ಉಕ್ರೇನ್‌ನ ಸುಮಿಯಲ್ಲಿ ಸ್ಥಳಾಂತರ ಪ್ರಕ್ರಿಯೆ ಸದ್ಯ ರದ್ದಾಗಿದೆ ಎಂದ ಭಾರತೀಯ ವಿದ್ಯಾರ್ಥಿಗಳು

| Updated By: ರಶ್ಮಿ ಕಲ್ಲಕಟ್ಟ

Updated on: Mar 07, 2022 | 6:53 PM

ಶನಿವಾರದಿಂದಲೇ ಸ್ಥಳಾಂತರಿಸುವಿಕೆಗಾಗಿ ಕಾಯುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದರು. ಪ್ರಸ್ತುತ ನಡೆಯುತ್ತಿರುವ ಶೆಲ್ ದಾಳಿ, ಹಿಂಸಾಚಾರ ಮತ್ತು ಸಾರಿಗೆ ಕೊರತೆ ಪ್ರಮುಖ ಸವಾಲುಗಳಾಗಿವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ

ಉಕ್ರೇನ್‌ನ ಸುಮಿಯಲ್ಲಿ ಸ್ಥಳಾಂತರ ಪ್ರಕ್ರಿಯೆ ಸದ್ಯ ರದ್ದಾಗಿದೆ ಎಂದ ಭಾರತೀಯ ವಿದ್ಯಾರ್ಥಿಗಳು
ಸುಮಿಯಲ್ಲಿರುವ ವಿದ್ಯಾರ್ಥಿಗಳು
Follow us on

ದೆಹಲಿ: ಉಕ್ರೇನ್‌ನ ಸುಮಿಯಲ್ಲಿ(Sumy )ಸಿಲುಕಿರುವ ಸುಮಾರು 700 ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ ಕಾರ್ಯ ಇಂದು ಮತ್ತೆ ರದ್ದಾಗಿದೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. ಉಕ್ರೇನ್‌ನ 4 ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮವನ್ನು ರಷ್ಯಾ ಸೇನೆ ಘೋಷಣೆ ಮಾಡಿದೆ. ಉಕ್ರೇನ್ ರಾಜಧಾನಿ ಕೀವ್(Kyiv), ಖಾರ್ಕಿವ್, ಸುಮಿ ನಗರ ಮರಿಯುಪೋಲ್‌ನಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಲಾಗಿದ್ದು ಈ ಕಾರಣದಿಂದಾಗಿ ಸ್ಥಳಾಂತರ ಪ್ರಕ್ರಿಯೆಯನ್ನು ಸದ್ಯ ರದ್ದು ಮಾಡಲಾಗಿದೆ.  ಶನಿವಾರದಿಂದಲೇ ಸ್ಥಳಾಂತರಿಸುವಿಕೆಗಾಗಿ ಕಾಯುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದರು. ಪ್ರಸ್ತುತ ನಡೆಯುತ್ತಿರುವ ಶೆಲ್ ದಾಳಿ, ಹಿಂಸಾಚಾರ ಮತ್ತು ಸಾರಿಗೆ ಕೊರತೆ ಪ್ರಮುಖ ಸವಾಲುಗಳಾಗಿವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ರಾಯಭಾರ ಕಚೇರಿಯ ಭಾರತೀಯ ತಂಡವು ಪೋಲ್ಟವಾದಲ್ಲಿ ನಿಂತಿದೆ.  ಸುಮಿಯಿಂದ ಸುಮಾರು ಮೂರು ಗಂಟೆಗಳಷ್ಟು ಪ್ರಯಾಣಿಸಿದರೆ ಪೋಲ್ಟವಾ ಸಿಗುತ್ತದೆ. ಶನಿವಾರದಂದು  ಕೊರೆಯುವ ಚಳಿ, ಖಾಲಿಯಾಗುತ್ತಿರುವ ಆಹಾರ ಮತ್ತು ನೀರಿನ ಸರಬರಾಜುಗಳನ್ನು ನಿಭಾಯಿಸಲು ಸಾಧ್ಯವಾಗದೆ ವಿದ್ಯಾರ್ಥಿಗಳು 50 ಕಿಮೀ ದೂರದಲ್ಲಿರುವ ರಷ್ಯಾದ ಗಡಿಗೆ ಅಪಾಯಕಾರಿ ಪ್ರಯಾಣವನ್ನು ಮಾಡಲು ನಿರ್ಧರಿಸಿದ್ದೇವೆ ಎಂದು ವಿಡಿಯೊಗಳನ್ನು ಹಂಚಿಕೊಂಡಿದ್ದರು. ಆದರೆ ಸರ್ಕಾರ  ಅವರನ್ನು ಸಂಪರ್ಕಿಸಿ “ಅನಗತ್ಯ ಅಪಾಯಗಳನ್ನು ತಪ್ಪಿಸಿ” ಎಂದು ಕೇಳಿಕೊಂಡಿರುವುದಾಗಿ ಹೇಳಿದೆ. ರಷ್ಯಾದ ಸ್ಥಳಾಂತರಿಸುವ ಯೋಜನೆಯಡಿ, ಕೀವ್​​ನಿಂದ ಕಾರಿಡಾರ್ ಬೆಲಾರಸ್‌ಗೆ ದಾರಿ ಮಾಡಿಕೊಡುತ್ತದೆ.

ರಷ್ಯಾದ ಸರ್ಕಾರಿ ಸ್ವಾಮ್ಯದ ಆರ್ ಐಎ ನ್ಯೂಸ್ ಏಜೆನ್ಸಿ ಪ್ರಕಟಿಸಿದ ನಕ್ಷೆಗಳ ಪ್ರಕಾರ ಖಾರ್ಕಿವ್‌ನಿಂದ ನಾಗರಿಕರು ರಷ್ಯಾಕ್ಕೆ ಮಾತ್ರ ಹೋಗಲು ಅನುಮತಿಸಲಾಗುವುದು ಎಂದಿದೆ. ಉಕ್ರೇನಿಯನ್ನರನ್ನು ಕೀವ್ ನಿಂದ ರಷ್ಯಾಕ್ಕೆ ಕರೆದೊಯ್ಯಲು ಏರ್‌ಲಿಫ್ಟ್‌ಗಳನ್ನು ಪ್ರಾರಂಭಿಸುವುದಾಗಿ ರಷ್ಯಾ ಹೇಳಿದೆ.

ಆದಾಗ್ಯೂ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ವಕ್ತಾರರು, ಈ ಕ್ರಮವನ್ನು “ಸಂಪೂರ್ಣವಾಗಿ ಅನೈತಿಕ” ಎಂದು ಕರೆದರು ಮತ್ತು “ಟೆಲಿವಿಷನ್ ಚಿತ್ರವನ್ನು ರಚಿಸಲು ಜನರ ದುಃಖವನ್ನು ಬಳಸಲು” ರಷ್ಯಾ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

“ಅವರು ಉಕ್ರೇನ್‌ನ ಪ್ರಜೆಗಳು, ಅವರು ಉಕ್ರೇನ್ ಪ್ರದೇಶಕ್ಕೆ ಸ್ಥಳಾಂತರಿಸುವ ಹಕ್ಕನ್ನು ಹೊಂದಿರಬೇಕು” ಎಂದು ವಕ್ತಾರರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದರು. ಅಧ್ಯಕ್ಷ ಪುಟಿನ್ ಅವರೊಂದಿಗಿನ 50 ನಿಮಿಷಗಳ ದೂರವಾಣಿ ಕರೆಯಲ್ಲಿ, ಪಿಎಂ ಮೋದಿ ಅವರು ಸುಮಿಯಿಂದ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಅವರ ಸುರಕ್ಷಿತ ಸ್ಥಳಾಂತರಕ್ಕೆ ಸಾಧ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ಅಧ್ಯಕ್ಷ ಪುಟಿನ್ ಪ್ರಧಾನಿ ಮೋದಿ ಅವರಿಗೆ ಭರವಸೆ ನೀಡಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಅದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರಿಗೆ ಕರೆ ಮಾಡಿದ್ದರು. ಉಕ್ರೇನ್‌ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಸಹಾಯ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿ ಅಧ್ಯಕ್ಷ ಝೆಲೆನ್ಸ್‌ಕಿ ಅವರಿಗೆ ಧನ್ಯವಾದ ಸಲ್ಲಿಸಿದರು. ಸುಮಿಯಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಪ್ರಯತ್ನಗಳಲ್ಲಿ ಬೆಂಬಲವನ್ನು ಕೋರಿದರು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಚಿರಂಜೀವಿ ಸಿನಿಮಾ ಪ್ರೇರಣೆಯಿಂದ ಉಕ್ರೇನ್​ನಲ್ಲಿ ಪ್ರಾಣಿಗಳ ಸಾಕುತ್ತಿರುವ ಹೈದರಾಬಾದ್ ವೈದ್ಯ ಜಪ್ಪಯ್ಯ ಅಂದರೂ ವಾಪಸ್​ ಬರೋಲ್ವಂತೆ!

Published On - 6:48 pm, Mon, 7 March 22