ಸ್ಯಾನ್ ಫ್ರಾನ್ಸಿಸ್ಕೊ: ಸಾಮಾಜಿಕ ಜಾಲತಾಣದ ದೈತ್ಯ ಕಂಪನಿ ಟ್ವಿಟರ್ ಅನ್ನು ಉದ್ಯಮಿ ಎಲಾನ್ ಮಸ್ಕ್ ಸಂಪೂರ್ಣವಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಕಂಪೆನಿಯು ಅಧೀನಕ್ಕೆ ಬಂದ ನಂತರ ಏಕಾಏಕಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ಹಲವರನ್ನು ವಜಾ ಮಾಡಿದ್ದಾರೆ. ಈ ಮೂಲಕ ತಮ್ಮ ಆಡಳಿತ ವೈಖರಿ ಹೇಗಿರುತ್ತದೆ ಎಂಬ ಬಗ್ಗೆ ಎಲ್ಲ ಸಿಬ್ಬಂದಿಗೆ ಸಂದೇಶ ರವಾನಿಸಿದ್ದಾರೆ. ಸಿಇಒ ಪರಾಗ್ ಅಗರ್ವಾಲ್ ಅವರೊಂದಿಗೆ ಟ್ವಿಟರ್ನ ಸಿಎಫ್ಒ ನೆಡ್ ಸೆಗಲ್ ಹಾಗೂ ನೀತಿ ನಿರೂಪಣೆ-ವಿಶ್ವಾಸಾರ್ಹತೆ ಮತ್ತು ಸುರಕ್ಷಾ ವಿಭಾಗದ ಮುಖ್ಯಸ್ಥರಾದ ವಿಜಯಾ ಗಡ್ಡೆ ಅವರನ್ನು ಮಸ್ಕ್ ವಜಾ ಮಾಡಿದ್ದಾರೆ ಎಂದು ‘ರಾಯಿಟರ್ಸ್’ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಮಸ್ಕ್ ಅವರು ಟ್ವಿಟರ್ ಖರೀದಿ ಪ್ರಸ್ತಾವದಿಂದ ಹಿಂದೆ ಸರಿಯಲು ಯತ್ನಿಸಿದಾಗ ಅಗರ್ವಾಲ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದಲ್ಲಿ ಹಿನ್ನಡೆಯಾಗಬಹುದು ಎಂಬ ಭೀತಿಯಿಂದ ಮಸ್ಕ್ ಟ್ವಿಟರ್ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿದರು. ಟ್ವಿಟರ್ ಖರೀದಿ ಪ್ರಕ್ರಿಯೆಗೆ ನ್ಯಾಯಾಲಯವು ವಿಧಿಸಿದ್ದ ಗಡುವು ಪೂರ್ಣಗೊಳ್ಳಲು ಕೆಲವೇ ಗಂಟೆಗಳು ಬಾಕಿ ಇರುವಾಗ ಈ ಮಹತ್ವದ ಬೆಳವಣಿಗೆ ನಡೆದಿದೆ.
ಟ್ವಿಟರ್ ಖರೀದಿ ಕುರಿತು ಗುರುವಾರ ಟ್ವೀಟ್ ಮಾಡಿದ್ದ ಮಸ್ಕ್, ‘ನಾಗರಿಕತೆಯ ಭವಿಷ್ಯಕ್ಕೆ ಒಂದು ಆರೋಗ್ಯಕರ ವೇದಿಕೆ ಬೇಕಿದೆ. ಎಲ್ಲರೂ ಬಳಸಬಹುದಾದ ಸಾಮಾನ್ಯ ಡಿಜಿಟಲ್ ಪೇಟೆಯಲ್ಲಿ ಹಲವು ನಂಬಿಕೆಗಳು, ಸಿದ್ಧಾಂತಗಳು ಇರುವ ಜನರು ಆರೋಗ್ಯಕರವಾಗಿ ಚರ್ಚಿಸಲು ಅವಕಾಶ ಇರುತ್ತದೆ’ ಎಂದು ಹೇಳಿದ್ದರು. ಟ್ವಿಟರ್ ಮುನ್ನಡೆಸುವ ಕುರಿತು ತಮ್ಮ ಆಲೋಚನೆಗಳನ್ನು ಉದ್ಯೋಗಿಗಳೊಂದಿಗೆ ಹಂಚಿಕೊಳ್ಳಲೆಂದು ಟ್ವಿಟರ್ ಕಚೇರಿಯ ಕಾಫಿ ಬಾರ್ನಲ್ಲಿ ಸಿಬ್ಬಂದಿಯೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದರು.
‘ಟ್ವಿಟರ್ನಲ್ಲಿ ನಕಲಿ ಖಾತೆಗಳಿಗೆ ಕಡಿವಾಣ ಹಾಕಬೇಕಿದೆ. ಸಾರ್ವಜನಿಕವಾಗಿ ಯಾವುದೇ ಪೋಸ್ಟ್ಗಳು ಹೇಗೆ ಕಾಣಿಸುತ್ತವೆ’ ಎಂಬದನ್ನು ಪತ್ತೆ ಮಾಡಲು ಟ್ವಿಟರ್ನ ಆಲ್ಗರಿದಂ ಮಾರ್ಪಡಿಸಬೇಕು ಎಂದು ಮಸ್ಕ್ ಪ್ರತಿಪಾದಿಸಿದ್ದರು. ಟ್ವಿಟರ್ ವೇದಿಕೆಯು ದ್ವೇಷ ಮತ್ತು ವಿಭಜನೆಯ ‘ಎಕೊ ಛೇಂಬರ್’ (ಪ್ರತಿಧ್ವನಿ ಪೆಟ್ಟಿಗೆ) ಆಗಬಾರದು. ಹಾಗೆಂದು ವಿಪರೀತ ಸೆನ್ಸಾರ್ಶಿಪ್ ಇರಬಾರದು’ ಎಂದು ಮಸ್ಕ್ ಪ್ರತಿಪಾದಿಸಿದ್ದರು.
ತಮ್ಮ ಸುಪರ್ದಿಗೆ ಬಂದ ನಂತರ ಟ್ವಿಟರ್ ಅನ್ನು ಹೇಗೆ ನಿರ್ವಹಿಸಲಾಗುವುದು ಎಂಬ ಬಗ್ಗೆ ಮಸ್ಕ್ ಯಾವುದೇ ವಿವರ ಬಹಿರಂಗಪಡಿಸಲಿಲ್ಲ. ಬದಲಿಗೆ ‘ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಲಾಗುವುದು’ ಎಂದು ಹೇಳಿ ಸುಮ್ಮನಾಗಿದ್ದರು. ಟ್ವಿಟರ್ನ ಸುಮಾರು 7,500 ಉದ್ಯೋಗಿಗಳಲ್ಲಿ ಈ ಹೇಳಿಕೆಯು ಉದ್ಯೋಗ ಕಳೆದುಕೊಳ್ಳುವ ಭೀತಿ ಹುಟ್ಟಿಸಿದೆ. ‘ನಾನೇ ಇನ್ನಷ್ಟು ಕಾಸು ಸಂಪಾದಿಸಬೇಕೆಂದು ಟ್ವಿಟರ್ ಖರೀದಿಸಲಿಲ್ಲ. ನಾನು ತುಂಬಾ ಪ್ರೀತಿಸುವ ಮನುಕುಲಕ್ಕೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ’ ಎಂದು ಮಸ್ಕ್ ಹೇಳಿದ್ದರು. ತಾವು ಟ್ವಿಟರ್ ಖರೀದಿಸಿದ್ದು ಏಕೆ ಎಂದು ವಿವರಿಸಲು ಜಾಹೀರಾತುದಾರರಿಗೆ ಎರಡು ಪುಟಗಳ ಪತ್ರವನ್ನು ಮಸ್ಕ್ ಬರೆದಿದ್ದಾರೆ.
Dear Twitter Advertisers pic.twitter.com/GMwHmInPAS
— Elon Musk (@elonmusk) October 27, 2022
ಡೀಲ್ ಮುಗಿಯುವ ಮೊದಲೇ ಟ್ವಿಟರ್ ಬಯೋ ಬದಲಿಸಿದ್ದ ಮಸ್ಕ್
ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ತಮ್ಮ ಟ್ವೀಟ್ ಖಾತೆಯಲ್ಲಿರುವ ವೈಯಕ್ತಿಕ ವಿವರಗಳನ್ನು ನಿನ್ನೆಯಷ್ಟೇ (ಅ 27) ಬದಲಿಸಿದ್ದರು. 44 ಶತಕೋಟಿ ಡಾಲರ್ ಮೊತ್ತದ ಟ್ವೀಟ್ ಖರೀದಿ ಪ್ರಕ್ರಿಯೆ ಮುಗಿಯುವ ಮೊದಲೇ ತಮ್ಮನ್ನು ತಾವು ‘Chief Twit’ (ಟ್ವಿಟರ್ ಮುಖ್ಯಸ್ಥ) ಎಂದು ಕರೆದುಕೊಂಡಿದ್ದಾರೆ. ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಸ್ಯಾನ್ಫ್ರಾನ್ಸಿಸ್ಕೊ ನಗರದಲ್ಲಿರುವ ಟ್ವಿಟರ್ ಕಂಪನಿಯ ಕೇಂದ್ರ ಕಚೇರಿಗೆ ಬುಧವಾರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಕೈಲಿ ಕೈತೊಳೆಯುವ ಸಿಂಕ್ ಒಂದನ್ನು ಹಿಡಿದುಕೊಂಡು ಟ್ವಿಟರ್ ಕಚೇರಿಗೆ ತಂದರು. ‘ಟ್ವಿಟರ್ ಕಚೇರಿಗೆ ಹೋಗುತ್ತಿದ್ದೇನೆ. ಅದು ನನ್ನೊಂದಿಗೆ ಬೆರೆತುಕೊಳ್ಳಲಿ’ (Entering Twitter HQ – let that sink in!) ಎಂದು ಈ ವಿಡಿಯೊಗೆ ಒಕ್ಕಣೆ ಬರೆದುಕೊಂಡಿದ್ದರು.
At Twitter headquarters’ coffee bar, @elonmusk pic.twitter.com/vy5Cw7zttf
— Walter Isaacson (@WalterIsaacson) October 27, 2022
the bird is freed
— Elon Musk (@elonmusk) October 28, 2022
ಈ ಮಧ್ಯೆ, ಟ್ವಿಟರ್ ಖರೀದಿ ಅಧಿಕೃತವಾದ ಬಳಿಕ ‘ದ ಬರ್ಡ್ ಈಸ್ ಫ್ರೀಡ್’ ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.
Published On - 7:42 am, Fri, 28 October 22