ಸಿಂಗಾಪುರ್ ಪ್ರಾಣಿ ಸಂಗ್ರಹಾಲಯದಲ್ಲಿರುವ ನಾಲ್ಕು ಸಿಂಹಗಳಿಗೆ ಕೊವಿಡ್ ಸೋಂಕು; ಕೆಮ್ಮಿನಿಂದ ಬಳಲುತ್ತಿರುವ ಪ್ರಾಣಿಗಳು
ಕೊರೊನಾ ಸೋಂಕಿಗೆ ಒಳಗಾದ ನಾಲ್ಕು ಸಿಂಹಗಳ ಸಂಪರ್ಕಕ್ಕೆ ಬಂದಿದ್ದ ಎಲ್ಲ 9 ಏಷ್ಯಾಟಿಕ್ ಸಿಂಹಗಳು ಮತ್ತು 5 ಆಫ್ರಿಕನ್ ಸಿಂಹಗಳನ್ನು ಐಸೋಲೇಟ್ ಮಾಡಲಾಗಿದೆ.
ಸಿಂಗಾಪುರ್ ಪ್ರಾಣಿಸಂಗ್ರಹಾಲಯದಲ್ಲಿರುವ ನಾಲ್ಕು ಸಿಂಹಗಳು ಕೊವಿಡ್ 19 ಸೋಂಕಿಗೆ (Covid 19 Virus) ಒಳಗಾಗಿವೆ. ಈ ಝೂನಲ್ಲಿರುವ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅವರಿಂದಲೇ ಸಿಂಹಗಳಿಗೂ ಹಬ್ಬಿದೆ ಎಂದು ಹೇಳಲಾಗಿದೆ. ಕೊರೊನಾ ಸೋಂಕಿಗೆ ಒಳಗಾಗಿರುವ ಪ್ರಾಣಿಗಳ ಆರೋಗ್ಯ ತೀರ ಹದಗೆಟ್ಟಿಲ್ಲ. ಅವರು ಸರಿಯಾಗಿ ಆಹಾರ ಸೇವನೆ ಮಾಡುತ್ತಿದ್ದು, ಚುರುಕಾಗಿಯೇ ಇವೆ ಎಂದು ಈ ಮೃಗಾಲಯದ ಉಸ್ತುವಾರಿ ಹೊತ್ತಿರುವ ಮಂಡೈ ವನ್ಯಜೀವಿ ಗ್ರೂಪ್ನ ಸಂರಕ್ಷಣೆ, ಸಂಶೋಧನೆ ಮತ್ತು ವೆಟರ್ನಿಟಿ ವಿಭಾಗದ ಉಪಾಧ್ಯಕ್ಷರಾಗಿರುವ ಡಾ. ಸೋಂಜಾ ಲುಜ್ ತಿಳಿಸಿದ್ದಾರೆ.
ಕೊರೊನಾ ಸೋಂಕು ಬರೀ ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಬರುತ್ತದೆ ಎಂಬುದು ಈಗಾಗಲೇ ಗೊತ್ತಿರುವ ವಿಷಯ. ಜಗತ್ತಿನಾದ್ಯಂತ ಹಲವು ಮೃಗಾಲಯಗಳಲ್ಲಿನ ಹುಲಿ, ಸಿಂಹಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವುಗಳಿಗೂ ಚಿಕಿತ್ಸೆ ನೀಡಲಾಗಿತ್ತು. ಇದೀಗ ಸಿಂಗಾಪುರ್ನ ಝೂನಲ್ಲಿರುವ ನಾಲ್ಕು ಸಿಂಹಗಳಿಗೆ ಸೋಂಕು ತಗುಲಿದೆ. ಸಿಂಗಪುರದಲ್ಲಿ ನಿನ್ನೆ 3397 ಕೊರೊನಾ ಪ್ರಕರಣ ದಾಖಲಾಗಿದ್ದು, ಅಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 2,24000ಕ್ಕೆ ಏರಿಕೆಯಾಗಿದೆ.
ಅಂದಹಾಗೆ ಈ ಸಿಂಹಗಳು ಸಿಂಗಾಪುರ್ನ ನೈಟ್ ಸಫಾರಿ ಎಂಬ ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ಇದ್ದು, ಕೊರೊನಾದ ಅತ್ಯಂತ ಸೌಮ್ಯ ಲಕ್ಷಣಗಳನ್ನು ಹೊಂದಿವೆ. ಅವು ಸೀನು, ಕೆಮ್ಮಿನಿಂದ ಬಳಲುತ್ತಿದ್ದು, ಅತಿಯಾಗಿ ನಿದ್ದೆ ಮಾಡುತ್ತಿವೆ ಎಂದು ಝೂ ಆಡಳಿತ ಹೇಳಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ನಾಲ್ಕು ಸಿಂಹಗಳ ಸಂಪರ್ಕಕ್ಕೆ ಬಂದಿದ್ದ ಎಲ್ಲ 9 ಏಷ್ಯಾಟಿಕ್ ಸಿಂಹಗಳು ಮತ್ತು 5 ಆಫ್ರಿಕನ್ ಸಿಂಹಗಳನ್ನು ಐಸೋಲೇಟ್ ಮಾಡಲಾಗಿದೆ. ಅದರಲ್ಲೂ ಒಂದು ಆಫ್ರಿಕನ್ ಸಿಂಹಕ್ಕೆ ಸಣ್ಣದಾಗಿ ಲಕ್ಷಣಗಳು ಕಾಣಿಸುತ್ತಿದ್ದು, ಅದರ ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ. ಸದ್ಯ ಭಾನುವಾರದಿಂದಲೇ ನೈಟ್ ಸಫಾರಿ ಬಂದ್ ಮಾಡಲಾಗಿದೆ. ಹಾಗೇ, ಕೊವಿಡ್ 19 ಸೋಂಕಿಗೆ ಒಳಗಾಗಿರುವ ಇಲ್ಲಿನ ಸಿಬ್ಬಂದಿ ಕೂಡ ರಜೆಯಲ್ಲಿ ಇದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬದ್ಧವೈರಿ ಚೀನಾದ ತಂಟೆತಕರಾರನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದ ಭಾರತ, ಮೂಲಸೌಕರ್ಯ ನಿರ್ಮಾಣಕ್ಕೆ ಮನವಿ