
ನವದೆಹಲಿ, ಆಗಸ್ಟ್ 22: ಶ್ರೀಲಂಕಾದ (Sri Lanka) ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (Ranil Wickremesinghe) ತಾವು ಅಧ್ಯಕ್ಷರಾಗಿದ್ದಾಗ ಯುನೈಟೆಡ್ ಕಿಂಗ್‌ಡಮ್‌ಗೆ (UK) ನೀಡಿದ ವೈಯಕ್ತಿಕ ಭೇಟಿಗಾಗಿ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಕುರಿತು ಹೇಳಿಕೆ ದಾಖಲಿಸಲು ಆಗಮಿಸಿದ್ದರು. ಇದಾದ ನಂತರ ಅವರನ್ನು ಕೊಲಂಬೊದಲ್ಲಿ ಕ್ರಿಮಿನಲ್ ತನಿಖಾ ಇಲಾಖೆ (ಸಿಐಡಿ) ಇಂದು ಬಂಧಿಸಿದೆ. 2022ರಿಂದ 2024ರವರೆಗೆ ಶ್ರೀಲಂಕಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರನಿಲ್ ವಿಕ್ರಮಸಿಂಘೆ, ಸೆಪ್ಟೆಂಬರ್ 2023ರಲ್ಲಿ ವೊಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದಲ್ಲಿ ತಮ್ಮ ಪತ್ನಿ ಪ್ರೊಫೆಸರ್ ಮೈತ್ರೀ ವಿಕ್ರಮಸಿಂಘೆ ಅವರ ಪಿಎಚ್‌ಡಿ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಸರ್ಕಾರಿ ಹಣವನ್ನು ಬಳಸಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಪತ್ನಿಯ ಕಾರ್ಯಕ್ರಮಕ್ಕೆ ತೆರಳಲು ಬಳಸಲಾಗಿದ್ದ ಸರ್ಕಾರಿ ಹಣವನ್ನು ವಾಪಾಸ್ ನೀಡಿದ್ದಾರೆಯೇ ಎಂಬ ಬಗ್ಗೆ ನಡೆಯುತ್ತಿರುವ ತನಿಖೆಯ ಬಳಿಕ ಅನಿರೀಕ್ಷತವಾಗಿ ಅವರನ್ನು ಬಂಧಿಸಲಾಗಿದೆ. ಈ ಬಂಧನವು ನಾಟಕೀಯ ತಿರುವು ಪಡೆದಿದೆ. 76 ವರ್ಷದ ವಿಕ್ರಮಸಿಂಘೆ ಅವರನ್ನು ಅಪರಾಧ ತನಿಖಾ ಇಲಾಖೆ(ಸಿಐಡಿ) ಪ್ರಧಾನ ಕಚೇರಿಯಲ್ಲಿ ಬಂಧಿಸಲಾಗಿದ್ದು, ಸರ್ಕಾರಿ ಹಣ ದುರುಪಯೋಗದ ತನಿಖೆಗೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಲು ಅವರನ್ನು ಇಲ್ಲಿಗೆ ಕರೆಸಲಾಗಿತ್ತು ಎಂದು ಪೊಲೀಸರು ದೃಢಪಡಿಸಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ಉಪ್ಪಿನ ಬಿಕ್ಕಟ್ಟು; ದ್ವೀಪ ರಾಷ್ಟ್ರಕ್ಕೆ 3,050 ಮೆಟ್ರಿಕ್ ಟನ್ ಉಪ್ಪು ಕಳುಹಿಸಿದ ಭಾರತ
ಕೊಲಂಬೊ ಫೋರ್ಟ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಲಾದ ಪೊಲೀಸ್ ದಾಖಲೆಗಳ ಪ್ರಕಾರ, ಕ್ಯೂಬಾ ಮತ್ತು ಯುನೈಟೆಡ್ ಸ್ಟೇಟ್ಸ್‌ಗೆ ಅಧಿಕೃತ ಭೇಟಿಗಾಗಿ ರನಿಲ್ ವಿಕ್ರಮಸಿಂಘೆ ತೆರಳಿದ್ದರು. ಅಲ್ಲಿಂದ ವಾಪಾಸ್ ಬರುವಾಗ ಹೆಂಡತಿಯ ಕಾರ್ಯಕ್ರಮಕ್ಕಾಗಿ ಸರ್ಕಾರಿ ಹಣದಲ್ಲಿ ಲಂಡನ್‌ಗೆ ಪ್ರಯಾಣ ಬೆಳೆಸಿದ್ದರು. ಆದರೆ, ಅವರ ಅಧಿಕೃತ ಭೇಟಿಯ ಪಟ್ಟಿಯಲ್ಲಿ ಇಂಗ್ಲೆಂಡ್ ಪ್ರವಾಸ ಇರಲಿಲ್ಲ ಎಂದು ತಿಳಿದುಬಂದಿದೆ. ಇದಕ್ಕಾಗಿ ಸುಮಾರು 16.9 ಮಿಲಿಯನ್ ರೂ.ಗಳಷ್ಟು ಸಾರ್ವಜನಿಕ ನಿಧಿಯನ್ನು ಬಳಸಿಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
Ranil Wickremesinghe
> be a 6 time PM & 1 time President of Sri Lanka
> stabilise the country’s bankrupt economy
> use state funds for a private trip to London, for a graduation ceremony
> lose elections to the left
> get arrested by CID pic.twitter.com/JGHMuAchWU— Lord Immy Kant (@KantInEastt) August 22, 2025
ವಿಕ್ರಮಸಿಂಘೆ ಅವರು ಅಧಿಕೃತ ಕಾರ್ಯಕ್ರಮದ ನಂತರ ಅಮೆರಿಕದಿಂದ ವಾಪಾಸ್ ಬರುವಾಗ ಅವರ ಪತ್ನಿಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸರ್ಕಾರದ ವೆಚ್ಚದಲ್ಲಿ ಯುಕೆಗೆ ಭೇಟಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಸಿಐಡಿ ಈ ಹಿಂದೆ ಅವರ ಸಿಬ್ಬಂದಿಯ ಪ್ರಯಾಣ ವೆಚ್ಚದ ಬಗ್ಗೆ ವಿಚಾರಣೆ ನಡೆಸಿತ್ತು. ವಿಕ್ರಮಸಿಂಘೆ ಮಾತ್ರವಲ್ಲದೆ ಅವರ ಜೊತೆ ತೆರಳಿದ್ದ 10 ಸದಸ್ಯರ ನಿಯೋಗ ಕೂಡ ಇಂಗ್ಲೆಂಡ್ಗೆ ಸರ್ಕಾರದ ವೆಚ್ಚದಲ್ಲಿ ಪ್ರಯಾಣಿಸಿತ್ತು. ಆದರೆ, ವಿಕ್ರಮಸಿಂಘೆ ಅವರ ಕಚೇರಿ ಈ ಆರೋಪಗಳನ್ನು ತಳ್ಳಿಹಾಕಿದೆ.
ಇದನ್ನೂ ಓದಿ: ಟ್ರಂಪ್ ಭಾರತದ ಚುನಾವಣೆಗೆ 21 ಮಿಲಿಯನ್ ಡಾಲರ್ ಹಣ ನೀಡಿಲ್ಲ ಎಂದ ಅಮೆರಿಕ ರಾಯಭಾರ ಕಚೇರಿ!
ವಿಕ್ರಮಸಿಂಘೆ ಅವರು ಜುಲೈ 2022 ರಿಂದ ಸೆಪ್ಟೆಂಬರ್ 2024 ರವರೆಗೆ ಶ್ರೀಲಂಕಾ ಅಧ್ಯಕ್ಷರಾಗಿದ್ದರು. ಅನುಭವಿ ರಾಜಕಾರಣಿ ಶ್ರೀಲಂಕಾದ ಪ್ರಧಾನಿಯಾಗಿಯೂ 6 ಬಾರಿ ಸೇವೆ ಸಲ್ಲಿಸಿದ್ದಾರೆ. ಸಿಐಡಿ ಜಾಮೀನು ವಿಚಾರಣೆಗಾಗಿ ಕೊಲಂಬೊ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ರನಿಲ್ ವಿಕ್ರಮಸಿಂಘೆ ಅವರನ್ನು ಹಾಜರುಪಡಿಸುವ ನಿರೀಕ್ಷೆಯಿದೆ. ಈ ಬಂಧನವು ಶ್ರೀಲಂಕಾದ ಭ್ರಷ್ಟಾಚಾರ ವಿರೋಧಿ ಅಭಿಯಾನದಲ್ಲಿ ಹೊಸ ಹಂತವನ್ನು ಸೂಚಿಸುತ್ತದೆ ಎಂದು ಕಾನೂನು ತಜ್ಞರು ಹೇಳುತ್ತಿದ್ದು, ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಉನ್ನತ ವ್ಯಕ್ತಿಗಳು ತನಿಖೆಗೆ ಒಳಪಡುವ ಸಾಧ್ಯತೆಯಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ