ಮೆಹುಲ್ ಚೋಕ್ಸಿ ವಿರುದ್ಧ ಕಾನೂನು ಪ್ರಕ್ರಿಯೆ ಶುರು ಮಾಡಿದ ಇಡಿ; ಡೊಮಿನಿಕಾ ಕೋರ್ಟ್ನಲ್ಲಿ ಅಫಿಡಿವಿಟ್ ಸಲ್ಲಿಸಲು ಸಿದ್ಧತೆ
ಚೋಕ್ಸಿ ಭಾರತದ ಪ್ರಜೆ ಮತ್ತು ಅಪರಾಧಿ. ಹೀಗಾಗಿ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ನಾವು ಡೊಮಿನಿಕಾ ಕೋರ್ಟ್ನಲ್ಲಿ ಮನವಿ ಮಾಡುತ್ತೇವೆ ಎಂದು ಇಡಿ ತಿಳಿಸಿದೆ.
ಮೆಹುಲ್ ಚೋಕ್ಸಿ ಈಗಲೂ ಭಾರತದ ಪ್ರಜೆ ಎಂದು ಡೊಮಿನಿಕಾ ಕೋರ್ಟ್ನಲ್ಲಿ ಅಫಿಡಿವಿಟ್ ಸಲ್ಲಿಸಲು ಅವಕಾಶ ಕೊಡುವಂತೆ ಜಾರಿ ನಿರ್ದೇಶನಾಲಯ (ಇಡಿ) ಡೊಮಿನಿಕಾ ಸರ್ಕಾರಕ್ಕೆ ಮನವಿ ಸಲ್ಲಿಸಲು ಎಲ್ಲ ರೀತಿಯ ಸಿದ್ಧತೆಯನ್ನೂ ಮಾಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಆರೋಪಿ ಮೆಹುಲ್ ಚೋಕ್ಸಿ 2018ರಲ್ಲಿ ಭಾರತವನ್ನು ತೊರೆದು ಆಂಟಿಗುವಾಕ್ಕೆ ಪರಾರಿಯಾಗಿದ್ದ. ಅಲ್ಲಿನ ಪೌರತ್ವ ಪಡೆದಿದ್ದ ಚೋಕ್ಸಿ, ತಮ್ಮ ವಿರುದ್ಧ ಕಾನೂನು ಪ್ರಕ್ರಿಯೆಗಳು ಶುರುವಾಗುತ್ತಿದ್ದಂತೆ ಅಕ್ರಮವಾಗಿ ಡೊಮಿನಿಕಾ ದ್ವೀಪರಾಷ್ಟ್ರವನ್ನು ನುಸುಳಿ, ಅಲ್ಲಿನ ಪೊಲೀಸರಿಂದ ಬಂಧಿತರಾಗಿದ್ದರು.
ಬಂಧಿತ ಚೋಕ್ಸಿ ವಾಪಸ್ ಬರಲು ಅವಕಾಶ ಕೊಡುವುದಿಲ್ಲ ಎಂದು ಆಂಟಿಗುವಾ ಪ್ರಧಾನಿ ಹೇಳಿದ್ದಾರೆ. ಇದೀಗ ಭಾರತದ ಜಾರಿ ನಿರ್ದೇಶನಾಲಯ ತನ್ನ ಪ್ರಕ್ರಿಯೆಗಳನ್ನು ಶುರು ಮಾಡಿದೆ. ಮೆಹುಲ್ ಚೋಕ್ಸಿ ಒಬ್ಬ ದೇಶಭ್ರಷ್ಟ ವ್ಯಾಪಾರಿ. ಆತ ಭಾರತದ ಪ್ರಜೆ ಎಂದು ಬುಧವಾರ ಡೊಮಿನಿಕಾ ಕೋರ್ಟ್ನಲ್ಲಿ ಅಫಿಡಿವಿಟ್ ಸಲ್ಲಿಸಲು ಮುಂದಾಗಿದೆ. ಇದಕ್ಕಾಗಿ ಇಂದು ಸಂಜೆಯೊಳಗೆ ಡೊಮಿನಿಕಾ ಸರ್ಕಾರದ ಅನುಮತಿ ಪಡೆಯಲಿದೆ.
ಚೋಕ್ಸಿ ವಿಚಾರದಲ್ಲಿ ಭಾರತದ ಕೇಂದ್ರ ಸರ್ಕಾರ ತನ್ನ ನಿಲುವನ್ನು ವ್ಯಕ್ತಪಡಿಸುವುದು ಕಡ್ಡಾಯವಾಗಿದೆ. ಚೋಕ್ಸಿ ಭಾರತದ ಪ್ರಜೆ ಮತ್ತು ಅಪರಾಧಿ. ಹೀಗಾಗಿ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ನಾವು ಡೊಮಿನಿಕಾ ಕೋರ್ಟ್ನಲ್ಲಿ ಮನವಿ ಮಾಡುತ್ತೇವೆ ಎಂದು ಇಡಿ ತಿಳಿಸಿದೆ. ಡೊಮಿನಿಕಾದಲ್ಲಿ ಮೆಹುಲ್ ಚೋಕ್ಸಿ ಜೈಲಿನಲ್ಲಿ ಇರುವ ಮತ್ತು ಅವರ ಮೈಮೇಲೆ ಹೊಡೆದ ಗಾಯಗಳಾದ ಫೋಟೋ ಕೂಡ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.
ಈ ಮೆಹುಲ್ ಚೋಕ್ಸಿ ನೀರವ್ ಮೋದಿಯ ಸಂಬಂಧಿಯೇ ಆಗಿದ್ದಾರೆ. ಇವರಿಬ್ಬರೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಆರೋಪಿಗಳಾಗಿದ್ದಾರೆ. ನೀರವ್ ಮೋದಿ ಲಂಡನ್ ಜೈಲಿನಲ್ಲಿದ್ದರೆ, ಮೆಹುಲ್ ಚೋಕ್ಸಿ ಆಂಟಿಗುವಾಕ್ಕೆ ತೆರಳಿ ಅಲ್ಲಿನ ಪೌರತ್ವ ಪಡೆದಿದ್ದರು. ಇವರಿಬ್ಬರ ವಿರುದ್ಧವೂ ಇಡಿ ತನಿಖೆ ನಡೆಸಿದೆ.
ಇದನ್ನೂ ಓದಿ: ಕೊರೊನಾದಿಂದ ಚೇತರಿಸಿಕೊಂಡಿದ್ದ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಏಮ್ಸ್ಗೆ ದಾಖಲು