RCB vs CSK, IPL 2025: ಸೋಲಿಗೆ ನಾನೇ ಕಾರಣ: ಆರ್‌ಸಿಬಿ ವಿರುದ್ಧ ಸೋತ ನಂತರ ಧೋನಿ ಶಾಕಿಂಗ್ ಹೇಳಿಕೆ
MS Dhoni Post Match presentation: ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ಮ್ಯಾಚ್ ಫಿನಿಶ್ ಮಾಡಲು ಸಾಧ್ಯವಾಗದೆ 8 ಎಸೆತಗಳಲ್ಲಿ 12 ರನ್ ಗಳಿಸಿ ಕೊನೆಯ ಓವರ್‌ನಲ್ಲಿ ಔಟಾದರು. ಪಂದ್ಯದ ನಂತರ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ, ನಾವು ಇನ್ನೂ ಕೆಲವು ದೊಡ್ಡ ಹೊಡೆತಗಳನ್ನು ಆಡಬೇಕಿತ್ತು. ಇದಕ್ಕಾಗಿ ನಾನು ನನ್ನ ತಪ್ಪನ್ನು ಸಹ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಬೆಂಗಳೂರು (ಮೇ. 04): ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಎರಡು ರನ್‌ಗಳ ಸೋಲಿನ ನಂತರ, ಚೆನ್ನೈ ಸೂಪರ್ ಕಿಂಗ್ಸ್ (Royal Challengers Bengaluru vs Chennai Super Kings) ನಾಯಕ ಎಂಎಸ್ ಧೋನಿ ತಮ್ಮ ಬ್ಯಾಟ್ಸ್‌ಮನ್‌ಗಳು ಇನ್ನೂ ಕೆಲವು ದೊಡ್ಡ ಹೊಡೆತಗಳನ್ನು ಹೊಡೆಯುವ ಮೂಲಕ ಒತ್ತಡವನ್ನು ಕಡಿಮೆ ಮಾಡಬೇಕಾಗಿತ್ತು ಎಂದು ಹೇಳಿದ್ದಾರೆ. ಅಲ್ಲದೆ ತಂಡದ ಸೋಲಿಗೆ ಧೋನಿ ತನ್ನನ್ನೇ ಹೊಣೆ ಮಾಡಿಕೊಂಡಿದ್ದಾರೆ. ಗೆಲ್ಲಲು 214 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡವು ಐದು ವಿಕೆಟ್‌ಗಳಿಗೆ 211 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಕೊನೆಯ ಮೂರು ಎಸೆತಗಳಲ್ಲಿ ಅವರಿಗೆ ಆರು ರನ್‌ಗಳು ಬೇಕಾಗಿದ್ದವು. ಆದರೆ ತಂಡವು ಎರಡು ರನ್‌ಗಳಿಂದ ಸೋತಿತು.
ಪಂದ್ಯದ ನಂತರ ಧೋನಿ ಹೇಳಿದ್ದೇನು?
17ನೇ ಓವರ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಕ್ರೀಸ್‌ಗೆ ಬಂದರು. ಆದರೆ, ಪಂದ್ಯವನ್ನು ಫಿನಿಶ್ ಮಾಡಲು ಸಾಧ್ಯವಾಗದೆ 8 ಎಸೆತಗಳಲ್ಲಿ 12 ರನ್ ಗಳಿಸಿ ಕೊನೆಯ ಓವರ್‌ನಲ್ಲಿ ಔಟಾದರು. ಪಂದ್ಯದ ನಂತರ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ, ‘‘ನಾವು ಇನ್ನೂ ಕೆಲವು ದೊಡ್ಡ ಹೊಡೆತಗಳನ್ನು ಆಡುವ ಮೂಲಕ ಒತ್ತಡವನ್ನು ಕಡಿಮೆ ಮಾಡಬೇಕಾಗಿತ್ತು ಎಂದು ನಾನು ಭಾವಿಸುತ್ತೇನೆ. ಇದಕ್ಕಾಗಿ ನಾನು ನನ್ನ ತಪ್ಪನ್ನು ಸಹ ಒಪ್ಪಿಕೊಳ್ಳುತ್ತೇನೆ. ಶೆಫರ್ಡ್ ಡೆತ್ ಓವರ್‌ಗಳಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಹಲವು ರನ್ ಗಳಿಸಿದರು’’ ಎಂದು ಹೇಳಿದ್ದಾರೆ.
ಆರ್‌ಸಿಬಿ ಪರ ರೊಮಾರಿಯೊ ಶೆಫರ್ಡ್ 14 ಎಸೆತಗಳಲ್ಲಿ ಅಜೇಯ 53 ರನ್ ಸಿಡಿಸಿದರು, ಇದು ಐಪಿಎಲ್‌ನಲ್ಲಿ ಜಂಟಿಯಾಗಿ ಎರಡನೇ ವೇಗದ ಅರ್ಧಶತಕವಾಗಿದೆ. ಕೊನೆಯ ಎರಡು ಓವರ್‌ಗಳಲ್ಲಿ ಚೆನ್ನೈ ಬೌಲರ್‌ಗಳು ಬರೋಬ್ಬರಿ 54 ರನ್‌ಗಳನ್ನು ನೀಡಿದರು. ತಮ್ಮ ಬೌಲಿಂಗ್ ಬಗ್ಗೆ ಮಾತನಾಡಿದ ಧೋನಿ, ‘‘ನಾವು ಹೆಚ್ಚು ಯಾರ್ಕರ್‌ಗಳನ್ನು ಬೌಲಿಂಗ್ ಮಾಡುವುದನ್ನು ಅಭ್ಯಾಸ ಮಾಡಬೇಕು’’ ಎಂದು ಹೇಳಿದರು. ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿ ಸೆಟ್ ಆದಾಗ ಯಾರ್ಕರ್‌ಗಳು ಮಾತ್ರ ಉಪಯುಕ್ತ ಆಗುತ್ತದೆ. ನೀವು ಯಾರ್ಕರ್ ಎಸೆಯಲು ಸಾಧ್ಯವಾಗದಿದ್ದರೆ, ಕಡಿಮೆ ಫುಲ್-ಟಾಸ್ ಅತ್ಯುತ್ತಮ ಆಯ್ಕೆಯಾಗಿದೆ. ಪತಿರಣ ವೇಗಿಯಾಗಿದ್ದು, ಬೌನ್ಸರ್‌ಗಳನ್ನು ಸಹ ಎಸೆಯಬಲ್ಲರು. ಅವನು ಯಾರ್ಕರ್ ಎಸೆಯಲು ತಪ್ಪಿದರೆ, ಬ್ಯಾಟ್ಸ್‌ಮನ್ ದೊಡ್ಡ ಹೊಡೆತವನ್ನು ಆಡುವ ಸಾಧ್ಯತೆಯಿದೆ’’ ಎಂದು ಹೇಳಿದ್ದಾರೆ.
IPL 2025: 6,6,4,6, N6,0,4..! ಖಲೀಲ್ ಓವರ್‌ನಲ್ಲಿ 33 ರನ್ ಚಚ್ಚಿದ ಶೆಫರ್ಡ್; ವಿಡಿಯೋ ನೋಡಿ
ಚೆನ್ನೈ ತಂಡಕ್ಕೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ:
ಐಪಿಎಲ್ 2025 ರ ಪಾಯಿಂಟ್ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊನೆಯ ಸ್ಥಾನದಲ್ಲಿದೆ. ಚೆನ್ನೈ 11 ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳನ್ನು ಗೆದ್ದಿದೆ. 4 ಅಂಕಗಳೊಂದಿಗೆ ತಂಡವು ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ಮತ್ತೊಂದೆಡೆ, ಆರ್‌ಸಿಬಿ 11 ಪಂದ್ಯಗಳಲ್ಲಿ 8 ಪಂದ್ಯಗಳಲ್ಲಿ ಜಯಗಳಿಸಿದೆ. ತಂಡವು 16 ಅಂಕಗಳೊಂದಿಗೆ ಬಹುತೇಕ ಪ್ಲೇಆಫ್ ಹಂತಕ್ಕೆ ತಲುಪಿದೆ. ಸದ್ಯ ಆರ್‌ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




