ರಷ್ಯಾ ಮಿಲಿಟರಿ ವಾಹನಗಳಲ್ಲಿ ಬಳಕೆಯಾಗುತ್ತಿರುವ Z ಸಂಕೇತದ ಅರ್ಥವೇನು
ರಷ್ಯಾದ ಸಿದ್ಧಾಂತ ಮತ್ತು ರಾಷ್ಟ್ರೀಯ ಅಸ್ಮಿತೆಯನ್ನು ಪ್ರತಿಬಿಂಬಿಸುವ ಸಂಕೇತವಾಗಿ Z ಅಕ್ಷರವನ್ನು ಬಳಸಲು ರಷ್ಯಾ ಸರ್ಕಾರ ನಿರ್ಧರಿಸಿದಂತಿದೆ. ಉಕ್ರೇನ್ ಮೇಲಿನ ಆಕ್ರಮಣವನ್ನು ಬೆಂಬಲಿಸುವವರು ಈ ಸಂಕೇತ ಬಳಸುತ್ತಿದ್ದಾರೆ.
ಉಕ್ರೇನ್ ಮೇಲಿನ ಆಕ್ರಮಣಕ್ಕೆಂದು ರಷ್ಯಾ ಬಳಸುತ್ತಿರುವ ಸೇನಾ ವಾಹನಗಳ ಮೇಲೆ ಎದ್ದು ಕಾಣುವಂತೆ ಇಂಗ್ಲಿಷ್ನ ಝೆಡ್ (Z) ಸಂಕೇತವನ್ನು ಬಳಸಲಾಗುತ್ತಿದೆ. ಇದರ ಅರ್ಥ ಏನು ಎಂಬ ಬಗ್ಗೆ ವಿಶ್ವದ ಹಲವೆಡೆ ಕುತೂಹಲ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿವೆ. ಉಕ್ರೇನ್ನ ಕೀವ್ ಮತ್ತು ಇತರ ನಗರಗಳಲ್ಲಿ ಇಂಥದ್ದೇ ವಾಹನಗಳು ಸಂಚರಿಸುತ್ತಿವೆ. ರಷ್ಯಾ ಪರವಾಗಿರುವ ಪ್ರತಿಭಟನಾಕಾರರು ಸಹ Z ಸಂಕೇತರವಿರುವ ಟೀಶರ್ಟ್ಗಳನ್ನು ತೊಟ್ಟು ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಷ್ಯನ್ ಭಾಷೆಯ ವಿದ್ವಾಂಸ ಗಾಲಿನಾ ಸ್ಟಾರೊವೊಟೊವಾ ಈ ಸಂಕೇತವನ್ನು ಎರಡು ರೀತಿಯಲ್ಲಿ ಅರ್ಥೈಸಿದ್ದಾರೆ. Z ಎನ್ನುವುದು ‘ಝಾ ಪೊಬೆಡಿ’ (Za pobedy) ಎನ್ನುವುದರ ಸಂಕ್ಷಿಪ್ತ ರೂಪ. ಇದರ ಮತ್ತೊಂದು ಅರ್ಥ ‘ಝಾಪಡ್’ (Zapad) ಎನ್ನುತ್ತಾರೆ ಅವರು. ಝಾ ಪೊಬೆಡಿ ಎಂದರೆ ‘ಗೆಲುವಿಗಾಗಿ’ ಎಂದು ಅರ್ಥ. ಝಾಪಡ್ ಎಂದರೆ ‘ಪಶ್ಚಿಮ’ ಎಂದು ಅರ್ಥ. ಈ ಎರಡೂ ಅರ್ಥಗಳನ್ನು ವಿಶ್ಲೇಷಿಸಿದರೆ ‘ಪಶ್ಚಿಮದತ್ತ ವಿಜಯಕ್ಕಾಗಿ ಮುನ್ನಡೆ’ ಎಂಬ ಭಾವನೆ ಬರುತ್ತದೆ ಎಂದು ರಷ್ಯನ್ ಭಾಷಿಕರು ಅಭಿಪ್ರಾಯಪಡುತ್ತಿದ್ದಾರೆ.
ರಷ್ಯಾದ ಸಿದ್ಧಾಂತ ಮತ್ತು ರಾಷ್ಟ್ರೀಯ ಅಸ್ಮಿತೆಯನ್ನು ಪ್ರತಿಬಿಂಬಿಸುವ ಸಂಕೇತವಾಗಿ Z ಅಕ್ಷರವನ್ನು ಬಳಸಲು ರಷ್ಯಾ ಸರ್ಕಾರ ನಿರ್ಧರಿಸಿದಂತಿದೆ. ಉಕ್ರೇನ್ ಮೇಲಿನ ಆಕ್ರಮಣವನ್ನು ವಿರೋಧಿಸುತ್ತಿರುವ ಜನರು ಮತ್ತು ದೇಶಗಳು ಇರುವಂತೆಯೇ, ಆಕ್ರಮಣವನ್ನು ಬೆಂಬಲಿಸುವ ದೇಶ ಮತ್ತು ಜನರೂ ಇದ್ದಾರೆ. ಅವರಿಗೆ ಬೆಂಬಲ ನೀಡುವುದರ ಸಂಕೇತವಾಗಿ Z ಕಂಡುಬಂದಿದೆ. ಯುದ್ಧಭೂಮಿಯಲ್ಲಿ ಸ್ವಪಕ್ಷೀಯರೇ ಗುಂಡು ಹಾರಿಸುವುದನ್ನು ತಪ್ಪಿಸಲೆಂದು ರಷ್ಯಾ ಈ ಸಂಕೇತ ಬಳಸುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಸ್ಥಳೀಯ ಮಿಲಿಟರಿ ಘಟಕಗಳು ಪರಸ್ಪರ ಗುರುತಿಗೆಂದು ಇಟ್ಟುಕೊಂಡಿರುವ ಸಂಕೇತಾಕ್ಷರ ಎಂದು ರಷ್ಯಾದ ಚಿಂತಕರ ಚಾವಡಿಯ ಸದಸ್ಯರೂ ಆಗಿರುವ ಪ್ರೊ ಮೈಕೆಲ್ ಕ್ಲಾರ್ಕ್ ಹೇಳುತ್ತಾರೆ.
ಈ ಸಂಕೇತ ಮೊದಲು ಕಂಡುಬಂದಿದ್ದು ಎಲ್ಲಿ?
ಕಳೆದ ಫೆಬ್ರುವರಿ 22ರಂದು Z ಸಂಕೇತ ಹೊತ್ತ ಮಿಲಿಟರಿ ವಾಹನಗಳು ಮೊದಲ ಬಾರಿಗೆ ರಷ್ಯಾದಿಂದ ಉಕ್ರೇನ್ನ ಡೊನೆಟ್ಸ್ಕ್ ಪ್ರದೇಶ ಪ್ರವೇಶಿಸಿದಾಗ ಅವುಗಳ ಮೇಲೆ Z ಸಂಕೇತ ಕಾಣಿಸಿಕೊಂಡಿತ್ತು. ಅದಾಗಲೇ ಉಕ್ರೇನ್ ಪ್ರವೇಶಿಸಿರುವ ರಷ್ಯನ್ ಪದಾತಿ ದಳಗಳಿಗೆ ತಮ್ಮ ದೇಶದ ವಾಹನಗಳ ಗುರುತು ಸಿಗಲೆಂದು ಈ ಸಂಕೇತ ಬಳಕೆಯಾಯಿತು ಎಂದೂ ಕೆಲವರು ಹೇಳಿದ್ದಾರೆ. 2014ರಲ್ಲಿ ಕ್ರಿಮಿಯಾ ಪ್ರಸ್ಥಭೂಮಿ ಪ್ರವೇಶಿಸಿದ ರಷ್ಯಾ ವಾಹನಗಳ ಮೇಲೆಯೂ Z ಸಂಕೇತ ಕಂಡುಬಂದಿತ್ತು.
Z ಸಂಕೇತದ ಜೊತೆಗೆ ರಷ್ಯನ್ ಮಿಲಿಟರಿ ವಾಹನಗಳ ಮೇಲೆ ಅಂಚಿನಲ್ಲಿ ಎರಡು ಗೆರೆಗಳು, ಮೂರು ಚುಕ್ಕೆಗಳ ಸುತ್ತ ವೃತ್ತ ಹಾಗೂ ಒಂದು ಸಣ್ಣ ತ್ರಿಕೋನದ ಸುತ್ತ ದೊಡ್ಡ ತ್ರಿಕೋನ ಇರುವ ಸಂಕೇತಗಳನ್ನು ಹೊತ್ತ ವಾಹನಗಳೂ ಉಕ್ರೇನ್ ಪ್ರವೇಶಿಸಿವೆ. ಈ ಸಂಕೇತಗಳ ಬಳಕೆಯ ಅರ್ಥವೇನು ಎಂಬುದರ ಬಗ್ಗೆ ಈವರೆಗೆ ರಷ್ಯಾದ ಅಧಿಕಾರಿಗಳೂ ಏನನ್ನೂ ಹೇಳಿಲ್ಲ.
ಉಕ್ರೇನ್ನ ಸದ್ಯದ ಪರಿಸ್ಥಿತಿ ಏನು?
ಉಕ್ರೇನ್ನಲ್ಲಿ ರಷ್ಯಾ ಇದೀಗ ಮಾನವೀಯ ಕಾರಿಡಾರ್ಗಳನ್ನು ಘೋಷಿಸಿ, ಉಕ್ರೇನ್ ಮತ್ತು ಇತರ ದೇಶಗಳ ನಾಗರಿಕರ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸಿದೆ. ಆದರೆ ರಷ್ಯಾದ ಘೋಷಣೆಯನ್ನು ಉಕ್ರೇನ್ ಅನುಮಾನಿಸುತ್ತಿದೆ. ಉಕ್ರೇನ್ನಿಂದ ರಷ್ಯಾ ಮತ್ತು ಬೆಲರೂಸ್ ದೇಶಗಳಿಗೆ ಮಾತ್ರವೇ ತೆರಳಲು ಅನುಕೂಲವಾಗುವಂತೆ ಕಾರಿಡಾರ್ಗಳನ್ನು ರೂಪಿಸಲಾಗಿದೆ. ಅಲ್ಲಿಗೆ ಹೋಗುವ ನಾಗರಿಕರಿಗೆ ಮುಂದಿನ ದಿನಗಳಲ್ಲಿ ಭದ್ರತೆಯ ಖಾತ್ರಿ ಇರುವುದಿಲ್ಲ ಎಂದು ಉಕ್ರೇನ್ ಶಂಕಿಸಿದೆ.
ಬೆಲರೂಸ್ನಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವಣ ಮೂರನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. ಉಕ್ರೇನ್ ಮೇಲೆ ರಷ್ಯಾದ ದಾಳಿ ನಡೆದ ನಂತರ ಈವರೆಗೆ ಸುಮಾರು 15 ಲಕ್ಷ ಜನರು ದೇಶ ಬಿಟ್ಟು ತೆರಳಿದ್ದಾರೆ. 2ನೇ ವಿಶ್ವಯುದ್ಧದ ನಂತರ ಯೂರೋಪ ಮತ್ತೊಂದು ಅತಿದೊಡ್ಡ ಮಾನವೀಯ ಬಿಕ್ಕಟ್ಟಿಗೆ ಸಾಕ್ಷಿಯಾಗಿದೆ.
“Z” is a letter that Russian Military are putting on their vehicles departing to Ukraine. Some interpret “Z” as “Za pobedy” (for victory). Others – as “Zapad” (West). Anyway, this symbol invented just a few days ago became a symbol of new Russian ideology and national identity pic.twitter.com/iWuBPhhdEb
— Kamil Galeev (@kamilkazani) March 6, 2022
ಇದನ್ನೂ ಓದಿ: ರಷ್ಯಾ ಮತ್ತು ಉಕ್ರೇನ್ ನಡುವೆ ಮಧ್ಯಸ್ಥಿಕೆಗೆ ಮುಂದಾದ ಭಾರತ: ಪುಟಿನ್ ಮತ್ತು ಝೆಲೆನ್ಸ್ಕಿ ಮಧ್ಯೆ ಸಂಧಾನಕ್ಕೆ ಮೋದಿ ಪ್ರಸ್ತಾವ
Published On - 10:58 am, Tue, 8 March 22