AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಸಿಎಸ್​ಕೆ ವಿರುದ್ಧ 2 ರನ್​​ಗಳ ರೋಚಕ ಜಯ ಸಾಧಿಸಿದ ಆರ್​ಸಿಬಿ

RCB vs CSK IPL 2025: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ ಆರ್‌ಸಿಬಿ, ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು 2 ರನ್‌ಗಳಿಂದ ಸೋಲಿಸಿದೆ. ಕೊನೆಯ ಎಸೆತದವರೆಗೂ ಉಳಿದಿದ್ದ ಥ್ರಿಲ್ಲರ್‌ನಲ್ಲಿ ಆರ್‌ಸಿಬಿ ಐತಿಹಾಸಿಕ ಗೆಲುವು ಸಾಧಿಸಿತು. ಈ ಸೀಸನ್‌ನಲ್ಲಿ ಆರ್‌ಸಿಬಿ ಎರಡೂ ಪಂದ್ಯಗಳಲ್ಲಿ ಚೆನ್ನೈಯನ್ನು ಸೋಲಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಸಿಎಸ್​ಕೆ ತಂಡವನ್ನು ಲೀಗ್ ಹಂತದಲ್ಲಿ 2 ಪಂದ್ಯಗಳಲ್ಲಿ ಸೋಲಿಸಿದ ದಾಖಲೆ ಬರೆದಿದೆ.

IPL 2025: ಸಿಎಸ್​ಕೆ ವಿರುದ್ಧ 2 ರನ್​​ಗಳ ರೋಚಕ ಜಯ ಸಾಧಿಸಿದ ಆರ್​ಸಿಬಿ
Rcb 2025
ಪೃಥ್ವಿಶಂಕರ
|

Updated on:May 04, 2025 | 12:05 AM

Share

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ನಡುವಿನ ರಣರೋಚಕ ಪಂದ್ಯದಲ್ಲಿ ಕೊನೆಗೂ ಆರ್​ಸಿಬಿ ಗೆಲುವು ಸಾಧಿಸಿದೆ. ಕೊನೆಯ ಎಸೆತದವರೆಗೂ ತೀವ್ರ ಕುತೂಹಲ ಮೂಡಿಸಿದ ಈ ಪಂದ್ಯವನ್ನು ರಜತ್ ಪಡೆ 2 ರನ್​​ಗಳಿಂದ ಗೆದ್ದುಕೊಳ್ಳುವುದರೊಂದಿಗೆ ಐತಿಹಾಸಿಕ ಗೆಲುವು ದಾಖಲಿಸಿದೆ. ವಾಸ್ತವವಾಗಿ ಈ ಸೀಸನ್​ನಲ್ಲಿ ಆರ್​ಸಿಬಿ, ಸಿಎಸ್​ಕೆ ತಂಡವನ್ನು ಲೀಗ್ ಹಂತದಲ್ಲೇ ಆಡಿದ ಎರಡೂ ಪಂದ್ಯಗಳಲ್ಲಿ ಸೋಲಿಸಿದೆ. ಈ ಮೂಲಕ ಆರ್​ಸಿಬಿ ಪಂದ್ಯಾವಳಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಎಸ್​ಕೆ ವಿರುದ್ಧ ಈ ಸಾಧನೆ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 213 ರನ್ ಕಲೆಹಾಕಿದರೆ, ಈ ಗುರಿ ಬೆನ್ನಟ್ಟಿದ ಸಿಎಸ್​ಕೆ 211 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ರಣರೋಚಕ ಪಂದ್ಯ

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ರೋಮಾಂಚಕಾರಿ ಪಂದ್ಯದಲ್ಲಿ ಎರಡೂ ತಂಡಗಳಿಂದ ಸ್ಫೋಟಕ ಬ್ಯಾಟಿಂಗ್ ಕಂಡುಬಂತು. ಇದರೊಂದಿಗೆ, ಎರಡೂ ತಂಡಗಳಿಂದ ಕಳಪೆ ಕ್ಷೇತ್ರರಕ್ಷಣೆಯೂ ಕಂಡುಬಂದಿದ್ದು, ಇದು ಈ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಪ್ರಯೋಜನವನ್ನು ನೀಡಿತು. ಹೀಗಾಗಿ ಮೊದಲ ಓವರ್‌ನಿಂದ ಕೊನೆಯ ಓವರ್‌ವರೆಗೆ ಎರಡೂ ತಂಡಗಳ ಜೊತೆಗೆ ಇದ್ದ ವಿಜಯಲಕ್ಷ್ಮೀ, ಕೊನೆಯಲ್ಲಿ ಬೆಂಗಳೂರು ಪರ ವಾಲಿದಳು. ಈ ಗೆಲುವಿನೊಂದಿಗೆ ಆರ್​ಸಿಬಿ ಈ ಸೀಸನ್‌ನಲ್ಲಿ 8ನೇ ಗೆಲುವು ದಾಖಲಿಸುವ ಮೂಲಕ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದಲ್ಲದೆ, ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.

ಕೊಹ್ಲಿ- ಬೆಥೆಲ್ ಸೂಪರ್ ಬ್ಯಾಟಿಂಗ್

ಆರ್​ಸಿಬಿ ಮತ್ತೊಮ್ಮೆ ತವರಿನಲ್ಲಿ ಟಾಸ್ ಸೋತು ಸತತ ಐದನೇ ಬಾರಿಗೆ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಅದರಂತೆ ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಮತ್ತು ಜೆಕೋಬ್ ಬೆಥೆಲ್ ಭರ್ಜರಿ ಆರಂಭ ನೀಡಿ 10 ಓವರ್‌ಗಳಲ್ಲಿ 97 ರನ್‌ಗಳ ಪಾಲುದಾರಿಕೆ ನೀಡಿದರು. ಈ ವೇಳೆ ಬೆಥೆಲ್ ತಮ್ಮ ವೃತ್ತಿಜೀವನದ ಮೊದಲ ಅರ್ಧಶತಕ ಗಳಿಸಿದರೆ, ಕೊಹ್ಲಿ ಈ ಸೀಸನ್​ನ ಏಳನೇ ಅರ್ಧಶತಕ ಪೂರ್ಣಗೊಳಿಸಿದರು. ಆದರೆ 12ನೇ ಓವರ್‌ ಒಳಗೆ ಈ ಇಬ್ಬರು ಔಟಾದ ನಂತರ ತಂಡದ ರನ್ ವೇಗಕ್ಕೆ ಕಡಿವಾಣ ಬಿತ್ತು.

ಶೆಫರ್ಡ್​ ಸುನಾಮಿ

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮುಕ್ತವಾಗಿ ಬ್ಯಾಟ್ ಬೀಸುವಲ್ಲಿನ ಎಡವಿದರು. ಹೀಗಾಗಿ ಒಂದು ಹಂತದಲ್ಲಿ ಆರ್​ಸಿಬಿ 18 ಓವರ್‌ಗಳಲ್ಲಿ ಕೇವಲ 159 ರನ್ ಗಳಿಸಿತ್ತು. ಆದರೆ ಈ ವೇಳೆ ಕಣಕ್ಕಿಳಿದ ರೊಮಾರಿಯೊ ಶೆಫರ್ಡ್ ಸಿಎಸ್​ಕೆ ಬೌಲರ್​ಗಳ ಹೆಡೆಮುರಿ ಕಟ್ಟಿದರು. ಈ ವೆಸ್ಟ್ ಇಂಡೀಸ್ ದೈತ್ಯ ಕೇವಲ 14 ಎಸೆತಗಳಲ್ಲಿ 53 ರನ್ ಗಳಿಸಿದರು. ಅದರಲ್ಲೂ ಕೊನೆಯ 2 ಓವರ್‌ಗಳಲ್ಲಿ ಆರ್‌ಸಿಬಿ 54 ರನ್ ಗಳಿಸಿತು, ಅದರಲ್ಲಿ 52 ರನ್ ಶೆಫರ್ಡ್‌ನದ್ದಾಗಿತ್ತು.

IPL 2025: 6,6,4,6, N6,0,4..! ಖಲೀಲ್ ಓವರ್​ನಲ್ಲಿ 33 ರನ್ ಚಚ್ಚಿದ ಶೆಫರ್ಡ್; ವಿಡಿಯೋ ನೋಡಿ

ಆಯುಷ್- ಜಡೇಜಾ ಇನ್ನಿಂಗ್ಸ್ ವ್ಯರ್ಥ

ಈ ಬೃಹತ್ ಮೊತ್ತ ಬೆನ್ನಟ್ಟಿದ ಸಿಎಸ್​ಕೆ ತಂಡಕ್ಕೆ ಯುವ ಆರಂಭಿಕರಾದ ಆಯುಷ್ ಮ್ಹಾತ್ರೆ ಮತ್ತು ಶೇಖ್ ರಶೀದ್ ಕೂಡ ವೇಗವಾಗಿ ಆಟ ಆರಂಭಿಸಿ 5 ನೇ ಓವರ್‌ನಲ್ಲಿಯೇ 50 ರನ್‌ಗಳನ್ನು ಪೂರ್ಣಗೊಳಿಸಿದರು. ಆದರೆ 5ನೇ ಮತ್ತು 6ನೇ ಓವರ್‌ನಲ್ಲಿ ಕ್ರಮವಾಗಿ ಶೇಖ್ ರಶೀದ್ ಮತ್ತು ಸ್ಯಾಮ್ ಕರನ್ ಔಟಾದರು. ಆದರೆ ಈ ಎರಡು ವಿಕೆಟ್ ಪತನ ಚೆನ್ನೈ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಲಿಲ್ಲ. ಏಕೆಂದರೆ 17 ವರ್ಷದ ಆಯುಷ್ ಪ್ರತಿಯೊಬ್ಬ ಆರ್​ಸಿಬಿ ಬೌಲರ್‌ಗಳನ್ನೂ ಬೆಂಡೆತ್ತಿ ಕೇವಲ 25 ಎಸೆತಗಳಲ್ಲಿ ತನ್ನ ಮೊದಲ ಅರ್ಧಶತಕ ಪೂರ್ನಗೊಳಿಸಿದರು. ಆಯುಷ್​ಗೆ ಸೂಪರ್ ಸಾಥ್ ನೀಡಿದ ರವೀಂದ್ರ ಜಡೇಜಾ ಕೂಡ ಈ ಸೀಸನ್‌ನಲ್ಲಿ ತಮ್ಮ ಮೊದಲ ಅರ್ಧಶತಕ ಗಳಿಸಿದರು. ಈ ಇಬ್ಬರು ಒಟ್ಟಾಗಿ 114 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಈ ಜೊತೆಯಾಟ ಆರ್​ಸಿಬಿ ತಂಡವನ್ನು ಸೋಲಿನ ಅಂಚಿಗೆ ತಳ್ಳಿತು.

IPL 2025: ಈ ಸೀಸನ್​ನ ಅತಿ ವೇಗದ ಅರ್ಧಶತಕ ಸಿಡಿಸಿದ ರೊಮಾರಿಯೊ ಶೆಫರ್ಡ್..! ವಿಡಿಯೋ

ಗೆಲುವಿನ ಹೀರೋ ಯಶ್ ದಯಾಳ್

ಆದರೆ 17 ನೇ ಓವರ್‌ನಲ್ಲಿ, ಲುಂಗಿ ಎನ್‌ಗಿಡಿ ಸತತ ಎಸೆತಗಳಲ್ಲಿ ಮ್ಹಾತ್ರೆ ಮತ್ತು ಡೆವಾಲ್ಡ್ ಬ್ರೆವಿಸ್ ಅವರನ್ನು ಔಟ್ ಮಾಡುವ ಮೂಲಕ ತಂಡವನ್ನು ಮತ್ತೆ ಗೆಲುವಿನ ಟ್ರ್ಯಾಕ್​ಗೆ ತಂದರು. ನಂತರ ಸುಯಶ್ ಶರ್ಮಾ ಮತ್ತು ಭುವನೇಶ್ವರ್ ಕುಮಾರ್ 18-19ನೇ ಓವರ್‌ಗಳಲ್ಲಿ ಮಿತವ್ಯಯದಿಂದ ಬೌಲಿಂಗ್ ಮಾಡಿದರು. ಕೊನೆಯ ಓವರ್‌ನಲ್ಲಿ ಚೆನ್ನೈ ಗೆಲುವಿಗೆ 15 ರನ್‌ಗಳು ಬೇಕಾಗಿದ್ದವು. ಮತ್ತೊಮ್ಮೆ ಚೆಂಡು ಯಶ್ ದಯಾಳ್ ಕೈಯಲ್ಲಿತ್ತು, ಅವರು ಕಳೆದ ವರ್ಷ ಇದೇ ತಂಡದ ವಿರುದ್ಧ 17 ರನ್‌ಗಳನ್ನು ಡಿಫೆಂಡ್ ಮಾಡಿದ್ದರು. ಮತ್ತೊಮ್ಮೆ ಧೋನಿ ಮತ್ತು ಜಡೇಜಾ ಅವರ ಮುಂದೆ ಇದ್ದರು. ದಯಾಳ್ ಮೂರನೇ ಎಸೆತದಲ್ಲೇ ಧೋನಿಯನ್ನು ಔಟ್ ಮಾಡಿದರು. ಆದರೆ ಮುಂದಿನ ಚೆಂಡು ನೋ-ಬಾಲ್ ಆಗಿತ್ತು ಮತ್ತು ಶಿವಂ ದುಬೆ ಆ ಎಸೆತವನ್ನು ಸಿಕ್ಸರ್ ಬಾರಿಸಿದರು. ಈಗ 3 ಎಸೆತಗಳಲ್ಲಿ 6 ರನ್ ಬೇಕಾಗಿತ್ತು. ಆದರೆ ಯಶ್ ದಯಾಳ್ ಮುಂದಿನ 3 ಎಸೆತಗಳಲ್ಲಿ ಕೇವಲ 3 ರನ್ ನೀಡಿ ತಂಡವನ್ನು ಗೆಲ್ಲಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:33 pm, Sat, 3 May 25