ಬೀಜಿಂಗ್: ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ (Galwan Clash) ಹತರಾಗಿರುವ ಸೈನಿಕರ ಹೆಸರುಗಳನ್ನು ಚೀನಾ ಬಹಿರಂಗಪಡಿಸಿದೆ. ಪೂರ್ವ ಲಡಾಖ್ ನಲ್ಲಿ 8 ತಿಂಗಳುಗಳ ಹಿಂದೆ ಸಂಘರ್ಷ ನಡೆಿದಿದ್ದು, ನಾಲ್ವರು ಸೈನಿಕರು ಹತರಾಗಿದ್ದಾರೆ ಎಂದು ಚೀನಾ ಹೇಳಿದೆ. ಹತರಾಗಿರುವ ಯೋಧರಿಗೆ ಅಲ್ಲಿನ ಸರ್ಕಾರ ಶೌರ್ಯ ಪ್ರಶಸ್ತಿ ನೀಡಲು ಮುಂದಾಗಿದೆ ಎಂದು ಚೀನಾ ಮಿಲಿಟರಿಯ ಅಧಿಕೃತ ಪತ್ರಿಕೆ ಪಿಎಲ್ಎ ಡೈಲಿ ವರದಿ ಮಾಡಿದೆ.
ಕಳೆದ ವರ್ಷ ಜೂನ್ 15ರಂದು ಗಾಲ್ವಾನ್ ಕಣಿವೆಯ ವಾಸ್ತವ ಗಡಿ ನಿಯಂತ್ರಣಾ ರೇಖೆ (ಎಲ್‌ಎಸಿ) ಬಳಿ ಭಾರತೀಯ ಸೇನೆ ಹಾಗೂ ಚೀನಾದ ಪೀಪಲ್ ಲಿಬರೇಷನ್ ಆರ್ಮಿ (ಪಿಎಲ್‌ಎ) ನಡುವೆ ಸಂಘರ್ಷವೇರ್ಪಟ್ಟಿತ್ತು. ಈ ಸಂಘರ್ಷದಲ್ಲಿ ಭಾರತದ 20 ಸೈನಿಕರು ಹತರಾಗಿದ್ದರು ಎಂದು ಭಾರತ ಹೇಳಿತ್ತು. ಆದರೆ ಗಾಲ್ವಾನ್ ಘರ್ಷಣೆಯಲ್ಲಿ ಹತರಾದ ಸೈನಿಕರ ವಿವರಗಳನ್ನು ಬಹಿರಂಗಪಡಿಸಲು ಚೀನಾ ನಿರಾಕರಿಸಿತ್ತು. ಅಲ್ಲದೆ ಯಾವುದೇ ಸೈನಿಕರು ಹತರಾಗಿಲ್ಲ ಎಂದು ಹೇಳಿಕೆ ನೀಡಿತ್ತು.
ಚೆನ್ ಹೋಂಗ್ ಜುನ್, ಚೆನ್ ಕ್ಲಿಯಾಂಗ್ರಾಂಗ್, ಕ್ಸಿಯೊ ಸಿಯೊನ್ ಮತ್ತು ವಾಂಗ್ ಜೊರೊಮ್ ಎಂಬ ಹೆಸರಿನ ಯೋಧರು ಹುತಾತ್ಮರಾಗಿದ್ದಾರೆ ಎಂದು ಪಿಎಲ್ಎ ಡೈಲಿ ವರದಿಯಲ್ಲಿ ಉಲ್ಲೇಖವಿದೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ. ಸಂಘರ್ಷದಲ್ಲಿ ಚೀನಾಪಡೆಯ ಸಾವು ನೋವಿನ ಬಗ್ಗೆ ಅಲ್ಲಿನ ಸರ್ಕಾರ ಇಲ್ಲಿಯವರೆಗೆ ಯಾವುದೇ ಹೇಳಿಕೆ ನೀಡಿರಲಿಲ್ಲ. ಫೆಬ್ರವರಿ 10ರಂದು ರಷ್ಯಾದ ಸುದ್ದಿ ಸಂಸ್ಥೆ ಟಿಎಎಸ್ಎಸ್ ಗಾಲ್ವಾನ್ ಸಂಘರ್ಷದಲ್ಲಿ 45 ಯೋಧರು ಹತರಾಗಿದ್ದಾರೆ ಎಂದು ವರದಿ ಮಾಡಿರುವುದಾಗಿ ಭಾರತದ ಸೇನಾ ಕಮಾಂಡರ್ (ಉತ್ತರಭಾಗ) ಉಲ್ಲೇಖಿಸಿದ ಬೆನ್ನಲ್ಲೇ ಚೀನಾ ಯೋಧರ ಸಾವಿನ ಸಂಖ್ಯೆ ಬಹಿರಂಗಪಡಿಸಿದೆ.
Four Chinese soldiers, who were sacrificed in last June's border conflict, were posthumously awarded honorary titles and first-class merit citations, Central Military Commission announced Friday. A colonel, who led them and seriously injured, was conferred with honorary title. pic.twitter.com/Io9Wk3pXaU
— People's Daily, China (@PDChina) February 19, 2021
ಗಾಲ್ವಾನ್ ಕಣಿವೆ ಬಳಿ ಗಸ್ತು ತಿರುಗುವುದಕ್ಕೆ ಚೀನಾ ಸೈನಿಕರು ಅಡ್ಡಿ ಪಡಿಸಿದ್ದು ಗಾಲ್ವಾನ್ ಸಂಘರ್ಷಕ್ಕೆ ಕಾರಣವಾಗಿತ್ತು. ಈ ಸಂಘರ್ಷದಲ್ಲಿ ಹಲವಾರು ಭಾರತೀಯರನ್ನು ಚೀನಾ ವಶಕ್ಕೆ ಪಡೆದುಕೊಂಡು ಆಮೇಲೆ ಬಿಡುಗಡೆ ಮಾಡಿತ್ತು . ಹುತಾತ್ಮರಾದ ಭಾರತೀಯ ಯೋಧ ಕರ್ನಲ್ ಸಂತೋಷ್ ಬಾಬು (ಕಮಾಂಡಿಗ್ ಆಫೀಸರ್ 16 ಬಿಹಾರ್) ಅವರಿಗೆ ಮರಣೋತ್ತರ ಮಹಾವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಜೂನ್ 15ರಂದು ನಡೆದದ್ದು ಏನು?
ಭಾರತ-ಚೀನಾ ನಡುವಣ ಗಡಿ ಸಂಘರ್ಷ ದಶಕಗಳಷ್ಟು ಹಳೆಯದು. ಜೂನ್ 15ರಂದು, 20 ಭಾರತೀಯ ಯೋಧರು ಹುತಾತ್ಮರಾಗಲು ಕಾರಣವಾದ ಸಂಘರ್ಷದ ಮುನ್ಸೂಚನೆ ಜೂನ್ 6ರಂದೇ ದೊರೆತಿತ್ತು. ಲಡಾಖ್‌ನ ಗಾಲ್ವನ್ ವಾಸ್ತವ ಗಡಿ ರೇಖೆ ಬಳಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್‌ಎ) ಸೈನಿಕರು ಭಾರತದ ಗಡಿಯೊಳಗೆ ಬೀಡುಬಿಟ್ಟಿದ್ದರು. ಭಾರತಕ್ಕೆ ಸೇರಿದ ಭೂಪ್ರದೇಶದಲ್ಲಿ ಚೀನಾ ಯೋಧರು ಟೆಂಟ್ ಹಾಕಿರುವ ವಿಚಾರವಾಗಿ ಉಭಯ ದೇಶಗಳ ಸೇನಾ ಕಮಾಂಡರ್‌ಗಳ ಮಟ್ಟದ ಮಾತುಕತೆ ಜೂನ್ 6ರಂದು ನಡೆದಿತ್ತು. ಚೀನಾ ಅಲ್ಲಿಂದ ಸೇನೆಯನ್ನು ಹಿಂಪಡೆದಿದೆ ಎಂದು ಹೇಳಿತ್ತಾದರೂ ಅದನ್ನು ಕಾರ್ಯರೂಪಕ್ಕೆ ತಂದಿರಲಿಲ್ಲ.
ಜೂನ್ 15ರಂದು 16ನೇ ಬಿಹಾರ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿ. ಸಂತೋಷ್ ಬಾಬು ನೇತೃತ್ವದ ಯೋಧರ ತಂಡ ಗಸ್ತು ತಿರುಗಿದಾಗ ಗಸ್ತು ಪಾಯಿಂಟ್ 14 (ಪಿಪಿ14) ಬಳಿ ಚೀನಾ ಯೋಧರ ಟೆಂಟ್ ಇರುವುದು ಗಮನಕ್ಕೆ ಬಂದಿತ್ತು. ಈ ವೇಳೆ ಬಲ ಪ್ರಯೋಗದ ಮೂಲಕ ಚೀನಾ ಸೈನಿಕರನ್ನು ಭಾರತೀಯ ಯೋಧರು ಗಸ್ತು ಪಾಯಿಂಟ್ 14ರ ಆಚೆಗೆ ಹಿಮ್ಮೆಟ್ಟಿಸಿದ್ದರು. ಬಳಿಕ ಚೀನಾ ಯೋಧರು ಭಾರತದ ನೆಲದಲ್ಲಿ ಹಾಕಿದ್ದ ಟೆಂಟ್‌ಗಳನ್ನು ಸಂತೋಷ್ ಬಾಬು ನೇತೃತ್ವದ ತಂಡ ಸುಟ್ಟುಹಾಕಿ ವೀಕ್ಷಣಾ ಪೋಸ್ಟ್ ಅನ್ನೂ ನಾಶಪಡಿಸಿತ್ತು. ನಂತರ ನಡೆದ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.
ಇದನ್ನೂ ಓದಿ: ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬುಗೆ ಮಹಾವೀರ ಚಕ್ರ ಗೌರವ