ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಆಕ್ಸ್ಫರ್ಡ್ ನಡೆಸಿದ ಹೊಸ ಅಧ್ಯಯನವೊಂದರಲ್ಲಿ ಆಸ್ಟ್ರಾಜೆನೆಕಾ ಲಸಿಕೆಯ ಎರಡನೇ ಡೋಸ್ ನೀಡುವ ಅವಧಿಯನ್ನು 8ರಿಂದ12ವಾರಗಳಿಗೆ ಬದಲಾಗಿ 44ರಿಂದ45 ವಾರಕ್ಕೆ ವಿಸ್ತರಿಸಿದಾಗ ದೇಹದಲ್ಲಿ ನಾಲ್ಕು ಪಟ್ಟು ಹೆಚ್ಚು ಪ್ರತಿಕಾಯಗಳು ಸೃಷ್ಟಿಯಾಗಿರುವುದು ಕಂಡುಬಂದಿದೆ. ಈ ಕುರಿತು ಸೋಮವಾರ ಮಾಹಿತಿ ನೀಡಿರುವ ಆಕ್ಸ್ಫರ್ಡ್ ಸಂಸ್ಥೆ, ಎರಡನೇ ಡೋಸ್ ನೀಡುವುದನ್ನು ವಿಳಂಬ ಮಾಡಿದಾಗ ದೇಹದಲ್ಲಿ ಹೆಚ್ಚು ಪ್ರತಿಕಾಯಗಳ ಬೆಳವಣಿಗೆಗೆ ಅವಕಾಶ ಸಿಕ್ಕಿರುವುದು ಅಧ್ಯಯನದಲ್ಲಿ ಕಂಡುಬಂದಿದೆ. ಅಲ್ಲದೇ, ಪ್ರತಿಕಾಯಗಳು ದೇಹದಲ್ಲಿ ಸುಮಾರು ಒಂದು ವರ್ಷದ ತನಕ ಕ್ರಿಯಾಶೀಲವಾಗಿರುವುದೂ ಗೊತ್ತಾಗಿದೆ. ಈಗಾಗಲೇ ಎರಡು ಡೋಸ್ ಪಡೆದ ಕೆಲವರಿಗೆ ಮೂರನೇ ಸಲಕ್ಕೆ ಬೂಸ್ಟರ್ ಡೋಸ್ ನೀಡಿದಾಗ ಎರಡನೇ ಡೋಸ್ ನಂತರ ಸೃಷ್ಟಿಯಾದ ಪ್ರತಿಕಾಯಗಳಿಗಿಂತಲೂ ಎರಡು ಪಟ್ಟು ಹೆಚ್ಚು ಪ್ರತಿಕಾಯಗಳು ಸೃಷ್ಟಿಯಾಗಿರುವುದೂ ಅಧ್ಯಯನದ ಪ್ರಾಥಮಿಕ ವರದಿಯಲ್ಲಿ ಕಾಣಸಿಕ್ಕಿದೆ ಎಂದು ತಿಳಿಸಿದೆ.
ಮೊದಲ ಡೋಸ್ ಆಸ್ಟ್ರಾಜೆನೆಕಾ ಕೊರೊನಾ ಲಸಿಕೆ ದೇಹದಲ್ಲಿ ಒಂದಷ್ಟು ಪ್ರಮಾಣದ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಆ ಪ್ರಕ್ರಿಯೆಗೆ ತುಸು ಹೆಚ್ಚೇ ಸಮಯ ಕೊಟ್ಟು 44ರಿಂದ45ನೇ ವಾರಕ್ಕೆ ಎರಡನೇ ಡೋಸ್ ಲಸಿಕೆ ಕೊಟ್ಟಾಗ ಅದರ ಪ್ರಭಾವ ಹೆಚ್ಚಾಗಿರುವುದು ಕಾಣಿಸಿದೆ. ಬೂಸ್ಟರ್ ಡೋಸ್ ವಿಚಾರದಲ್ಲೂ ಅತ್ಯುತ್ತಮ ಫಲಿತಾಂಶ ಸಿಕ್ಕಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಇದು ಕೊರೊನಾ ವೈರಾಣುವಿನ ಬೇರೆ ಬೇರೆ ಮಾದರಿಗಳ ವಿರುದ್ಧ ಹೋರಾಡಲು ಹೆಚ್ಚು ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಲು ಸಹಕರಿಸುತ್ತದೆ.
ಅಧ್ಯಯನಕ್ಕೆ ಒಳಪಡಿಸಿದವರಲ್ಲಿ ಮೊದಲ ಡೋಸ್ ಆಸ್ಟ್ರಾಜೆನಕಾ ಲಸಿಕೆ ಪಡೆದ 8ರಿಂದ 12ನೇ ವಾರಕ್ಕೆ ಎರಡನೇ ಡೋಸ್ ಪಡೆದವರ ದೇಹದಲ್ಲಿರುವುದಕ್ಕಿಂತ ಎರಡು ಪಟ್ಟು ಹೆಚ್ಚಿನ ಪ್ರತಿಕಾಯಗಳು 15ರಿಂದ 25ನೇ ವಾರದಲ್ಲಿ ಎರಡನೇ ಡೋಸ್ ಪಡೆದವರ ದೇಹದಲ್ಲಿ ಸೃಷ್ಟಿಯಾಗಿದೆ. ಅದನ್ನು 44ರಿಂದ 45ನೇ ವಾರಕ್ಕೆ ಏರಿಸಿದಾಗ ಪ್ರತಿಕಾಯಗಳ ಪ್ರಮಾಣದಲ್ಲಿ ಇನ್ನೂ ಏರಿಕೆ ಕಂಡಿದೆ. ಇದು ಎರಡು ಡೋಸ್ಗಳ ನಡುವಿನ ಅಂತರ ಹೆಚ್ಚಿದಷ್ಟೂ ಪ್ರತಿಕಾಯಗಳ ಅಭಿವೃದ್ಧಿ ಹೆಚ್ಚುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ತಜ್ಞರು ತಿಳಿಸಿದ್ದಾರೆ. ಲಸಿಕೆ ಅಭಿವೃದ್ಧಿಪಡಿಸಿದ ಆರಂಭದಲ್ಲಿ ವೈದ್ಯಕೀಯ ಪರೀಕ್ಷೆಯ ಭಾಗವಾಗಿದ್ದವರನ್ನೇ ಈಗ ಮತ್ತೆ ಪರಿಶೀಲನೆಗೆ ಒಳಪಡಿಸಿದ್ದು, ಈ ಅಂಶಗಳು ಕಂಡುಬಂದಿವೆ.
ಆಸ್ಟ್ರಾಜೆನೆಕಾ ಲಸಿಕೆಯನ್ನು ಭಾರತದಲ್ಲಿ ಕೊವಿಶೀಲ್ಡ್ ಹೆಸರಿನಲ್ಲಿ ತಯಾರಿಸಿದ್ದು, ಸದ್ಯ ಭಾರತದ ಲಸಿಕೆ ವಿತರಣೆಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದೆ. ಈವರೆಗೆ ಸುಮಾರು 32ಕೋಟಿ ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ವಿತರಿಸಲಾಗಿದ್ದು, ದೇಶದ ಲಸಿಕೆ ವಿತರಣೆಯ ಶೇ.88ರಷ್ಟು ಪ್ರಮಾಣ ಕೊವಿಶೀಲ್ಡ್ನದ್ದಾಗಿದೆ. ಆರಂಭಿಕ ಹಂತದಲ್ಲಿ ಎರಡು ಡೋಸ್ಗಳ ನಡುವಿನ ಅಂತರವನ್ನು 4ರಿಂದ 6 ವಾರ ಎಂದು ಭಾರತದಲ್ಲಿ ನಿಗದಿಪಡಿಸಲಾಗಿತ್ತಾದರೂ ಅದನ್ನೀಗ 12ರಿಂದ 16ವಾರಗಳಿಗೆ ವಿಸ್ತರಿಸಲಾಗಿದೆ.
ಇದನ್ನೂ ಓದಿ:
ಆಸ್ಟ್ರಾಜೆನೆಕಾ ಲಸಿಕೆಯ ಮೊದಲ ಡೋಸ್ 12 ವಾರಗಳ ನಂತರ ಹೆಚ್ಚು ಪರಿಣಾಮಕಾರಿ; ಎರಡನೇ ಡೋಸ್ ಶಕ್ತಿವರ್ಧಕ; ಆ್ಯಂಡ್ರೂ ಪೊಲಾರ್ಡ್
Corona Vaccine: ಎರಡು ಡೋಸ್ ಕೊರೊನಾ ಲಸಿಕೆ ಪಡೆದವರಿಗೆ ಶುಭಸುದ್ದಿ: ಐಸಿಎಂಆರ್ ಅಧ್ಯಯನದ ಪ್ರಾಥಮಿಕ ವರದಿ