IPL 2025: ಡೆವಾಲ್ಡ್ ಬ್ರೆವಿಸ್ಗೆ ರಿವ್ಯೂ ಕೊಡದಿರಲು ಇದುವೇ ಕಾರಣ
IPL 2025 CSK vs RCB: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 52ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 213 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 211 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಐಪಿಎಲ್ನ 52ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 213 ರನ್ ಕಲೆಹಾಕಿತು.
214 ರನ್ಗಳ ಕಠಿಣ ಗುರಿ ಬೆನ್ನತ್ತಿದ ಸಿಎಸ್ಕೆ ತಂಡವು 16.2 ಓವರ್ಗಳಲ್ಲಿ 172 ರನ್ ಕಲೆಹಾಕಿತ್ತು. ಇನ್ನುಳಿದ 22 ಎಸೆತಗಳಲ್ಲಿ ಕೇವಲ 42 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಡೆವಾಲ್ಡ್ ಬ್ರೆವಿಸ್, ಲುಂಗಿ ಎನ್ಗಿಡಿ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿದ್ದರು. ಆರ್ಸಿಬಿ ಆಟಗಾರರು ಮನವಿ ಮಾಡುತ್ತಿದ್ದಂತೆ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಆದರೆ ಆ ಬಳಿಕ ಡೆವಾಲ್ಡ್ ಬ್ರೆವಿಸ್ ಮೇಲ್ಮನವಿ ಅಂಪೈರ್ಗೆ ಕೋರಿಕೆ ಸಲ್ಲಿಸಿದರೂ. ಡಿಆರ್ಎಸ್ಗೆ ಅವಕಾಶ ನೀಡಿರಲಿಲ್ಲ.
ಡಿಆರ್ಎಸ್ಗೆ ಅವಕಾಶ ಕೊಡದಿರಲು ಕಾರಣವೇನು?
ಐಪಿಎಲ್ ನಿಯಮದ ಪ್ರಕಾರ, 15 ಸೆಕೆಂಡ್ಗಳಲ್ಲಿ ಡಿಆರ್ಎಸ್ ತೆಗೆದುಕೊಳ್ಳಬೇಕು. ಆದರೆ ಡೆವಾಲ್ಡ್ ಬ್ರೆವಿಸ್ ಎಲ್ಬಿಡಬ್ಲ್ಯೂ ಆದ ಬಳಿಕ ರನ್ಗಾಗಿ ಓಡಿದ್ದರು. ಎರಡು ರನ್ಗಳನ್ನು ಓಡಿದ ಬಳಿಕ ಅವರು ಅಂಪೈರ್ ಬಳಿ ಡಿಆರ್ಎಸ್ಗೆ ಮನವಿ ಮಾಡಿದ್ದರು. ಅಷ್ಟರಲ್ಲಾಗಲೇ ರಿವ್ಯೂ ಸೆಕೆಂಡ್ಸ್ 25 ಆಗಿತ್ತು.
ಬ್ರೆವಿಸ್ ರಿವ್ಯೂ ಮನವಿ ವಿಡಿಯೋ:
View this post on Instagram
ಅಂದರೆ 25 ಸೆಕೆಂಡ್ಸ್ ಆದಮೇಲಷ್ಟೇ ಬ್ರೆವಿಸ್ ಎಲ್ಬಿಡಬ್ಲ್ಯೂಗೆ ಮನವಿ ಮಾಡಿದ್ದರು. ಹೀಗಾಗಿ ಫೀಲ್ಡ್ ಅಂಪೈರ್ ನಿತಿನ್ ಮೆನನ್ ಈ ಮನವಿಯನ್ನು ತಿರಸ್ಕರಿಸಿದ್ದರು. ಅಲ್ಲದೆ ಫೀಲ್ಡ್ ಅಂಪೈರ್ ತೀರ್ಪಿನಂತೆ ನೀವು ಔಟಾಗಿದ್ದು, ಹಾಗಾಗಿ ಮೈದಾನ ತೊರೆಯುವಂತೆ ಸೂಚಿಸಿದ್ದರು. ಅದರಂತೆ ಡೆವಾಲ್ಡ್ ಬ್ರೆವಿಸ್ ಪೆವಿಲಿಯನ್ಗೆ ಮರಳಿದ್ದರು.
ಅಚ್ಚರಿ ಎಂದರೆ, ರಿಪ್ಲೇನಲ್ಲಿ ಡೆವಾಲ್ಡ್ ಬ್ರೆವಿಸ್ ಕಾಲಿಗೆ ತಾಗಿದ ಚೆಂಡು ವಿಕೆಟ್ನಿಂದ ಹೊರ ಹೋಗುತ್ತಿರುವುದು ಕಂಡು ಬಂದಿದೆ. ಅಂದರೆ ಎಲ್ಬಿಡಬ್ಲ್ಯೂ ಆದ ಬೆನ್ನಲ್ಲೇ ಡಿಆರ್ಎಸ್ ತೆಗೆದುಕೊಳ್ಳದೇ ರನ್ಗಾಗಿ ಓಡಿದ್ದು, ಸಿಎಸ್ಕೆ ಪಾಲಿಗೆ ಮುಳುವಾಯಿತು. ಅಂತಿಮವಾಗಿ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 2 ರನ್ಗಳ ಸೋಲನುಭವಿಸಿದೆ.
ಇದನ್ನೂ ಓದಿ: 11 ಫೋರ್, 3 ಸಿಕ್ಸ್: ಕೊನೆಗೂ ಶತಕ ಪೂರೈಸಿದ ಗ್ಲೆನ್ ಮ್ಯಾಕ್ಸ್ವೆಲ್
ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಇತ್ತ ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.




