ಕೊರೊನಾ ವೈರಸ್ನಿಂದ ನಲುಗಿರುವ ಇಂಗ್ಲೆಂಡ್ಗೆ ಮತ್ತೊಂದು ಆಘಾತ ಎದುರಾಗಿದೆ. ಯುಕೆಯ ಖ್ಯಾತ ಸ್ಯಾಂಡ್ವಿಚ್ ಕಂಪನಿ ಗ್ರೀನ್ಕೋರ್ ಕಂಪನಿಯಲ್ಲಿ ಸುಮಾರು 300 ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇರೋದು ಪತ್ತೆಯಾಗಿದೆ. ಸ್ಯಾಂಡ್ವಿಚ್ ಸರಬರಾಜು ಮಾಡಿದವರು ಮತ್ತು ಖರೀದಿಸಿದವರಿಗೂ ಈಗ ಆತಂಕ ಶುರುವಾಗಿದೆ. ಮತ್ತಷ್ಟು ಸಿಬ್ಬಂದಿಯನ್ನ ಕೋವಿಡ್ ಟೆಸ್ಟ್ ಮಾಡಿಸುವುದಾಗಿ ಸಂಸ್ಥೆ ಹೇಳಿದೆ.
ಕೊರೊನಾ ಪತ್ತೆಗೆ ಬಾವಲಿ ಬಳಕೆ!
ವಿಶ್ವದಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಆದ್ರೆ, ಇದರ ಮೂಲ ಚೀನಾದ ವುಹಾನ್ ಆಂತಾ ಗೊತ್ತಾದರೂ ಸಹ, ಈವರೆಗೂ ವೈರಸ್ ಹುಟ್ಟಿದ್ದು ಹೇಗೆ ಅನ್ನೋದನ್ನ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹೀಗಾಗಿ, ಥಾಯ್ಲೆಂಡ್ನಲ್ಲಿ ಕೊರೊನಾ ಸೋಂಕನ್ನ ಪತ್ತೆ ಹಚ್ಚುವ ಸಲುವಾಗಿ ಕೆಲ ಸಂಶೋಧಕರು ಗುಹೆಗಳಿಗೆ ತೆರಳಿ ಬಾವಲಿಗಳನ್ನ ಹಿಡಿಯಲು ಟ್ರಕ್ಕಿಂಗ್ ನಡೆಸುತ್ತಿದ್ದಾರಂತೆ.
ಕೊರೊನಾ ‘ವಿಶ್ವ’ರೂಪ
ಕೊರೊನಾ ವೈರಸ್ ವಿಶ್ವದಾದ್ಯಂತ ತನ್ನ ಕಬಂಧ ಬಾಹುಗಳನ್ನ ಚಾಚುತ್ತಲೇ ಇದೆ. ದೇಶದಲ್ಲಿ 2,10,81,638 ಜನರಿಗೆ ಸೋಂಕು ವಕ್ಕರಿಸಿಕೊಂಡಿದ್ದು, 7,53,479 ಜನರು ಜೀವ ಕಳೆದುಕೊಂಡಿದ್ದಾರೆ. ಪ್ರಸ್ತುತ 64,16,402 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1,39,11,757 ಜನರು ವೈರಸ್ ವಿರುದ್ಧ ಹೋರಾಡಿ ಗುಣಮುಖರಾಗಿದ್ದಾರೆ.
ರಷ್ಯಾ ವ್ಯಾಕ್ಸಿನ್ ಬಳಸಲಿದೆ ಫಿಲಿಪೈನ್ಸ್
ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ರಷ್ಯಾ ವ್ಯಾಕ್ಸಿನ್ ಸಂಶೋಧಿಸಿದೆ. ಸದ್ಯ ಇದರ ಪ್ರಾಯೋಗಿಕ ಹಂತದಲ್ಲಿ ಜಾರಿಯಲ್ಲಿದೆ. ಆದ್ರೆ, ಇದಕ್ಕೆ ಜಗತ್ತಿನಾದ್ಯಂತ ವಿರೋಧ ವ್ಯಕ್ತವಾಗಿದೆ. ಆದ್ರೆ, ಫಿಲಿಪೈನ್ಸ್ ಮಾತ್ರ ಅಕ್ಟೋಬರ್ನಿಂದ ತನ್ನ ದೇಶದಲ್ಲಿ ಪ್ರಾಯೋಗಿಕವಾಗಿ ವ್ಯಾಕ್ಸಿನ್ ಲಸಿಕೆ ಹಾಕಲು ಮುಂದಾಗಿದೆ. ಅಧ್ಯಕ್ಷ ಈ ಬಗ್ಗೆ ಸುಳಿವು ನೀಡಿದ್ದು, ರಷ್ಯಾ ವ್ಯಾಕ್ಸಿನ್ ಮೇಲೆ ಅಪಾರ ನಂಬಿಕೆ ಹೊಂದಿದ್ದಾರಂತೆ.
ಬಿಡನ್ ಮೇಲೆ ಟ್ರಂಪ್ ವಾಗ್ದಾಳಿ
ಅಮೆರಿಕದಲ್ಲಿ ಕೊರೊನಾ ವೈರಸ್ ಅಟ್ಟಹಾಸದ ಮಧ್ಯೆಯೂ ರಾಜಕೀಯ ಜಿದ್ದಾಜಿದ್ದು ನಡೀತಿದೆ. ಇದ್ರ ಮಧ್ಯೆ ಇನ್ನು ಮೂರು ತಿಂಗಳು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಹೇಳಿದ್ದಾರೆ. ಆದ್ರೆ ಇದೇ ವಿಚಾರವಾಗಿ ಡೆಮೊಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೊ ಬಿಡನ್, ಮಾಸ್ಕ್ ವಿಚಾರವನ್ನೂ ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಲೇಷಿಯಾ ಜೈಲಲ್ಲೂ ಸೋಂಕು!
ಮಲೇಷಿಯಾದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ಸೋಂಕಿತರ ಸಂಖ್ಯೆ 9 ಸಾವಿರದ ಗಡಿ ದಾಟಿದೆ. ಇದ್ರ ಮಧ್ಯೆ ಮಲೇಷಿಯಾದ ಜೈಲಿನಲ್ಲೂ ಕೊರೊನಾ ಸೋಂಕಿನ ಭೀತಿ ಶುರುವಾಗಿದೆ. ಭಾರತೀಯ ಮೂಲದ ರೆಸ್ಟೋರೆಂಟ್ ಮಾಲೀಕನಿಗೆ ಕೊರೊನಾ ಬಂದಿದೆ. ಹೋಂ ಕ್ವಾರಂಟೈನ್ ಉಲ್ಲಂಘಿಸಿದ್ದರಿಂದಾಗಿ ಆ ವ್ಯಕ್ತಿಯನ್ನ ಜೈಲಿಗೆ ಹಾಕಿದ್ದು, ಅಲ್ಲೂ ವೈರಸ್ ಹರಡುವ ಸಾಧ್ಯತೆ ಇದೆ.
ಫ್ರಾನ್ಸ್ನಲ್ಲಿ ನಿರುದ್ಯೋಗ
ಫ್ರಾನ್ಸ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಸೋಂಕು ನಿಗ್ರಹಿಸಲು ದೇಶದಲ್ಲಿ ಲಾಕ್ಡೌನ್ ವಿಧಿಸಲಾಗಿತ್ತು. ಆದ್ರೆ, ಈ ಲಾಕ್ಡೌನ್ ಅವಧಿಯಲ್ಲಿ ನಿರುದ್ಯೋಗ ಸಂಖ್ಯೆ ಅಧಿಕವಾಗಿದೆ. 37 ವರ್ಷ ಹಿಂದಕ್ಕೇ ಹೋದಂತಾಗಿದೆ. 1983ರ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಉದ್ಯೋಗ ನಷ್ಟ ಅನುಭವಿಸುವಂತಾಗಿದೆ.
ಬೊಲಿವಿಯಾದಲ್ಲಿ ಆಕ್ಸಿಜನ್ ಕೊರತೆ
ಬೊಲಿವಿಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 96,459ಕ್ಕೆ ಏರಿಕೆಯಾಗಿದೆ. ಸೋಂಕಿನಿಂದಾಗಿ 3 ಸಾವಿರಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ಆದ್ರೆ, ಆಸ್ಪತ್ರೆಗಳಲ್ಲಿ 58 ಸಾವಿರಕ್ಕೂ ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ, ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಿದ್ದು, ಆತಂಕ ತಂದೊಡ್ಡಿದೆ.
ಲೆಬನಾನ್ ಸ್ಫೋಟ, ನ್ಯಾಯಾಂಗ ತನಿಖೆ
ಲೆಬನಾನ್ನ ಭೈರೂತ್ನಲ್ಲಿ ನಡೆದ ಸ್ಫೋಟದ ಬಗ್ಗೆ ಇಡೀ ದೇಶದಲ್ಲಿ ಆಕ್ರೋಶ ಹೆಚ್ಚಾಗಿದೆ. ನೂರಾರು ಜನ ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಹೀಗಾಗಿ, ಈ ಸ್ಫೋಟದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ದೇಶದೆಲ್ಲೆಡೆ ಪ್ರತಿಭಟನೆ ಜೋರಾಗಿತ್ತು. ಇದಕ್ಕೆ ಮಣಿದ ಸರ್ಕಾರ ನ್ಯಾಯಾಂಗ ತನಿಖೆ ನಡೆಸಲು ಸೂಚಿಸಿದೆ.