ನವದೆಹಲಿ: ಅನಗತ್ಯ ಗರ್ಭಧಾರಣೆ (Unwanted Pregnancy) ಮತ್ತು ಲೈಂಗಿಕ ರೋಗಗಳನ್ನು ನಿಯಂತ್ರಿಸುವ ಉದ್ದೇಶದಿಂದ ಜನವರಿ 1ರಿಂದ 18ರಿಂದ 25 ವರ್ಷದೊಳಗಿನ ಯುವಜನತೆಗೆ ಉಚಿತ ಕಾಂಡೋಮ್ (Free Condoms) ವಿತರಿಸಲು ಫ್ರಾನ್ಸ್ ಸರ್ಕಾರ (French Government) ನಿರ್ಧರಿಸಿದೆ. ಈ ಬಗ್ಗೆ ಮಹತ್ವದ ಘೋಷಣೆ ಮಾಡಿರುವ ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರನ್ (Emmanuel Macron), ಲೈಂಗಿಕ ರೋಗಗಳ (ಎಸ್‌ಟಿಡಿ) ಹರಡುವಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮುಂದಿನ ವರ್ಷದಿಂದ ಫ್ರಾನ್ಸ್‌ನ ಯುವಜನರಿಗೆ ಮೆಡಿಕಲ್ ಶಾಪ್‌ಗಳಲ್ಲಿ ಉಚಿತವಾಗಿ ಕಾಂಡೋಮ್‌ಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
“2023ರ ಜನವರಿ 1ರಿಂದ ಮೆಡಿಕಲ್ ಶಾಪ್‌ಗಳಲ್ಲಿ 18ರಿಂದ 25 ವರ್ಷ ವಯಸ್ಸಿನವರಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ನೀಡಲಾಗುವುದು” ಎಂದು ಮ್ಯಾಕ್ರನ್ ಯುವ ಜನರ ಆರೋಗ್ಯದ ಕುರಿತಾದ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಫ್ರಾನ್ಸ್‌ನಲ್ಲಿ 2020 ಮತ್ತು 2021ರಲ್ಲಿ STDಗಳ ದರವು ಸುಮಾರು 30% ಹೆಚ್ಚಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಅಂದಾಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಜನರಲ್ಲಿ ಅನಗತ್ಯ ಗರ್ಭಧಾರಣೆಯನ್ನು ಕಡಿಮೆ ಮಾಡಲು ಮತ್ತು ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಯಲು 18ರಿಂದ 25 ವರ್ಷ ವಯಸ್ಸಿನವರಿಗೆ ಉಚಿತವಾಗಿ ಕಾಂಡೋಮ್‌ಗಳನ್ನು ಫಾರ್ಮಸಿಗಳು ಒದಗಿಸುತ್ತವೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತಿಳಿಸಿದ್ದಾರೆ.
ಇದನ್ನೂ ಓದಿ: ಫ್ರಾನ್ಸ್ ಸಂಸತ್ನಲ್ಲಿ ಬಹುಮತ ಕಳೆದುಕೊಂಡ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್
ಏಡ್ಸ್ ಮತ್ತು ಇತರ ಲೈಂಗಿಕವಾಗಿ ಹರಡುವ ರೋಗಗಳ (STDs) ಹರಡುವಿಕೆಯನ್ನು ಎದುರಿಸಲು ಫ್ರಾನ್ಸ್‌ನ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯಲ್ಲಿ ಈ ಯೋಜನೆಯನ್ನು ಸರ್ಕಾರ ಜಾರಿಗೆ ತರಲು ನಿರ್ಧರಿಸಿದೆ. ಅನಗತ್ಯ ಗರ್ಭಧಾರಣೆ ಮತ್ತು ಲೈಂಗಿಕ ರೋಗಗಳ (ಎಸ್‌ಟಿಡಿ) ಹರಡುವಿಕೆಯನ್ನು ನಿಯಂತ್ರಿಸಬೇಕಿದೆ. ಹೀಗಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರೆಂಚ್ ಸರ್ಕಾರ ತಿಳಿಸಿದೆ.
ಫ್ರಾನ್ಸ್ ಸರ್ಕಾರ ಈಗಾಗಲೇ 25 ವರ್ಷದೊಳಗಿನ ಎಲ್ಲಾ ಮಹಿಳೆಯರಿಗೆ ಉಚಿತ ಗರ್ಭ ನಿರೋಧಕ ಮಾತ್ರೆಗಳನ್ನು ನೀಡುತ್ತಿದೆ. ಅದೇ ಮಾದರಿಯಲ್ಲಿ ಅನಗತ್ಯ ಗರ್ಭ ಧರಿಸುವಿಕೆಯನ್ನು ತಡೆಗಟ್ಟಲು ಉಚಿತ ಕಾಂಡೋಮ್‌ಗಳನ್ನು ನೀಡಲಾಗುವುದು. ಮುಂದಿನ ದಿನಗಳಲ್ಲಿ 18 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಿಗೂ ಕಾಂಡೋಮ್‌ಗಳನ್ನು ವಿತರಿಸಲಾಗುವುದು ಎಂದು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಹೇಳಿದ್ದಾರೆ.
ಲೈಂಗಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟಲು ಮತ್ತು ಅನಗತ್ಯ ಗರ್ಭಧಾರಣೆಯನ್ನು ತಡೆಯಲು ಯುವತಿಯರು ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕಿಂತ ಯುವಕರು ಕಾಂಡೋಮ್ ಬಳಸುವುದು ಉತ್ತಮ ಎಂದು ಫ್ರಾನ್ಸ್ ಅಧ್ಯಕ್ಷ ಅಭಿಪ್ರಾಯಪಟ್ಟಿದ್ದಾರೆ.
Published On - 5:38 pm, Fri, 9 December 22