ಚೀನಾದ ತಂತ್ರವನ್ನೇ ಬಳಸಿ ಡ್ರ್ಯಾಗನ್ನ ಮಣಿಸಲು ಭಾರತದ ಮಾಸ್ಟರ್ಪ್ಲಾನ್
ದೆಹಲಿ: ಕಳೆದ ಏಪ್ರಿಲ್ನಿಂದ ಸಣ್ಣ ಪ್ರಮಾಣದಲ್ಲಿ ಆರಂಭವಾದ ಭಾರತ-ಚೀನಾದ ಗಡಿ ವಿವಾದ ಈಗ ಬೃಹದಾಕಾರವಾಗಿ ಬೆಳೆದು ನಿಂತಿದೆ. ರಾಜಕೀಯ, ಸೇನಾ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ನಡೆದರೂ ಗಡಿ ಬಿಕ್ಕಟ್ಟು ಬಗೆಹರಿಯುತ್ತಿಲ್ಲ. ಈಗ ಭಾರತ ಮತ್ತು ಚೀನಾದ ನಡುವೆ ಗಡಿ ಬಿಕ್ಕಟ್ಟಿನ ಪರಿಹಾರದ ಬಗ್ಗೆ ಗೌಪ್ಯ ಮಾತುಕತೆ ಕೂಡ ನಡೆಯುತ್ತಿದೆ. ಜೊತೆಗೆ, ನೀವು ಗಡಿಯಿಂದ ಹಿಂದೆ ಸರಿದ್ರೆ, ನಾವೂ ಹಿಂದೆ ಸರಿಯುತ್ತೇವೆ ಅಂತಾ ಭಾರತ ನೇರವಾಗಿ ಚೀನಾಗೆ ಹೇಳಿದೆ. ಎರಡೂ ದೇಶಗಳ ನಡುವೆ ಈಗ ನಿರ್ಣಾಯಕ ಮಾತುಕತೆ […]
ದೆಹಲಿ: ಕಳೆದ ಏಪ್ರಿಲ್ನಿಂದ ಸಣ್ಣ ಪ್ರಮಾಣದಲ್ಲಿ ಆರಂಭವಾದ ಭಾರತ-ಚೀನಾದ ಗಡಿ ವಿವಾದ ಈಗ ಬೃಹದಾಕಾರವಾಗಿ ಬೆಳೆದು ನಿಂತಿದೆ. ರಾಜಕೀಯ, ಸೇನಾ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ನಡೆದರೂ ಗಡಿ ಬಿಕ್ಕಟ್ಟು ಬಗೆಹರಿಯುತ್ತಿಲ್ಲ. ಈಗ ಭಾರತ ಮತ್ತು ಚೀನಾದ ನಡುವೆ ಗಡಿ ಬಿಕ್ಕಟ್ಟಿನ ಪರಿಹಾರದ ಬಗ್ಗೆ ಗೌಪ್ಯ ಮಾತುಕತೆ ಕೂಡ ನಡೆಯುತ್ತಿದೆ. ಜೊತೆಗೆ, ನೀವು ಗಡಿಯಿಂದ ಹಿಂದೆ ಸರಿದ್ರೆ, ನಾವೂ ಹಿಂದೆ ಸರಿಯುತ್ತೇವೆ ಅಂತಾ ಭಾರತ ನೇರವಾಗಿ ಚೀನಾಗೆ ಹೇಳಿದೆ. ಎರಡೂ ದೇಶಗಳ ನಡುವೆ ಈಗ ನಿರ್ಣಾಯಕ ಮಾತುಕತೆ ನಡೆಯುತ್ತಿದೆ. ಚುಶುಲ್ನಿಂದ ಭಾರತ ಹಿಂದೆ ಸರಿಯಲಿ ಎಂದ ಚೀನಾ ಭಾರತ-ಚೀನಾದ ನಡುವಿನ ಗಡಿ ವಿವಾದ 1947ರಿಂದಲೂ ಇದೆ. 1962ರಲ್ಲಿ ವಿಕೋಪಕ್ಕೆ ಹೋಗಿ ಎರಡು ದೇಶಗಳ ನಡುವೆ ಯುದ್ಧವೂ ಆಗಿದೆ. ಈ ವರ್ಷ ಜೂನ್ 20ರಂದು ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಘರ್ಷಣೆಯು ನಡೆದು ಎರಡು ದೇಶಗಳ ಸೈನಿಕರು ಸಾವನ್ನಪ್ಪಿದ್ದಾರೆ. ಈ ವರ್ಷದ ಏಪ್ರಿಲ್ನಿಂದ ಚೀನಾ ಮತ್ತೆ ನಿಧಾನವಾಗಿ ಭಾರತದ ಭೂಮಿಯನ್ನು ಅತಿಕ್ರಮಿಸಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಭಾರತವು ಕೂಡ ಈ ಹಿಂದೆ ಚೀನಾದ ವಶದಲ್ಲಿದ್ದ ಕೆಲ ಪ್ರಮುಖ ಪ್ರದೇಶಗಳನ್ನ ತನ್ನ ವಶಕ್ಕೆ ತೆಗೆದುಕೊಂಡಿದೆ. ಹೀಗಾಗಿ, ಈಗ ಚೀನಾ ದೇಶವೇ ಭಾರತದ ಪಟ್ಟಿಗೆ ಮಣಿಯಬೇಕಾದ ಪರಿಸ್ಥಿತಿ ಬಂದಿದೆ. ಚೀನಾದ ವಶದಲ್ಲಿದ್ದ ಎತ್ತರದ ಬೆಟ್ಟಗುಡ್ಡ ಪ್ರದೇಶಗಳನ್ನು ಭಾರತದ ಸೈನಿಕರು ತಮ್ಮ ವಶಕ್ಕೆ ತೆಗೆದಕೊಂಡಿದ್ದಾರೆ. ಎತ್ತರದ ಬೆಟ್ಟಗುಡ್ಡಗಳಿಂದ ಚೀನಾದ ಸೈನಿಕರ ಮೇಲೆ ನಿಗಾ ಇಡಲು ಸಹಕಾರಿಯಾಗಿದೆ. ಚುಶುಲ್ನ ಎತ್ತರದ ಬೆಟ್ಟ ಪ್ರದೇಶವನ್ನು ಭಾರತ ತನ್ನ ವಶಕ್ಕೆ ತೆಗೆದುಕೊಂಡು ಸೈನಿಕರನ್ನು ನಿಯೋಜಿಸಿದೆ. ಇದೇ ರೀತಿ ಭಾರತವು ಪಾಂಗಾಂಗ್ ತ್ಸೋ ಸರೋವರದ ದಕ್ಷಿಣ ಭಾಗವನ್ನು ಕೂಡ ತನ್ನ ವಶಕ್ಕೆ ತೆಗೆದುಕೊಂಡಿದೆ.
ಚೀನಾ ಈಗ ಭಾರತದ ಭೂ ಭಾಗವನ್ನು ಬಿಟ್ಟು ಹಿಂದೆ ಸರಿಯುವಂತೆ ಮಾಡಲು ಭಾರತ ಕೂಡ ಈಗ ಚೀನಾದ ಮಿಲಿಟರಿ ಕಾರ್ಯತಂತ್ರವನ್ನೇ ಆಳವಡಿಸಿಕೊಂಡಿದೆ. ಚೀನಾ ದೇಶವು ಇದುವರೆಗೂ ನಾಲ್ಕು ಹೆಜ್ಜೆ ಮುಂದೆ ಬಂದು ಭಾರತದ ಭೂಭಾಗವನ್ನು ಅತಿಕ್ರಮಿಸಿಕೊಳ್ಳುತ್ತಿತ್ತು. ಭಾರತ ವಿರೋಧ ವ್ಯಕ್ತಪಡಿಸಿದಾಗ, ಎರಡು ಹೆಜ್ಜೆ ಮಾತ್ರ ಹಿಂದೆ ಸರಿಯುತ್ತಿತ್ತು. ಇನ್ನೂ ಎರಡು ಹೆಜ್ಜೆ ಭಾರತದ ಭೂಮಿಯನ್ನ ತನ್ನ ವಶದಲ್ಲೇ ಇರಿಸಿಕೊಳ್ಳುತ್ತಿತ್ತು. ಈ ಕಾರ್ಯತಂತ್ರವು ಭಾರತದ ಮಿಲಿಟರಿಗೆ ಚೆನ್ನಾಗಿ ಅರ್ಥವಾಗಿ ಹೋಗಿದೆ. ಹೀಗಾಗಿ ಈ ಭಾರಿ ಹಿಂದಿನ ತಪ್ಪುಗಳಿಂದ ಭಾರತ ಪಾಠ ಕಲಿತಿದೆ. ಪರಿಣಾಮವಾಗಿ ಈ ಭಾರಿ ಭಾರತವು ಚೀನಾದ ಏಳು ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಈ ಮೂಲಕ ಚೀನಾದ ಭೂಮಿ ಅತಿಕ್ರಮಣವನ್ನು ಮಟ್ಟ ಹಾಕಲು ಭಾರತ ಪ್ಲ್ಯಾನ್ ಮಾಡಿದೆ. ಚೀನಾದ ಮೇಲೆ ಭಾರತವೇ ಒತ್ತಡ ಹೇರುವ ಸ್ಥಿತಿಯಲ್ಲಿದೆ ಚೀನಾಕ್ಕೆ ಮತ್ತೆ ತನ್ನ ಪ್ರದೇಶಗಳನ್ನ ವಶಕ್ಕೆ ತೆಗೆದುಕೊಳ್ಳಬೇಕೆಂದರೇ, ಭಾರತದ ಭೂ ಭಾಗದಿಂದ ಹಿಂದೆ ಸರಿಯಲೇಬೇಕು ಎಂದು ಭಾರತ ಪೂರ್ವ ಷರತ್ತನ್ನು ಚೀನಾಗೆ ವಿಧಿಸುತ್ತಿದೆ. ಈ ಮೂಲಕ ಮಿಲಿಟರಿ, ರಾಜಕೀಯ, ರಾಜತಾಂತ್ರಿಕ ಮಾತುಕತೆಯಲ್ಲಿ ಭಾರತದ ಕೈ ಮೇಲಾಗಲಿದೆ. ಭಾರತದ ಈ ಪಟ್ಟಿಗೆ ಚೀನಾ ಮಣಿಯಲೇಬೇಕು. ಮಾತುಕತೆಯಲ್ಲಿ ಭಾರತದ ಮೇಲೆ ಚೀನಾಗೆ ಈಗ ಒತ್ತಡ ಹೇರಲು ಸಾಧ್ಯವಿಲ್ಲ. ಚೀನಾದ ಮೇಲೆ ಭಾರತವೇ ಒತ್ತಡ ಹೇರುವ ಸ್ಥಿತಿಯಲ್ಲಿದೆ. ಆಗಸ್ಟ್ ತಿಂಗಳ ಅಂತ್ಯ ಭಾಗದಲ್ಲಿ ಚುಶುಲ್ ಸೆಕ್ಟರ್ ಪ್ರಮುಖ ಸ್ಥಳಗಳನ್ನು ಭಾರತ ತನ್ನ ವಶಕ್ಕೆ ತೆಗೆದುಕೊಂಡಿದೆ. ಚುಶುಲ್ ಸೆಕ್ಟರ್ನ ಪ್ರದೇಶಗಳು ಅತಿ ಎತ್ತರದಲ್ಲಿದ್ದು, ಚೀನಾದ ಸ್ಪಂಗೂರ್ ಗ್ಯಾಪ್‌ನ ಕಡೆಗೆ ಮುಖ ಮಾಡಿ ಚೀನೀ ಸೈನಿಕರ ಮೇಲೆ ನಿಗಾ ಇಡಬಹುದು. ಜೊತೆಗೆ, ಮಾಲ್ಡೋನಲ್ಲಿರುವ ಚೈನೀಸ್ ಪಾಳಿಯ ಕಡೆಗೂ ಭಾರತದ ಸೈನಿಕರು ಎತ್ತರದ ಪ್ರದೇಶದಿಂದ ನಿಗಾ ವಹಿಸಬಹುದು.
ಚೀನಾದ ಮೇಲೆ ವಿಶ್ವಾಸ ಇಡಲು ಸಾಧ್ಯವಿಲ್ಲ ಇನ್ನೂ ಕಳೆದ ಸೋಮವಾರ ನಡೆದ 7ನೇ ಸುತ್ತಿನ ಮಿಲಿಟರಿ ಕೋರ್ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಭಾರತವು ಪಾಂಗಾಂಗ್ ತ್ಸೋ ಸರೋವರದ ದಕ್ಷಿಣ ಭಾಗದಿಂದ ಹಿಂದೆ ಸರಿಯಲಿ ಎಂದು ಚೀನಾ ಬೇಡಿಕೆ ಇಟ್ಟಿದೆ. ಇದಕ್ಕೆ ಪ್ರತಿಯಾಗಿ ಭಾರತವು ಚೀನಾ ಕೂಡ ಪಾಂಗಾಂಗ್ ತ್ಸೋ ಸರೋವರದ ಉತ್ತರ ಭಾಗದಿಂದ ಹಿಂದೆ ಸರಿಯಲಿ. ಎರಡೂ ದೇಶಗಳು ಏಕಕಾಲಕ್ಕೆ ಪರಸ್ಪರ ಒಪ್ಪಿತ ಸ್ಥಳದವರೆಗೂ ಹಿಂದೆ ಸರಿಯಲಿ ಎಂದು ಭಾರತ ಪ್ರತಿ ಪಟ್ಟು ಹಾಕಿದೆ.
ಆದರೆ, ಚೀನಾ ಮಾತ್ರ ಭಾರತದ ಭೂಭಾಗದಿಂದ ಹಿಂದೆ ಸರಿಯುತ್ತಿಲ್ಲ. ಗಡಿಯಲ್ಲಿ ಏನು ಬೇಕಾದರೂ ಆಗಬಹುದು, ಚೀನಾದ ಮೇಲೆ ವಿಶ್ವಾಸ ಇಡಲು ಸಾಧ್ಯವಿಲ್ಲ, ಭಾರತವು ಎಂಥದ್ದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ದವಾಗಿದೆ ಎಂದು ಭಾರತದ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.
ಇನ್ನೂ ಎರಡೂ ದೇಶಗಳ ನಡುವೆ ಮಾತುಕತೆ ನಡೆಯುತ್ತಿದೆ. ಗೌಪ್ಯ ಮಾತುಕತೆ ಎರಡೂ ದೇಶಗಳ ನಡುವೆ ನಡೆಯುತ್ತಿದ್ದು, ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಒಟ್ಟಿನಲ್ಲಿ ತೀವ್ರ ಶೀತದ ಚಳಿಗಾಲವನ್ನು ಗಡಿಯಲ್ಲಿ ಎದುರಿಸಲು ಎರಡೂ ದೇಶಗಳ ಸೇನಾಪಡೆ ಸಿದ್ಧತೆ ನಡೆಸಿವೆ. ಹೀಗಾಗಿ, ಗಡಿ ಬಿಕ್ಕಟ್ಟು ದೀರ್ಘಕಾಲದವರೆಗೂ ಮುಂದುವರೆಯುವ ಸುಳಿವುನ್ನು ಎರಡೂ ದೇಶಗಳು ನೀಡಿವೆ.