ಕೊರೊನಾ ವೈರಸ್​ನ ಮೂಲ ಚೀನಾದ ವುಹಾನ್ ಲ್ಯಾಬ್‌: ವೈರಸ್ ಮೂಲದ ಬಗ್ಗೆ ತನಿಖೆಗೆ ಹೆಚ್ಚಿದ ಒತ್ತಡ

ಕೊರೊನಾ ವೈರಸ್​ನ ಮೂಲ ಚೀನಾದ ವುಹಾನ್ ಲ್ಯಾಬ್‌: ವೈರಸ್ ಮೂಲದ ಬಗ್ಗೆ ತನಿಖೆಗೆ ಹೆಚ್ಚಿದ ಒತ್ತಡ
ವುಹಾನ್ ವೈರಾಲಜಿ ಲ್ಯಾಬ್

ಮಾನವಕುಲಕ್ಕೆ ಮಾರಕವಾಗಿರುವ ಈ ಕೊರೊನಾ ವೈರಸ್ ಸೃಷ್ಟಿಯಾಗಿದ್ದು ಚೀನಾದ ವುಹಾನ್ ವೈರಾಲಜಿ ಲ್ಯಾಬೊರೇಟರಿಯಲ್ಲಿ ಎನ್ನುವುದನ್ನು ಈಗ ವಿಜ್ಞಾನಿಗಳೇ ಹೇಳಿದ್ದಾರೆ. ಆಮೆರಿಕ, ಇಂಗ್ಲೆಂಡ್,ಭಾರತದಿಂದ ಈಗ ವೈರಸ್ ಮೂಲದ ಬಗ್ಗೆ ಸಮಗ್ರ ತನಿಖೆಗೆ ಒತ್ತಡ ಹೆಚ್ಚಾಗುತ್ತಿದೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 01, 2021 | 7:07 PM

ಕೊರೊನಾ ವೈರಸ್ ಇಡೀ ವಿಶ್ವವನ್ನು ಕಳೆದ ಒಂದೂವರೆ ವರ್ಷದಿಂದ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ. ಮಾನವಕುಲಕ್ಕೆ ಮಾರಕವಾಗಿರುವ ಈ ಕೊರೊನಾ ವೈರಸ್ ಸೃಷ್ಟಿಯಾಗಿದ್ದು ಚೀನಾದ ವುಹಾನ್ ವೈರಾಲಜಿ ಲ್ಯಾಬೊರೇಟರಿಯಲ್ಲಿ ಎನ್ನುವುದನ್ನು ಈಗ ವಿಜ್ಞಾನಿಗಳೇ ಹೇಳಿದ್ದಾರೆ. ಆಮೆರಿಕ, ಇಂಗ್ಲೆಂಡ್,ಭಾರತದಿಂದ ಈಗ ವೈರಸ್ ಮೂಲದ ಬಗ್ಗೆ ಸಮಗ್ರ ತನಿಖೆಗೆ ಒತ್ತಡ ಹೆಚ್ಚಾಗುತ್ತಿದೆ.

ಜಗತ್ತಿಗೆ ಕೊವಿಡ್ ರೋಗ ತಂದೊಡ್ಡಿರುವ ಕೊರೊನಾ ವೈರಸ್ ಸೋಂಕಿನ ಮೂಲ ಯಾವುದು ಎಂದು ಇಡೀ ವಿಶ್ವವೇ ತಲೆಕೆಡಿಸಿಕೊಂಡಿದೆ. ಕಳೆದ ಒಂದೂವರೆ ವರ್ಷದಿಂದ ಚೀನಾದ ವುಹಾನ್ ಲ್ಯಾಬ್ ಬಗ್ಗೆ ಎಲ್ಲ ದೇಶಗಳಿಗೂ ಅನುಮಾನ ಇದೆ. ಇದೀಗ ಕೊರೊನಾ ವೈರಸ್ ಹೇಗೆ ಸೃಷ್ಟಿಯಾಯಿತು ಎನ್ನುವ ಬಗ್ಗೆ ಸಂಶೋಧನೆ ನಡೆಸಿ ಯೂರೋಪ್​ನ ಇಬ್ಬರು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಯೂರೋಪ್ ವಿಜ್ಞಾನಿಗಳ ಪ್ರಕಾರ, ಕೊರೊನಾ ವೈರಸ್ ಸ್ವಾಭಾವಿಕವಾಗಿ ಸೃಷ್ಟಿಯಾಗಿಲ್ಲ. ಈ ವೈರಸ್ ಅನ್ನು ಚೀನಾದ ವಿಜ್ಞಾನಿಗಳು ಕೃತಕವಾಗಿ ಸೃಷ್ಟಿ ಮಾಡಿದ್ದಾರೆ. ಬಳಿಕ ರಿವರ್ಸ್ ಎಂಜಿನಿಯರಿಂಗ್ ಮಾಡಿ ಪ್ರೊಟೀನ್ ಸೇರಿಸಿ, ಸ್ವಾಭಾವಿಕವಾಗಿಯೇ ವೈರಸ್ ಸೃಷ್ಟಿಯಾಗಿದೆ ಎಂದು ಬಿಂಬಿಸಲು ಚೀನಾ ಯತ್ನಿಸಿದೆ.

ಚೀನಾದ ವುಹಾನ್ ಲ್ಯಾಬ್​ನಲ್ಲೇ ಕೊರೊನಾ ವೈರಸ್ ಸೃಷ್ಟಿಯಾಗಿದೆ ಎಂದು ಯೂರೋಪ್​ನ ಇಬ್ಬರು ವಿಜ್ಞಾನಿಗಳು ಹೇಳಿದ್ದಾರೆ. ಈ ಬಗ್ಗೆ 22 ಪುಟಗಳ ಸಂಶೋಧನಾ ವರದಿ ಸಿದ್ದಪಡಿಸಿದ್ದಾರೆ. ಬ್ರಿಟಿಷ್ ಪ್ರೊಫೆಸರ್ ಅಂಗೂಸ್ ಡಲಗ್ಲೀಸ್, ನಾರ್ವೆಯ ವಿಜ್ಞಾನಿ ಬಿರ್ಜರ್ ಸೋರೆನ್ ಸೆನ್ ಈ ಸಂಶೋಧನೆ ನಡೆಸಿ ಚೀನಾದ ವುಹಾನ್ ಲ್ಯಾಬ್​ನಲ್ಲೇ ಕೊರೊನಾ ವೈರಸ್ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ. ಕೊರೊನಾ ವೈರಸ್ ಸ್ಯಾಂಪಲ್​ಗಳಲ್ಲಿ ವಿಶಿಷ್ಟವಾದ ಫಿಂಗರ್ ಫ್ರಿಂಟ್​ಗಳಿವೆ. ಲ್ಯಾಬ್​ನಲ್ಲಿ ತಿರುಚಿದ ಪರಿಣಾಮವಾಗಿಯೇ ಈ ವಿಶಿಷ್ಟ ಫಿಂಗರ್ ಫ್ರಿಂಟ್ ಕಾಣಿಸುತ್ತಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕೊರೊನಾ ವೈರಸ್​ನ ಸ್ವಾಭಾವಿಕ ಪೂರ್ವಜರು ಎನಿಸಿಕೊಳ್ಳುವ ಯಾವುದೇ ವೈರಾಣು ಇಲ್ಲ. ವುಹಾನ್ ವೈರಾಲಜಿ ಲ್ಯಾಬೋರೇಟರಿಯಲ್ಲಿ ನಡೆದ ಗೇನ್ ಆಫ್ ಫಂಕ್ಷನ್ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿದ ವಿಜ್ಞಾನಿಗಳು ಕೊರೊನಾ ವೈರಸ್ ಸೃಷ್ಟಿಸಿದ್ದಾರೆ. ಸ್ವಾಭಾವಿಕ ವೈರಸ್ ಅನ್ನು ಹೆಚ್ಚು ಅಪಾಯಕಾರಿಯಾಗುವಂತೆ ಮಾಡುವುದೇ ಗೇನ್ ಆಫ್ ಪಂಕ್ಷನ್ ಪ್ರಾಜೆಕ್ಟ್ ಕೆಲಸ. ಆಮೆರಿಕ ವಿಜ್ಞಾನಿಗಳು ಕೂಡ ಈ ಯೋಜನೆಯಲ್ಲಿ ಭಾಗಿಯಾಗಿದ್ದರು. ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದಾಗ ಈ ಯೋಜನೆಗೆ ತಡೆ ಬಿದ್ದಿತ್ತು. ಆದರೆ, ಚೀನಾ ವಿಜ್ಞಾನಿಗಳು ರಹಸ್ಯವಾಗಿ ಯೋಜನೆ ಮುಂದುವರಿಸಿದ್ದರು. ಬಾವಲಿಯಲ್ಲಿನ ಕೊರೊನಾ ಸಂಗ್ರಹಿಸಿ, ಅದಕ್ಕೆ ಪ್ರೋಟೀನ್ ಸೇರಿಸಿ, ಕೊರೊನಾ ವೈರಸ್ ಹೆಚ್ಚು ಅಪಾಯಕಾರಿಯಾಗುವಂತೆ ಮಾಡಿದ್ದಾರೆ ಎಂದು ಯೂರೋಪ್ ವಿಜ್ಞಾನಿಗಳು ಹೇಳಿದ್ದಾರೆ. ಸಾಮಾನ್ಯ ವೈರಸ್​ಗಳು ಹೆಚ್ಚು ಅಪಾಯಕಾರಿಯಲ್ಲ. ನಾಲ್ಕು ಆಮಿನೋ ಆ್ಯಸಿಡ್​ಗಳು ಒಟ್ಟಿಗೆ ಇರಲ್ಲ. ಆದರೇ, ಕೊರೊನಾ ವೈರಸ್​ನಲ್ಲಿ ನಾಲ್ಕು ಆಮಿನೋ ಆ್ಯಸಿಡ್​ಗಳು ಒಟ್ಟಿಗೆ ಇವೆ. ಹೀಗಾಗಿ ಕೊರೊನಾ ವೈರಸ್ ಚೀನಾದ ಲ್ಯಾಬೋರೇಟರಿಯಲ್ಲೇ ಸೃಷ್ಟಿಯಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಯೂರೋಪ್ ವಿಜ್ಞಾನಿಗಳು ಹೇಳಿದ್ದಾರೆ.

ಕೊರೊನಾ ವೈರಸ್ ಮೂಲದ ಬಗ್ಗೆ ಸಮಗ್ರ ತನಿಖೆಯಾಗಬೇಕೆಂಬ ಅಂತಾರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಈಗ ಮತ್ತಷ್ಟು ಬಲ ಬಂದಿದೆ. ಕಳೆದ ವಾರವೇ ಆಮೆರಿಕಾದ ಅಧ್ಯಕ್ಷ ಜೋಸೆಫ್ ಬೈಡೆನ್ ವೈರಸ್ ಮೂಲದ ಬಗ್ಗೆ ಎರಡು ಪಟ್ಟು ಹೆಚ್ಚಿನ ಶ್ರಮ ವಹಿಸಿ ತನಿಖೆ ನಡೆಸಿ, 90 ದಿನಗಳಲ್ಲಿ ವರದಿ ನೀಡಬೇಕೆಂದು ಆಮೆರಿಕಾದ ಗುಪ್ತಚರ ಸಂಸ್ಥೆ ಸಿಐಎ ಗೆ ಸೂಚಿಸಿದ್ದರು. ವೈರಸ್ ಮೂಲದ ಬಗ್ಗೆ ತನಿಖೆ ನಡೆಸಲು ಇಂಗ್ಲೆಂಡ್ ಕೂಡ ಆಗ್ರಹಿಸಿದೆ. ಭಾರತ ಕೂಡ ಸಮಗ್ರ ತನಿಖೆಗೆ ಆಗ್ರಹಿಸುತ್ತಿದೆ.

ಚೀನಾದ ಲ್ಯಾಬ್​ನಿಂದ ವೈರಸ್ ಸೋರಿಕೆಯ ಸಾಧ್ಯತೆಯೇ ಹೆಚ್ಚು ಎಂದು ಬ್ರಿಟನ್ ಗುಪ್ತಚರ ಇಲಾಖೆ ವರದಿ ಮಾಡಿದೆ. ಲ್ಯಾಬ್​ನಿಂದ ವೈರಸ್ ಸೋರಿಕೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸಮಗ್ರ ತನಿಖೆ ಮಾಡಬೇಕೆಂದು ಬ್ರಿಟನ್​ನ ಲಸಿಕಾ ಸಚಿವ ನದೀಮ್ ಜಾವಯಿ ಒತ್ತಾಯಿಸಿದ್ದಾರೆ. ಈ ಮೊದಲು ಬ್ರಿಟನ್ ದೇಶವು ವುಹಾನ್ ಲ್ಯಾಬ್​ನಿಂದ ವೈರಸ್ ಸೋರಿಕೆ ವಾದವನ್ನು ಅಷ್ಟಾಗಿ ಒಪ್ಪಿರಲಿಲ್ಲ. ಆದರೆ, ಈಗ ಬ್ರಿಟನ್ ಗುಪ್ತಚರ ವಿಭಾಗ ‘ಸೀಕ್ರೆಟ್ ಇಂಟಲಿಜೆನ್ಸ್ ಸರ್ವೀಸ್’ ಸಹ ಲ್ಯಾಬ್​ನಿಂದ ವೈರಸ್ ಸೋರಿಕೆ ಸಾಧ್ಯತೆಯೇ ಹೆಚ್ಚು ಎಂದಿದೆ. ವೈರಸ್ ಮೂಲವನ್ನು ಸರಿಯಾಗಿ ಪತ್ತೆ ಹಚ್ಚದಿದ್ದರೇ, ಇದು ಮತ್ತೆ ಪುನರಾವರ್ತನೆ ಆಗಬಹುದು. ಚೀನಾ ಸುಳ್ಳು ಹೇಳುತ್ತಿದೆ. ಚೀನಾ ಹೇಳುವುದನ್ನು ನಂಬಲು ಸಾಧ್ಯವಿಲ್ಲ ಎಂದು ಸೀಕ್ರೆಟ್ ಇಂಟಲಿಜೆನ್ಸ್ ಸರ್ವೀಸ್ ಹೇಳಿದೆ.

ಆಮೆರಿಕಾದ ವಿದೇಶಾಂಗ ಇಲಾಖೆಯ ಮಾಜಿ ಕಾರ್ಯದರ್ಶಿ ಮೈಕ್ ಪಾಂಪಿಯೋ ಕೂಡ ಚೀನಾದತ್ತಲೇ ವೈರಸ್ ಸೋರಿಕೆ ಬಗ್ಗೆ ಬೊಟ್ಟು ಮಾಡಿದ್ದಾರೆ. ಚೀನಾದ ವುಹಾನ್ ಲ್ಯಾಬ್​ನಲ್ಲಿ ಎರಡು ರೀತಿಯ ಚಟುವಟಿಕೆ ನಡೆಯುತ್ತಿದ್ದವು. ಮಿಲಿಟರಿ ಚಟುವಟಿಕೆಗಳ ಜೊತೆಗೆ ನಾಗರಿಕ ಸಂಶೋಧನೆ ಕೂಡ ನಡೆಯುತ್ತಿತ್ತು. ಲ್ಯಾಬ್​ನಲ್ಲಿ ಏನು ನಡೆಯುತ್ತಿತ್ತು ಎಂದು ಹೇಳಲು ಚೀನಾ ನಿರಾಕರಿಸಿದೆ. ಈ ಸಂಶೋಧನೆಗಳ ಸ್ವರೂಪ ಏನು ಎಂದು ಚೀನಾ ಹೇಳಲು ನಿರಾಕರಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ತಂಡಕ್ಕೂ ವುಹಾನ್ ವೈರಾಲಜಿ ಲ್ಯಾಬ್ ಪ್ರವೇಶಿಸಲು ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಅವಕಾಶ ಕೊಟ್ಟಿಲ್ಲ ಎಂದು ಮೈಕ್ ಪಾಂಪಿಯೋ ಹೇಳಿದ್ದಾರೆ. ಹೀಗಾಗಿ ಈಗ ಮತ್ತೊಮ್ಮೆ ವಿಶ್ವ ಆರೋಗ್ಯ ಸಂಸ್ಥೆಯ ಅಂತಾರಾಷ್ಟ್ರೀಯ ತಜ್ಞರ ತಂಡದಿಂದಲೇ ಕೊರೊನಾ ವೈರಸ್ ಮೂಲದ ಬಗ್ಗೆ ತನಿಖೆಯಾಗಬೇಕೆಂಬ ಒತ್ತಡ ಹೆಚ್ಚಾಗಿದೆ.

ಚೀನಾದ ಸರ್ಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್, ಆಮೆರಿಕದ ವಿರುದ್ಧ ಕಿಡಿಕಾರಿದೆ. ವೈರಸ್ ಮೂಲ ಪತ್ತೆ ಮಾಡಲು ಆಮೆರಿಕ ಸರ್ಕಾರವು ಚೀನಾದ ವಿರುದ್ಧ ದಿಟ್ಟ ಕ್ರಮಗಳ ಮೂಲಕ ಭೂಮಿಕೆ ಸಿದ್ದಪಡಿಸುತ್ತಿದೆ. ಚೀನಾದ ರಾಷ್ಟ್ರೀಯ ಹಿತಾಸಕ್ತಿಗೆ ಅಡ್ಡಿಪಡಿಸುವುದೇ ಆಮೆರಿಕದ ಅಂತಿಮ ಗುರಿ ಎಂದು ಗ್ಲೋಬಲ್ ಟೈಮ್ಸ್ ಸಂಪಾದಕ ಹೂ ಕ್ಸಿಂಜಿನ್ ಹೇಳಿದ್ದಾರೆ.

(Coronavirus Doesnot has credible natural ancestor virus created in Wuhan lab claims new study)

ಇದನ್ನೂ ಓದಿ: ವುಹಾನ್ ಲ್ಯಾಬ್‌ನಿಂದ ಕೊರೊನಾ ವೈರಸ್ ಸೋರಿಕೆಯಾಗಿದೆ.. ಈಗ ಬ್ರಿಟಿನ್ ಇಂಟಲಿಜೆನ್ಸ್‌ ಸಹ ಅದನ್ನೇ ಹೇಳುತ್ತಿದೆ

ಇದನ್ನೂ ಓದಿ: ಸಾಂಕ್ರಾಮಿಕ ರೋಗದಲ್ಲಿ ವುಹಾನ್​ನ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಪಾತ್ರವು ಚೀನಾವನ್ನು ಹೊಣೆಯಾಗಿಸುವ ಮೊದಲ ಹೆಜ್ಜೆ

Follow us on

Related Stories

Most Read Stories

Click on your DTH Provider to Add TV9 Kannada