Covid 19 Vaccine: ಚೀನಾ ಸಹಾಯದೊಂದಿಗೆ ಲಸಿಕೆ ಅಭಿವೃದ್ಧಿ ಪಡಿಸಿದ ಪಾಕಿಸ್ತಾನ; ನಿನ್ನೆ ಉದ್ಘಾಟನೆಯಾದ ‘ಪಾಕ್ವಾಕ್’
ಕೊವಿಡ್ 19ನಿಂದಾದ ಬಿಕ್ಕಟ್ಟಿನ ಸಂದರ್ಭವನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುವ ಅನಿವಾರ್ಯ ಪಾಕಿಸ್ತಾನಕ್ಕೆ ಇದೆ. ಇದಕ್ಕಾಗಿ ನಮ್ಮ ಮಿತ್ರರಾಷ್ಟ್ರ ಚೀನಾದ ಸಹಾಯ ತೆಗೆದುಕೊಂಡಿದ್ದೇವೆ ಎಂದು ಡಾ. ಸುಲ್ತಾನ್ ತಿಳಿಸಿದ್ದಾರೆ.
ನೆರೆರಾಷ್ಟ್ರ ಪಾಕಿಸ್ತಾನದಲ್ಲಿ ಮೊದಲ ಕೊವಿಡ್ 19 ಲಸಿಕೆ ನಿನ್ನೆ (ಜೂ.1) ಬಿಡುಗಡೆಯಾಗಿದೆ. ಪಾಕ್ವಾಕ್ (PakVac) ಎಂದು ಲಸಿಕೆಗೆ ಹೆಸರಿಸಲಾಗಿದೆ. ಪಾಕ್ ತನ್ನ ಮಿತ್ರ ರಾಷ್ಟ್ರ ಚೀನಾದ ಸಹಕಾರದೊಂದಿಗೆ ಈ ಲಸಿಕೆ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದೆ. ಈ ಲಸಿಕೆಯನ್ನು ದೇಶದ ಜನರಿಗೆ ನೀಡಿ ಕೊರೊನಾ ವೈರಸ್ ಪ್ರಸರಣ ಪ್ರಮಾಣವನ್ನು ನಿಯಂತ್ರಣ ಮಾಡುವುದಾಗಿ ಹೇಳಿಕೊಂಡಿದೆ.
ಪಾಕ್ನ ಪ್ರಮುಖ ವೈದ್ಯ ಡಾ. ಫೈಸಲ್ ಸುಲ್ತಾನ್ ಈ ಬಗ್ಗೆ ಮಾತನಾಡಿ, ಕೊವಿಡ್ 19ನಿಂದಾದ ಬಿಕ್ಕಟ್ಟಿನ ಸಂದರ್ಭವನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುವ ಅನಿವಾರ್ಯ ಪಾಕಿಸ್ತಾನಕ್ಕೆ ಇದೆ. ಇದಕ್ಕಾಗಿ ನಮ್ಮ ಮಿತ್ರರಾಷ್ಟ್ರ ಚೀನಾದ ಸಹಾಯ ತೆಗೆದುಕೊಂಡಿದ್ದೇವೆ. ವ್ಯಾಕ್ಸಿನ್ಗೆ ಬೇಕಾದ ಕಚ್ಚಾ ವಸ್ತುಗಳನ್ನು ಚೀನಾ ಒದಗಿಸಿದೆ. ಅಷ್ಟಾದರೂ ನಮಗೆ ಅದನ್ನು ಅಭಿವೃದ್ಧಿ ಪಡಿಸುವುದು ಅಷ್ಟು ಸುಲಭವಾಗಿರಲಿಲ್ಲ ಎಂದು ಲಸಿಕೆ ಉದ್ಘಾಟನೆ ಸಮಾರಂಭದಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸ್ಥಳೀಯವಾಗಿ ಲಸಿಕೆ ಉತ್ಪಾದನೆ ಕಾರ್ಯ ಶುರುವಾಗುವುದಾಗಿಯೂ ತಿಳಿಸಿದ್ದಾರೆ. ಪಾಕಿಸ್ತಾನದ ಪಾಲಿಗೆ ಇದೊಂದು ವಿಶೇಷ ದಿನವೆಂದು ರಾಷ್ಟ್ರೀಯ ಕಮಾಂಡ್ ಮತ್ತು ಕಾರ್ಯಾಚರಣೆ ಕೇಂದ್ರದ (NCOC) ಮುಖ್ಯಸ್ಥ ಆಸಾದ್ ಉಮರ್ ತಿಳಿಸಿದ್ದಾರೆ.
ಪಾಕ್ನಲ್ಲಿ ಸದ್ಯ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ.4ಕ್ಕಿಂತಲೂ ಕಡಿಮೆ ಇದೆ. ಹಾಗೇ, ಬೇರೆ ದೇಶದ ಲಸಿಕೆಯನ್ನು ಖರೀದಿಸಿ ಇದುವರೆಗೆ 7.3 ಮಿಲಿಯನ್ ಜನರಿಗೆ ಲಸಿಕೆ ನೀಡಲಾಗಿದೆ ಎಂದೂ ಪಾಕ್ ತಿಳಿಸಿದೆ.
ಇದನ್ನೂ ಓದಿ: ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ರೇಪ್ ಪ್ರಕರಣ; ಮತ್ತೊಬ್ಬ ಆರೋಪಿಯ ಮೇಲೆ ಫೈರಿಂಗ್