ದಕ್ಷಿಣ ಆಫ್ರಿಕಾದಲ್ಲಿ ಪ್ರವಾಹ: 300ಕ್ಕೂ ಹೆಚ್ಚು ಮಂದಿ ಸಾವು, ಆಸ್ತಿಪಾಸ್ತಿ ನಷ್ಟ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 15, 2022 | 9:43 AM

ನೂರಾರು ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸತತ ಮಳೆಯಿಂದ ಮನೆಗಳ ಜೊತೆಗೆ ರಸ್ತೆ ಮತ್ತು ಸೇತುವೆಗಳು ಸಹ ಕೊಚ್ಚಿ ಹೋಗಿವೆ.

ದಕ್ಷಿಣ ಆಫ್ರಿಕಾದಲ್ಲಿ ಪ್ರವಾಹ: 300ಕ್ಕೂ ಹೆಚ್ಚು ಮಂದಿ ಸಾವು, ಆಸ್ತಿಪಾಸ್ತಿ ನಷ್ಟ
ದಕ್ಷಿಣ ಆಫ್ರಿಕದಲ್ಲಿ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ
Follow us on

ಡರ್ಬನ್: ದಕ್ಷಿಣ ಆಫ್ರಿಕದ ಕರಾವಳಿ ಪ್ರದೇಶ ಕ್ವಾಜುಲಾ-ನಟಾಲ್​ನಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ವ್ಯಾಪಕ ಹಾನಿಯಾಗಿದೆ. ಈವರೆಗೆ ಸುಮಾರು 300 ಮಂದಿ ಮೃತಪಟ್ಟಿದ್ದು, ನೂರಾರು ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸತತ ಮಳೆಯಿಂದ ಮನೆಗಳ ಜೊತೆಗೆ ರಸ್ತೆ ಮತ್ತು ಸೇತುವೆಗಳು ಸಹ ಕೊಚ್ಚಿ ಹೋಗಿವೆ. ಆಫ್ರಿಕ ಖಂಡದ ಅತ್ಯಂತ ಚಟುವಟಿಕೆ ಇರುವ ಬಂದರಿನಲ್ಲಿ ಸರಕು ಸಾಗಣೆಗೆ ಧಕ್ಕೆ ಒದಗಿದೆ. ಹಡಗಿನಿಂದ ಬಂದರಿನಲ್ಲಿ ಇಳಿಸಿದ್ದ ಕೆಲ ಕಂಟೇನರ್​ಗಳು ಕೊಚ್ಚಿ ಹೋಗಿದ್ದರೆ, ಹಲವು ಕಂಟೇನರ್​ಗಳನ್ನು ದುಷ್ಕರ್ಮಿಗಳು ಲೂಟಿ ಮಾಡಿದ್ದಾರೆ.

ಕುಡಿಯುವ ನೀರು ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಸುತ್ತಲೂ ನೀರಿದ್ದರೂ ಶುದ್ಧ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ನೀರು ಸರಬರಾಜು ಪೈಪ್​ಗಳು ಒಡೆದು ಹೋಗಿವೆ. ನೀರಿನ ಟ್ಯಾಂಕ್​ಗಳು ಮುರಿದುಬಿದ್ದಿವೆ. ವಿದ್ಯುತ್ ಕಂಬಗಳು ಕೊಚ್ಚಿ ಹೋಗಿವೆ. 262ಕ್ಕೂ ಹೆಚ್ಚು ಶಾಲಾ ಕಟ್ಟಡಗಳು ಸಹ ಕುಸಿದುಬಿದ್ದಿವೆ. ವಿದ್ಯಾಭ್ಯಾಸಕ್ಕೆ ತುರ್ತು ಕ್ರಮ ತೆಗೆದುಕೊಳ್ಳಲು ಆಡಳಿತ ಪ್ರಯತ್ನಿಸುತ್ತಿದೆ. 18 ವಿದ್ಯಾರ್ಥಿಗಳು ಮತ್ತು ಓರ್ವ ಶಿಕ್ಷಕರು ಸಹ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು.

ದಕ್ಷಿಣಾ ಆಫ್ರಿಕಾದ ದಕ್ಷಿಣ ಪೂರ್ವ ಕರಾವಳಿಯು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ಒಂದಲ್ಲ ಒಂದು ರೀತಿ ಎದುರಿಸುತ್ತಲೇ ಇದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಬಿಗಡಾಯಿಸಬಹುದು ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಕಳೆದ ವರ್ಷ ಲೂಟಿ ಮತ್ತು ಹಿಂಸಾಚಾರದಿಂದ ತತ್ತರಿಸಿದ್ದ ಕ್ವಾಜುಲಾ-ನಟಾಲ್ ಇದೀಗ ತಾನೆ ಚೇತರಿಸಿಕೊಳ್ಳುತ್ತಿತ್ತು. ಹಿಂಸಾಚಾರದ ನಂತರ ಉದ್ಯಮಿಗಳು ಈ ಪ್ರದೇಶದಿಂದ ಹಿಂದೆ ಸರಿದಿದ್ದರು. ಇದೀಗ ಮತ್ತೆ ಹವಾಮಾನ ವೈಪರಿತ್ಯದಿಂದ ವ್ಯಾಪಾರ ವಹಿವಾಟುಗಳಿಗೆ ಧಕ್ಕೆ ಒದಗಿದ್ದು ಈ ಪ್ರದೇಶದಲ್ಲಿ ನಿರುದ್ಯೋಗ ಮತ್ತು ಅದರಿಂದ ಹಿಂಸಾಚಾರ ಹೆಚ್ಚಾಗುವ ಭೀತಿ ಎದುರಾಗಿದೆ.

ಪ್ರವಾಹದಿಂದ 2.6 ಕೋಟಿ ಅಮೆರಿಕ ಡಾಲರ್​ಗೂ ಹೆಚ್ಚಿನ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕೆಲ ಪ್ರದೇಶಗಳಲ್ಲಿ ಮಳೆ ಮತ್ತೆ ಆರಂಭವಾಗುವ ಮುನ್ಸೂಚನೆಯಿದ್ದು ಪರಿಹಾರ ಕಾರ್ಯಗಳಿಗೂ ಧಕ್ಕೆಯೊದಗುವ ಅಪಾಯ ಎದುರಾಗಿದೆ. ಅಧ್ಯಕ್ಷ ಸಿರಿಲ್ ರಮಪೊಸ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ತುರ್ತು ಸಚಿವ ಸಂಪುಟ ಸಭೆ ನಡೆಸಿದರು. ‘ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ನಿರ್ವಹಿಸಲಾಗುತ್ತಿದೆ. ಜಾಗತಿಕ ಹವಾಮಾನ ಬದಲಾವಣೆಯ ಪರಿಣಾಮ ಎದುರಿಸಲು ನಾವು ಮುಂದಿನ ದಿನಗಳಲ್ಲಿ ಇನ್ನಷ್ಟು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಹೇಳಿದರು.

ಇದನ್ನೂ ಓದಿ: ಫಿಲಿಪಿನ್ಸ್​​ನಲ್ಲಿ ಭೀಕರ ಚಂಡಮಾರುತದಿಂದ ಭೂಕುಸಿತ, ಪ್ರವಾಹ; 58 ಮಂದಿ ಸಾವು, ಬಿಡುವಿಲ್ಲದೆ ನಡೆಯುತ್ತಿದೆ ರಕ್ಷಣಾ ಕಾರ್ಯಾಚರಣೆ

ಇದನ್ನೂ ಓದಿ: 51ನೇ ದಿನಕ್ಕೆ ಉಕ್ರೇನ್ ಯುದ್ಧ: ಅತಿಮುಖ್ಯ ಸಮರನೌಕೆ ಕಳೆದುಕೊಂಡ ರಷ್ಯಾಕ್ಕೆ ಹಿನ್ನಡೆ, ಅಣ್ವಸ್ತ್ರ ದಾಳಿಯ ಭೀತಿ