ಸರ್ಜನ್​ನಿಂದ ಅಲ್​ಖೈದಾ ನಾಯಕನವರೆಗೆ; ಅಮೆರಿಕಾದ ಡ್ರೋನ್ ದಾಳಿಗೆ ಬಲಿಯಾದ ಅಯ್ಮನ್ ಅಲ್-ಜವಾಹಿರಿ ಪಯಣ ಹೀಗಿತ್ತು

| Updated By: ಸುಷ್ಮಾ ಚಕ್ರೆ

Updated on: Aug 02, 2022 | 10:39 AM

71 ವರ್ಷದ ಅಲ್- ಜವಾಹಿರಿ ಒಂದು ಕಾಲದಲ್ಲಿ ಒಸಾಮಾ ಬಿನ್ ಲಾಡೆನ್ ಅವರ ವೈಯಕ್ತಿಕ ವೈದ್ಯರಾಗಿ (ಸರ್ಜನ್) ಕೆಲಸ ಮಾಡಿದ್ದರು.

ಸರ್ಜನ್​ನಿಂದ ಅಲ್​ಖೈದಾ ನಾಯಕನವರೆಗೆ; ಅಮೆರಿಕಾದ ಡ್ರೋನ್ ದಾಳಿಗೆ ಬಲಿಯಾದ ಅಯ್ಮನ್ ಅಲ್-ಜವಾಹಿರಿ ಪಯಣ ಹೀಗಿತ್ತು
ಒಸಾಮಾ ಬಿನ್ ಲಾಡೆನ್ ಜೊತೆ ಅಲ್​- ಜವಾಹಿರಿ
Image Credit source: Hindustan Times
Follow us on

ಕಾಬೂಲ್: ಕಾಬೂಲ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅಲ್-ಖೈದಾ ನಾಯಕ ಅಯ್ಮನ್ ಅಲ್-ಜವಾಹಿರಿಯನ್ನು (Ayman al-Zawahiri) ಹತ್ಯೆಗೈದಿರುವುದಾಗಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ (Joe Biden) ಘೋಷಿಸಿದ್ದಾರೆ. ಅಲ್-ಜವಾಹಿರಿಯನ್ನು ಹತ್ಯೆ ಕಾರ್ಯಾಚರಣೆಯ ಸಮಯದಲ್ಲಿ ಕೊಲ್ಲಲ್ಪಟ್ಟಾಗ ಆತ ತನ್ನ ಕುಟುಂಬದೊಂದಿಗೆ ಅವಿತುಕೊಂಡಿದ್ದ. ಆದರೆ, ಆತನ ಕುಟುಂಬದ ಸದಸ್ಯರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಬೈಡೆನ್ ಹೇಳಿದ್ದಾರೆ.

ಅಯ್ಮನ್ ಅಲ್-ಜವಾಹಿರಿ ಬಗೆಗಿನ 5 ಕುತೂಹಲಕಾರಿ ವಿಷಯಗಳು ಇಲ್ಲಿವೆ:

1. ಅಯ್ಮನ್ ಅಲ್- ಜವಾಹಿರಿ ಈಜಿಪ್ಟಿನ ಪ್ರಜೆ. ಅಯ್ಮನ್ ಅಲ್-ಜವಾಹಿರಿ 1951ರ ಜೂನ್ 19ರಂದು ಆಫ್ರಿಕನ್ ರಾಷ್ಟ್ರದ ಗಿಜಾದಲ್ಲಿ ಜನಿಸಿದರು. 2011ರ ಜೂನ್ ತಿಂಗಳಲ್ಲಿ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಮೆರಿಕ ದಾಳಿ ನಡೆಸಿ ಒಸಾಮಾ ಬಿನ್ ಲಾಡೆನ್​ನನ್ನು ಕೊಂದ ನಂತರ ಅಯ್ಮನ್ ಅಲ್-ಜವಾಹಿರಿ ಅವರನ್ನು ಅಲ್-ಖೈದಾದ ಎರಡನೇ ‘ಜನರಲ್ ಎಮಿರ್’ ಎಂದು ಘೋಷಿಸಲಾಯಿತು.

2. ಬ್ಯುಸಿನೆಸ್ ಮತ್ತು ಎಕನಾಮಿಕ್ಸ್​ ಅಡ್ಮಿನಿಸ್ಟ್ರೇಷನ್ ಅಧ್ಯಯನ ಮಾಡಿದ ಅಲ್ ಜವಾಹಿರಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿಯನ್ನು ಸಹ ಪಡೆದರು. 71 ವರ್ಷ ವಯಸ್ಸಿನ ಜವಾಹಿರಿ ಮೂರು ವರ್ಷಗಳ ಕಾಲ ಈಜಿಪ್ಟ್ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: Al-Zawahiri: ಕರ್ನಾಟಕದ ಮೇಲೆ ಕಣ್ಣಿಟ್ಟಿದ್ದ ಅಲ್​ಖೈದಾ ಉಗ್ರರ ಮುಖ್ಯಸ್ಥ ಅಲ್​-ಜವಾಹಿರಿ ಹತ್ಯೆ

3. ಅಲ್- ಜವಾಹಿರಿ 30 ವರ್ಷ ವಯಸ್ಸಿನ ಯುವಕನಾಗಿದ್ದಾಗ, ಅನ್ವರ್ ಸಾದತ್ ಅವರ ಹತ್ಯೆಗಾಗಿ 1981ರ ಅಕ್ಟೋಬರ್‌ನಲ್ಲಿ ಬಂಧಿಸಲ್ಪಟ್ಟ ನೂರಾರು ಜನರ ಪೈಕಿ ಒಬ್ಬರಾಗಿದ್ದರು. 1998ರಲ್ಲಿ ಅಲ್-ಜವಾಹಿರಿ ಈಜಿಪ್ಟಿನ ಇಸ್ಲಾಮಿಕ್ ಜಿಹಾದ್ (EIJ) ಅನ್ನು ಅಲ್-ಖೈದಾದೊಂದಿಗೆ ವಿಲೀನಗೊಳಿಸಿದರು. ಬಿನ್ ಲಾಡೆನ್‌ನ ಪ್ರಮುಖ ಸಹಾಯಕರಾಗಿ ಅಮೆರಿಕಾದ ವಿರುದ್ಧದ ಹಲವಾರು ದಾಳಿಗಳಲ್ಲಿ ನೇರವಾದ ಪಾಲ್ಗೊಂಡಿದ್ದರು.

4. ಅಮೆರಿಕಾದಲ್ಲಿ ನಡೆದ ಭೀಕರ ದಾಳಿಯಲ್ಲಿ 4 ವಿಮಾನಗಳನ್ನು ಹೈಜಾಕ್ ಮಾಡುವಲ್ಲಿ ಈಜಿಪ್ಟ್​ ವೈದ್ಯಾಧಿಕಾರಿ ಅಲ್- ಜವಾಹಿರಿ ಪ್ರಮುಖ ಪಾತ್ರ ವಹಿಸಿದ್ದರು. ಈ ದಾಳಿಯಲ್ಲಿ 3 ಸಾವಿರ ಜನರು ಸಾವನ್ನಪ್ಪಿದ್ದರು.

5. 71 ವರ್ಷದ ಅಲ್- ಜವಾಹಿರಿ ಒಂದು ಕಾಲದಲ್ಲಿ ಒಸಾಮಾ ಬಿನ್ ಲಾಡೆನ್ ಅವರ ವೈಯಕ್ತಿಕ ವೈದ್ಯರಾಗಿ (ಸರ್ಜನ್) ಕೆಲಸ ಮಾಡಿದ್ದರು. ಒಸಾಮಾ ಬಿನ್ ಲಾಡೆನ್‌ನನ್ನು ಕೊಂದ 11 ವರ್ಷಗಳ ನಂತರ ಜವಾಹಿರಿ ಹತ್ಯೆಯಾಗಿದೆ. ಅಮೆರಿಕಾದ ಅಧಿಕಾರಿಯ ಪ್ರಕಾರ, ಜವಾಹಿರಿ ಕಾಬೂಲ್‌ನ ಸುರಕ್ಷಿತ ಗೃಹದಲ್ಲಿ ಆಶ್ರಯ ಪಡೆದಿದ್ದರು. ಜುಲೈ 31ರಂದು ರಾತ್ರಿ 9.48ಕ್ಕೆ ನಡೆದ ಡ್ರೋನ್ ದಾಳಿಯಲ್ಲಿ ಆತನನ್ನು ಕೊಲ್ಲಲಾಗಿದೆ.