ್ಟೂ ಜನರ ಪ್ರಾಣ ಉಳಿದಿದೆ ” ಎಂದು ಹೇಳಿದ್ದಾರೆ.
ತಮ್ಮ ನೊಬೆಲ್ ಪ್ರಶಸ್ತಿ ಪುರಸ್ಕೃತರನ್ನು ಉದ್ದೇಶಿಸಿ ಮಾತನಾಡಿದ ಅವರು, ” ನ್ಯಾಯವಾಗಿ ಹೇಳಬೇಕೆಂದರೆ 2024ರ ಆಯ್ಕೆಗಳನ್ನು ಪರಿಗಣಿಸಲಾಗಿದೆ. ಆದರೆ 2025ರಲ್ಲಿಯೂ ಸಾಕಷ್ಟು ವಿಷಯಗಳು ನಡೆದಿವೆ. ನೀವು ವಿನಾಯಿತಿ ನೀಡಬಹುದು ಎಂದು ಹೇಳುವವರೂ ಇದ್ದಾರೆ. ನಾನು ಎನೇ ಮಾಡಿದ್ದರೂ ನೋಬೆಲ್ಗಾಗಿ ಅಲ್ಲ, ಜನರ ಜೀವ ಉಳಿಸುವ ಸಲುವಾಗಿ ನಾನು ಈ ಎಲ್ಲಾ ಕೆಲಸಗಳನ್ನು ಮಾಡಿದ್ದೇನೆ.” ಎಂದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ