G7 Summit 2024: ಇಟಲಿಯಲ್ಲಿ ಪ್ರಧಾನಿ ಮೋದಿ, ಮೆಲೋನಿ ಜತೆ ದ್ವಿಪಕ್ಷೀಯ ಸಭೆ
ಇಟಲಿಯಲ್ಲಿ ಇಂದು ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದು, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜತೆಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ(Narendra Modi) ಇಟಲಿಯಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಳ್ಗೊಳ್ಳಲಿದ್ದಾರೆ. ಇಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹಾಗೂ ಪ್ರಧಾನಿ ಮೋದಿ ನಡುವೆ ದ್ವಿಪಕ್ಷೀಯ ಮಾತುಕತೆಗಳು ನಡೆಯಲಿವೆ. ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ಮೋದಿಯವರ ಮೊದಲ ವಿದೇಶ ಪ್ರವಾಸ ಇದಾಗಿದೆ.
ಬೋರ್ಗೊ ಎಗ್ನಾಜಿಯಾದ ಐಷಾರಾಮಿ ರೆಸಾರ್ಟ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ವಿಶ್ವದ ಗಣ್ಯ ನಾಯಕರ ಜೊತೆಗೆ ಜನರ ಜೀವನ ಸುಧಾರಿಸುವ ಹಾಗೂ ಕೃತಕ ಬುದ್ಧಿಮತ್ತೆ, ಶಕ್ತಿ, ಆಫ್ರಿಕಾ-ಮೆಡಿಟರೇನಿಯನ್ ವಿಷಯ ಸೇರಿದಂತೆ ಹಲವು ವಿಚಾರಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ, ಪೋಪ್ ಫ್ರಾನ್ಸಿಸ್ ಅವರು ಸಹ ಇರಲಿದ್ದಾರೆ.
ಅಪುಲಿಯಾದಲ್ಲಿ ಶೃಂಗಸಭೆಯಲ್ಲಿ ಅವರು ಭಾಗಿಯಾಗಲಿದ್ದು, ಅಲ್ಲಿ ಅವರು ವಿಶ್ವ ನಾಯಕರೊಂದಿಗೆ ಹಲವು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಎಂದು ಭಾರತದ ದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ವಿಡಿಯೋ ಮೂಲಕ ಖಚಿತಪಡಿಸಿದ್ದಾರೆ.
ಮತ್ತಷ್ಟು ಓದಿ: G7 Summit: ಭಾರತೀಯ ಸಂಸ್ಕೃತಿಗೆ ಮನಸೋತ ಇಟಲಿ ಪ್ರಧಾನಿ ಮೆಲೋನಿ; ಕೈ ಮುಗಿದು ಜಿ7 ಶೃಂಗಸಭೆಯ ಅತಿಥಿಗಳಿಗೆ ಸ್ವಾಗತ
ಪ್ರಧಾನಿ ಟ್ವೀಟ್: ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿಗೆ ಆಗಮಿಸಿದ್ದೇನೆ, ವಿಶ್ವ ನಾಯಕರೊಂದಿಗೆ ದ್ವಿಪಪಕ್ಷೀಯ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಎದುರು ನೋಡುತ್ತಿದ್ದೇನೆ. ನಾವೆಲ್ಲರೂ ಒಟ್ಟಾಗಿ, ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ಉಜ್ವಲ ಭವಿಷ್ಯಕ್ಕಾಗಿ ಅಂತಾರಾಷ್ಟ್ರೀಯ ಸಹಕಾರವನ್ನು ಬೆಳೆಸುವ ಗುರಿಯನ್ನು ಹೊಂದಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಹ ಟ್ವೀಟ್ ಮಾಡಿಕೊಂಡಿದ್ದಾರೆ.
ಜಿ7 ಯುಎಸ್, ಯುಕೆ, ಫ್ರಾನ್ಸ್, ಇಟಲಿ, ಜರ್ಮನಿ, ಕೆನಡಾ ಹಾಗೂ ಜಪಾನ್ ಅನ್ನು ಒಳಗೊಂಡಿದೆ. ಭಾರತವಲ್ಲದೆ ಆಫ್ರಿಕಾ, ದಕ್ಷಿಣ ಅಮೆರಿಕ ಹಾಗೂ ಇಂಡೋ ಪೆಸಿಫಿಕ್ ಪ್ರದೇಶದ 11 ಅಭಿವೃದ್ಧಿಶೀಲ ರಾಷ್ಟ್ರಗಳ ನಾಯಕರನ್ನು ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿ ಆಹ್ವಾನಿಸಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಹಿರೋಷಿಮಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಮೋದಿ ಭಾಗವಹಿಸಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ