ಬಾಲಿವುಡ್ ಸಿನಿಮಾ ಅನುಕರಣೆ ಮಾಡುವುದು ನಿಲ್ಲಿಸಿ: ಪಾಕಿಸ್ತಾನಿ ಫಿಲ್ಮ್ ಮೇಕರ್ಸ್ಗೆ ಇಮ್ರಾನ್ ಖಾನ್ ಸಲಹೆ
ಪಾಕಿಸ್ತಾನಿ ಸಿನಿಮಾ ಇಂಡಸ್ಟ್ರಿ ಮೊದಲು ಬಾಲಿವುಡ್ನ ಪ್ರಭಾವಕ್ಕೆ ಒಳಗಾಗಿತ್ತು. ಅದೇ ಸಂಸ್ಕೃತಿ ಮುಂದುವರಿದಿದೆ. ಮತ್ತೊಂದು ದೇಶದ ಸಂಸ್ಕೃತಿಯನ್ನೇ ಅಳವಡಿಸುವ ಸ್ಥಿತಿ ಕಂಡುಬರುತ್ತಿದೆ ಎಂದು ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಇಸ್ಲಾಮಾಬಾದ್: ಸಾಧ್ಯವಾದಷ್ಟು ಸ್ವಂತ (ಒರಿಜಿನಲ್) ಹಾಗೂ ಹೊಸ ಕಂಟೆಂಟ್ಗಳನ್ನು ಬಳಸಿ. ಭಾರತದ ಹಿಂದಿ ಸಿನಿಮಾ ಇಂಡಸ್ಟ್ರಿ ಬಾಲಿವುಡ್ನ್ನು ಅನುಕರಣೆ ಮಾಡುವುದು ನಿಲ್ಲಿಸಿ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಪಾಕಿಸ್ತಾನಿ ಸಿನಿಮಾ ಮೇಕರ್ಸ್ಗಳನ್ನು ಕೇಳಿಕೊಂಡಿದ್ದಾರೆ. ಇಸ್ಲಾಮಾಬಾದ್ನಲ್ಲಿ ಶಾರ್ಟ್ ಫಿಲ್ಮ್ ಫೆಸ್ಟಿವಲ್ ಉದ್ದೇಶಿಸಿ ಅವರು ಮಾತನಾಡಿದ್ದಾರೆ.
ಪಾಕಿಸ್ತಾನಿ ಸಿನಿಮಾ ಇಂಡಸ್ಟ್ರಿ ಮೊದಲು ಬಾಲಿವುಡ್ನ ಪ್ರಭಾವಕ್ಕೆ ಒಳಗಾಗಿತ್ತು. ಅದೇ ಸಂಸ್ಕೃತಿ ಮುಂದುವರಿದಿದೆ. ಮತ್ತೊಂದು ದೇಶದ ಸಂಸ್ಕೃತಿಯನ್ನೇ ಅಳವಡಿಸುವ ಸ್ಥಿತಿ ಕಂಡುಬರುತ್ತಿದೆ ಎಂದು ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್, ಹೊಸ ಸಿನಿಮಾ ಮೇಕರ್ಸ್ಗಳಿಗೆ ಕೆಲವು ಕಿವಿಮಾತು ಹೇಳಿದ್ದಾರೆ.
ನನ್ನ ಅನುಭವದ ಪ್ರಕಾರ, ಸ್ವಂತಿಕೆ ಇದ್ದಾಗ ಮಾತ್ರ ಕಲೆ ಮಾರಾಟವಾಗುತ್ತದೆ. ಅಣಕು ಅಥವಾ ಕಾಪಿ ಎಂಬುದಕ್ಕೆ ಬೆಲೆ ಇರುವುದಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಈ ಮೂಲಕ, ಸ್ವಂತಿಕೆಯ ಪ್ರಾಮುಖ್ಯತೆಯನ್ನು ಅವರು ತಿಳಿಸಿಕೊಟ್ಟಿದ್ದಾರೆ. ಪಾಕಿಸ್ತಾನಿ ಸಿನಿಮಾ ಇಂಡಸ್ಟ್ರಿ ಆ ನೆಲೆಯಲ್ಲಿ ಕೆಲಸ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
ಪಾಕಿಸ್ತಾನಿ ಜನರು ಹಾಲಿವುಡ್ ಹಾಗೂ ಬಾಲಿವುಡ್ ಸಿನಿಮಾ ವೀಕ್ಷಿಸುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಮ್ರಾನ್ ಖಾನ್, ಜನರು ಸ್ಥಳೀಯ ಸಿನಿಮಾ ನೋಡಲು ಸಿನಿಮಾದಲ್ಲಿ ಸ್ವಲ್ಪ ಕಮರ್ಷಿಯಲ್ ಟಚ್ ಕೂಡ ಇರಬೇಕು. ಹಾಗಾಗಿ, ಯುವ ಸಿನಿಮಾ ಆಸಕ್ತರು ತಮ್ಮ ಹೊಸ ಆಲೋಚನೆಗಳನ್ನು ಸಿನಿಮಾದಲ್ಲಿ ತರಬೇಕು. ಹಾಗೂ ಅದರಲ್ಲಿ ಸೋಲಿನ ಬಗ್ಗೆ ಯಾವುದೇ ಭಯ ಇರಬಾರದು ಎಂದು ಹೇಳಿದ್ಧಾರೆ. ಸೋಲಿನ ಬಗ್ಗೆ ಭಯ ಇರುವವರು ಯಾವತ್ತೂ ಗೆಲ್ಲಲು ಸಾಧ್ಯವಿಲ್ಲ ಎಂದು ಖಾನ್ ತಿಳಿಸಿದ್ದಾರೆ.
ಜಾಗತಿಕವಾಗಿ ಪಾಕಿಸ್ತಾನದ ಇಮೇಜ್ ಬಗ್ಗೆ ಮಾತನಾಡಿದ ಖಾನ್, ದೇಶವು ಒಂದು ರೀತಿಯ ಕೀಳರಿಮೆಯ ಕಾರಣದಿಂದ ಹಾಗೂ ವಾರ್ ಆನ್ ಟೆರರ್ ಎಂಬ ಕಾರಣದಿಂದ ತಪ್ಪಾಗಿ ಅರ್ಥವಾಗುವಂತಾಗಿದೆ. ಯಾರಿಗೆ ಸ್ವಾಭಿಮಾನ ಅಥವಾ ಸ್ವಂತ ಗೌರವ ಇದೆಯೋ ಅವರನ್ನು ಜಗತ್ತು ಕೂಡ ಗೌರವಿಸುತ್ತದೆ ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ.
ಇದನ್ನೂ ಓದಿ: ಟಿವಿ ಚರ್ಚೆ ವೇಳೆ ಇಮ್ರಾನ್ ಖಾನ್ ಆಪ್ತ ನಾಯಕಿ ಫಿರ್ದೋಸ್ನಿಂದ ವಿರೋಧ ಪಕ್ಷದ ಸಂಸದರಿಗೆ ಕಪಾಳಮೋಕ್ಷ; ವಿಡಿಯೋ ವೈರಲ್
ದೇಶ ಮುನ್ನಡೆಸಲು ಇಮ್ರಾನ್ ಖಾನ್ ಸರ್ಕಾರ ಅಸಮರ್ಥ: ಪಾಕಿಸ್ತಾನ ಸುಪ್ರೀಂಕೋರ್ಟ್
Published On - 3:19 pm, Sun, 27 June 21