ವಾಷಿಂಗ್ಟನ್: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಶುಕ್ರವಾರ ಬೆಳಿಗ್ಗೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಏಳು ತಿಂಗಳ ನಂತರ ಇದೇ ಮೊದಲ ಬಾರಿಗೆ ಜಗತ್ತಿನ ಬಲಿಷ್ಠ ರಾಷ್ಟ್ರಗಳ ನಾಯಕರು ಪರಸ್ಪರ ಮಾತುಕತೆ ನಡೆಸಿದ್ದಾರೆ. ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಶುಕ್ರವಾರ ಬೆಳಿಗ್ಗೆ ಅಮೆರಿಕ ಅಧ್ಯಕ್ಷ ಜೋಸೆಫ್ ಆರ್. ಬಿಡೆನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು ಎಂದು ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್ಹುವಾ ಹೇಳಿಕೆಯಲ್ಲಿ ತಿಳಿಸಿದೆ.
“ಉಭಯ ನಾಯಕರು ಸ್ಪಷ್ಟ, ಆಳವಾದ ಮತ್ತು ವಿಶಾಲವಾದ ಕಾರ್ಯತಂತ್ರದ ಸಂವಹನ ಮತ್ತು ದ್ವಿಪಕ್ಷೀಯ ಸಂಬಂಧಗಳು ಮತ್ತು ಹಂಚಿಕೆಯ ಹಿತಾಸಕ್ತಿಯ ಸಂಬಂಧಿತ ವಿಷಯಗಳ ವಿನಿಮಯವನ್ನು ಮಾಡಿದ್ದರು” ಎಂದು ಕ್ಸಿನ್ಹುವಾ ವರದಿ ಹೇಳಿದೆ.
ಬೀಜಿಂಗ್ ಮತ್ತು ವಾಷಿಂಗ್ಟನ್ ನಡುವೆ ಹೆಚ್ಚುತ್ತಿರುವ ಪೈಪೋಟಿಯನ್ನು ನಿರ್ವಹಿಸುವ ಉದ್ದೇಶದಿಂದ ಇಬ್ಬರು ನಾಯಕರು “ವಿಶಾಲವಾದ, ಕಾರ್ಯತಂತ್ರದ ಚರ್ಚೆ” ನಡೆಸಿದ್ದಾರೆ ಎಂದು ಶ್ವೇತಭವನವು ಬಿಡೆನ್-ಷಿ ಫೋನ್ ಕರೆಯನ್ನು ದೃಢಪಡಿಸುವ ಹೇಳಿಕೆಯನ್ನು ನೀಡಿದೆ.
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಚೀನಾದ ನಾಯಕ ಷಿ ಜಿನ್‌ಪಿಂಗ್ ಅವರು 90 ನಿಮಿಷಗಳ ಕಾಲ ಮಾತನಾಡಿದರು. ಏಳು ತಿಂಗಳ ನಂತರ ತಮ್ಮ ಮೊದಲ ಮಾತುಕತೆಯಲ್ಲಿ ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಸ್ಪರ್ಧೆಯು ಸಂಘರ್ಷಕ್ಕೆ ತಿರುಗದಂತೆ ನೋಡಿಕೊಳ್ಳುವ ಅಗತ್ಯವನ್ನು ಚರ್ಚಿಸಿದರು ಎಂದು ರಾಯಿಟರ್ಸ್ ವರದಿ ಮಾಡಿದೆ.
ಸಂವಾದವು ಆರ್ಥಿಕ ಸಮಸ್ಯೆಗಳು, ಹವಾಮಾನ ಬದಲಾವಣೆ ಮತ್ತು ಕೊವಿಡ್ -19 ಮೇಲೆ ಕೇಂದ್ರೀಕರಿಸಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.
ಎರಡು ದೇಶಗಳ ನಡುವೆ “ಸ್ಪರ್ಧೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಯುನೈಟೆಡ್ ಸ್ಟೇಟ್ಸ್ ನಡೆಸುತ್ತಿರುವ ಪ್ರಯತ್ನದ ಭಾಗ” ಎಂದು ಚರ್ಚೆಯನ್ನು ಜೋ ಬಿಡನ್ ಸ್ಪಷ್ಟಪಡಿಸಿದ್ದಾರೆ ಎಂದು ಶ್ವೇತಭವನ ಹೇಳಿದೆ.
“ಇಂಡೋ-ಪೆಸಿಫಿಕ್ ಮತ್ತು ಪ್ರಪಂಚದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯಲ್ಲಿ ಅಮೆರಿದ ನಿರಂತರ ಆಸಕ್ತಿಯನ್ನು ಅಧ್ಯಕ್ಷ ಬಿಡೆನ್ ಒತ್ತಿಹೇಳಿದ್ದಾರೆ. ಸ್ಪರ್ಧೆಯು ಸಂಘರ್ಷಕ್ಕೆ ಒಳಗಾಗದಂತೆ ನೋಡಿಕೊಳ್ಳಲು ಉಭಯ ರಾಷ್ಟ್ರಗಳ ಜವಾಬ್ದಾರಿಯನ್ನು ಇಬ್ಬರು ನಾಯಕರು ಚರ್ಚಿಸಿದರು ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.
ಆಗಸ್ಟ್ ಮಧ್ಯದಲ್ಲಿ ತಾಲಿಬಾನ್ ಗುಂಪು ಅಧಿಕಾರಕ್ಕೆ ಬಂದ ಅಫ್ಘಾನಿಸ್ತಾನದಲ್ಲಿನ ತ್ವರಿತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜೋ ಬಿಡೆನ್ ಮತ್ತು ಷಿ ಜಿನ್‌ಪಿಂಗ್ ನಡುವಿನ ಕರೆ ನಡೆದಿದೆ. ಈ ವಾರದ ಆರಂಭದಲ್ಲಿ, ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಮಧ್ಯಂತರ ಸರ್ಕಾರ ರಚನೆಯನ್ನು ಘೋಷಿಸಿತು.
ಇದನ್ನೂ ಓದಿ: ನಾನು ಕಾಶ್ಮೀರಿ ಪಂಡಿತ್, ವೈಷ್ಣೋ ದೇವಿ ಭೇಟಿ ನಂತರ ಮನೆಗೆ ಬಂದಿದ್ದೇನೆ ಎಂದು ಅನಿಸುತ್ತಿದೆ: ರಾಹುಲ್ ಗಾಂಧಿ
(For first time in seven months Chinese President Xi Jinping held a phone conversation with US President Joe Biden)