ಪ್ಯಾರೀಸ್: ಕರ್ನಾಟಕದಲ್ಲಿ ಇತ್ತೀಚೆಗೆ ಹಿಜಾಬ್ (Hijab Row) ಗಲಾಟೆ ಭುಗಿಲೆದ್ದು, ದೇಶಾದ್ಯಂತ ಸುದ್ದಿಯಾಗಿತ್ತು. ಕರ್ನಾಟಕದಲ್ಲಿ ಶಾಲೆ ಯೂನಿಫಾರ್ಮ್ ಹಾಕಿಕೊಳ್ಳಬೇಕು ಮತ್ತು ಶಾಲೆ ಒಳಗೆ ಹಿಜಾಬ್ ಹಾಕುವಂತಿಲ್ಲ ಎಂದು ಕೋರ್ಟ್ ತೀರ್ಪು ನೀಡಿತ್ತು. ಇದೀಗ ಫ್ರಾನ್ಸ್ನಲ್ಲಿ (France) ಕೂಡ ಹಿಜಾಬ್ ಚರ್ಚೆಗಳು ಶುರುವಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಬ್ಯಾನ್ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಫ್ರಾನ್ಸ್‌ನ ಬಲಪಂಥೀಯ ಅಧ್ಯಕ್ಷೀಯ ಅಭ್ಯರ್ಥಿ ಮರೀನ್ ಲೆ ಪೆನ್ ಅವರು ಸಾರ್ವಜನಿಕವಾಗಿ ಹಿಜಾಬ್ ಧರಿಸುವ ಮುಸ್ಲಿಮರಿಗೆ ದಂಡ ವಿಧಿಸುವುದಾಗಿ ಇಂದು ಪ್ರತಿಜ್ಞೆ ಮಾಡಿದ್ದಾರೆ. ಮೊದಲ ಹಂತದ ಚುನಾವಣೆ ಬೆನ್ನಲ್ಲೇ ಅಭ್ಯರ್ಥಿಗಳು ಕೊನೆಯ ಹಂತದ ಪ್ರಚಾರ ನಡೆಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಈ ಬಾರಿಯೂ ಗೆಲ್ಲುವ ಸಾಧ್ಯತೆಯಿದ್ದರೂ ಅಂತಿಮ ಹಂತದಲ್ಲಿ ಲೆ ಪೆನ್ ಭಾರೀ ಪೈಪೋಟಿ ನೀಡುವ ಸಾಧ್ಯತೆಯಿದೆ. ಫ್ರಾನ್ಸ್‌ನ ಸಾಂಪ್ರದಾಯಿಕ ಬಲ- ಮತ್ತು ಎಡ-ಪಂಥೀಯ ಪಕ್ಷಗಳು ಚುನಾವಣಾ ಸಮರವನ್ನು ಎದುರಿಸುತ್ತಿರುವಾಗ, ತೀವ್ರ-ಎಡಪಂಥೀಯ ಅಭ್ಯರ್ಥಿ ಜೀನ್-ಲುಕ್ ಮೆಲೆನ್‌ಚೋನ್ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾದ ಸಾಧ್ಯತೆಯಿದೆ.
ಇಂದು ಆರ್‌ಟಿಎಲ್ ರೇಡಿಯೊದೊಂದಿಗೆ ಮಾತನಾಡಿದ ಲೆ ಪೆನ್, ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಶಿರಸ್ತ್ರಾಣವನ್ನು (ಹಿಜಾಬ್) ನಿಷೇಧಿಸುವ ನನ್ನ ಪ್ರತಿಜ್ಞೆಯನ್ನು ಕಾರ್ಯಗತಗೊಳಿಸಲಾಗುವುದು. ಕಾರ್‌ಗಳಲ್ಲಿ ಸೀಟ್‌ಬೆಲ್ಟ್ ಧರಿಸುವ ರೀತಿಯಲ್ಲಿಯೇ ರಸ್ತೆಗಳಲ್ಲಿ ಹಿಜಾಬ್ ಧರಿಸುವ ವಿಚಾರದಲ್ಲಿಯೂ ಪೊಲೀಸರು ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಮಾಡಲಾಗುವುದು. ಪೊಲೀಸರ ಮೂಲಕವೇ ಈ ಆದೇಶವನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
“ನಿಮ್ಮ ಸೀಟ್ ಬೆಲ್ಟ್ ಧರಿಸದಿರುವುದು ಕಾನೂನುಬಾಹಿರವಾದ್ದರಿಂದ ಜನರಿಗೆ ದಂಡವನ್ನು ವಿಧಿಸಲಾಗುತ್ತದೆ. ಈ ಕ್ರಮವನ್ನು ಜಾರಿಗೊಳಿಸಲು ಪೊಲೀಸರು ತುಂಬಾ ಸಮರ್ಥರಾಗಿದ್ದಾರೆಂದು ನನಗೆ ಅನಿಸುತ್ತಿದೆ. ಅದೇ ರೀತಿಯಲ್ಲಿ ಮುಸ್ಲಿಮರು ಶಿರಸ್ತ್ರಾಣ ಧರಿಸದಂತೆಯೂ ಪೊಲೀಸರೇ ಎಚ್ಚರ ವಹಿಸುತ್ತಾರೆ” ಎಂದು ಅವರು ಹೇಳಿದ್ದಾರೆ.
ಎರಡನೇ ಸುತ್ತಿನ ಚುನಾವಣೆಯನ್ನು ಏಪ್ರಿಲ್ 24 ರಂದು ನಿಗದಿಪಡಿಸಲಾಗಿದೆ. ಸರಾಸರಿ ಸಮೀಕ್ಷೆಗಳ ಪ್ರಕಾರ ಮ್ಯಾಕ್ರನ್ ಶೇ. 54 ಮತ್ತು ಲೆ ಪೆನ್ ಶೇ. 46ರಷ್ಟು ಮುನ್ನಡೆ ಸಾಧಿಸಿದ್ದಾರೆ. ಲೆ ಪೆನ್ ತನ್ನ ಕೊನೆಯ ಪ್ರಚಾರ ರ್ಯಾಲಿಯನ್ನು ಇಂದು ಸಂಜೆ ದಕ್ಷಿಣದ ಭದ್ರಕೋಟೆಯಾದ ಪರ್ಪಿಗ್ನಾನ್‌ನಲ್ಲಿ ನಡೆಸಿದ್ದಾರೆ.
US Covid cases: ಅಮೇರಿಕಾ, ಫ್ರಾನ್ಸ್ನಲ್ಲಿ ತೀವ್ರಗತಿಯಲ್ಲಿ ಏರುತ್ತಿವೆ ಕೊರೊನಾ ಪ್ರಕರಣಗಳು; ಇಲ್ಲಿದೆ ಅಂಕಿಅಂಶ