ಫ್ಲೋರಿಡಾದಲ್ಲಿ 12 ಅಂತಸ್ತಿನ ಕಟ್ಟಡ ಭಾಗಶಃ ಕುಸಿತ; 5 ಮಂದಿ ಸಾವು, 156ಕ್ಕೂ ಹೆಚ್ಚು ಮಂದಿ ನಾಪತ್ತೆ
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಸರ್ಫ್ಸೈಡ್ನ ದುರಂತವನ್ನು ತುರ್ತುಪರಿಸ್ಥಿತಿಯೆಂದು ಘೋಷಣೆ ಮಾಡಿದ್ದು, ಅದರಡಿ ಸಿಗುವ ಪರಿಹಾರ ನೀಡಿದ್ದಾರೆ ಮತ್ತು ವಿಪತ್ತು ಪರಿಹಾರವನ್ನೂ ಪ್ರಕಟಿಸಿದ್ದಾರೆ ಎಂದು ಮೇಯರ್ ತಿಳಿಸಿದ್ದಾರೆ.
ಯುಎಸ್ನ ಫ್ಲೋರಿಡಾದ ಆಗ್ನೇಯ ಪ್ರಾಂತ್ಯದಲ್ಲಿರುವ ಮಿಯಾಮಿ ಡೇಡ್ ಕೌಂಟಿಯಲ್ಲಿ ಗುರುವಾರ ಮುಂಜಾನೆ 12 ಅಂತಸ್ತಿನ ಕಟ್ಟಡವೊಂದು ಭಾಗಶಃ ಕುಸಿದುಬಿದ್ದು 5 ಮಂದಿ ಮೃತಪಟ್ಟಿದ್ದಾರೆ. 156ಕ್ಕೂ ಹೆಚ್ಚು ನಾಪತ್ತೆಯಾಗಿದ್ದಾರೆ. ಇವರನ್ನು ಹುಡುಕುವ ಕಾರ್ಯಾಚರಣೆ ನಡೆಯುತ್ತಿದೆ. ಈ ಸುದ್ದಿಯನ್ನು ಶುಕ್ರವಾರ ಫ್ಲೋರಿಡಾದ ಮಾಧ್ಯಮಗಳು ವರದಿ ಮಾಡಿವೆ. ಮಿಯಾಮಿ ಡೇಡ್ನ ಮೇಯರ್ ಡೇನಿಯಲ್ಲಾ ಲೆವಿನ್ ಕಾವಾ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಸಿಬ್ಬಂದಿ ಹರಸಾಹಸ ಪಡುವಂತಾಯಿತು. ಕುಸಿದುಬಿದ್ದ ಕಟ್ಟಡದ ಅವಶೇಷಗಳಡಿಯಿಂದ ಜನರನ್ನು ರಕ್ಷಿಸುವುದಕ್ಕೆ, ಮೃತದೇಹಗಳನ್ನು ಹೊರತೆಗೆಯುವುದಕ್ಕೆ ಮತ್ತು ನಂತರ ಅವರನ್ನು ಗುರುತಿಸುವುದಕ್ಕೆ ತುಂಬ ಕಷ್ಟಪಟ್ಟರು ಎಂದು ಹೇಳಿದ್ದಾರೆ.
ಯಾರು ಸತ್ತಿದ್ದು ಎಂದು ತಿಳಿಯಲು ಅವರ ಡಿಎನ್ಎ ಪರೀಕ್ಷೆ ಕೂಡ ಮಾಡಬೇಕಾಯಿತು ಎಂದಿದ್ದಾರೆ. ಮಿಯಾಮಿ ಡೇಡ್ನ ಸರ್ಫ್ಸೈಡ್ ಪಟ್ಟಣದಲ್ಲಿರುವ ಈ ಚಾಂಪ್ಲೇನ್ ಟವರ್ಸ್ನ್ನು 1981ರಲ್ಲಿ ಕಟ್ಟಲಾಗಿದ್ದು, ಅಮೆರಿಕ ಕಾಲಮಾನದ ಪ್ರಕಾರ ಮುಂಜಾನೆ 1.30ಕ್ಕೆ ಭಾಗಶಃ ಕುಸಿದುಬಿದ್ದಿದೆ. ಕಟ್ಟಡ ಕುಸಿತದಿಂದಾಗಿ ಸುತ್ತಲಿನ ಅಪಾರ್ಟ್ಮೆಂಟ್ಗಳು, ಮನೆಗಳಿಗೂ ತೀವ್ರ ಹಾನಿಯಾಗಿದೆ. ಕಟ್ಟಡ ಬೀಳುವಾಗ ಅದರಲ್ಲಿ ಬಹುಸಂಖ್ಯೆಯಲ್ಲಿ ಜನರು ಇರಲಿಲ್ಲ ಎಂದೂ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಸರ್ಫ್ಸೈಡ್ನ ದುರಂತವನ್ನು ತುರ್ತುಪರಿಸ್ಥಿತಿಯೆಂದು ಘೋಷಣೆ ಮಾಡಿದ್ದು, ಅದರಡಿ ಸಿಗುವ ಪರಿಹಾರ ನೀಡಿದ್ದಾರೆ ಮತ್ತು ವಿಪತ್ತು ಪರಿಹಾರವನ್ನೂ ಪ್ರಕಟಿಸಿದ್ದಾರೆ ಎಂದು ಮೇಯರ್ ತಿಳಿಸಿದ್ದಾರೆ. ಕಾಣೆಯಾದವರಲ್ಲಿ ಕೊಲಂಬಿಯಾ, ಕ್ಯೂಬಾ, ಚಿಲಿ, ಪರಾಗ್ವೆ, ಪೋರ್ಟೊ ರಿಕೊ ಮತ್ತು ಅರ್ಜೆಂಟೀನಾ ಸೇರಿದಂತೆ ಲ್ಯಾಟಿನ್ ಅಮೆರಿಕದ 27 ಮಂದಿ ಕೂಡ ಇದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮನ್ಮುಲ್ನಲ್ಲಿ ಹಾಲಿಗೆ ನೀರು ಬೆರೆಸಿದ ಕೇಸ್ಗೆ ಮೆಗಾ ಟ್ವಿಸ್ಟ್.. ಹಗರಣ ಕೈಬಿಡುವಂತೆ ಒತ್ತಡ ಹಾಕಿದ್ರಾ H.D.ದೇವೇಗೌಡ?