ಗಾಜಾ ಕದನ ವಿರಾಮ; 2 ವರ್ಷಗಳ ಬಳಿಕ ಹಮಾಸ್‌ನಿಂದ ಎಲ್ಲಾ ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ
2 ವರ್ಷಗಳ ನಂತರ ಹಮಾಸ್‌ನಿಂದ ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಾಯಿತು. ಅಕ್ಟೋಬರ್ 7, 2023ರಂದು ಹಮಾಸ್ ಉಗ್ರಗಾಮಿಗಳು ದಕ್ಷಿಣ ಇಸ್ರೇಲ್ ಮೇಲೆ ಅನಿರೀಕ್ಷಿತ ದಾಳಿಯನ್ನು ಪ್ರಾರಂಭಿಸಿದಾಗ ಯುದ್ಧ ಪ್ರಾರಂಭವಾಗಿತ್ತು. ಆಗ ಹಮಾಸ್ ಸುಮಾರು 1,200 ನಾಗರಿಕರನ್ನು ಕೊಂದು 251 ಒತ್ತೆಯಾಳುಗಳನ್ನು ತೆಗೆದುಕೊಂಡಿತ್ತು. ಅದಾದ 2 ವರ್ಷಗಳ ಯುದ್ಧದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ ನಂತರ ಮಹತ್ವದ ಕದನ ವಿರಾಮ ನಡೆದಿದೆ.

ನವದೆಹಲಿ, ಅಕ್ಟೋಬರ್ 13: ಹಮಾಸ್ (Hamas) ಮತ್ತು ಇಸ್ರೇಲ್ ನಡುವಿನ 2 ವರ್ಷಗಳ ಯುದ್ಧಕ್ಕೆ ಇದೀಗ ಕದನವಿರಾಮ ಬಿದ್ದಿದೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್ (Israel) ಮತ್ತು ಹಮಾಸ್ ನಡುವಿನ 2 ವರ್ಷಗಳ ಯುದ್ಧದ ನಂತರ ಹಮಾಸ್ ಇಂದು ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು ರೆಡ್ ಕ್ರಾಸ್ ವಶಕ್ಕೆ ಬಿಡುಗಡೆ ಮಾಡಿದೆ. 20 ಒತ್ತೆಯಾಳುಗಳನ್ನು 2 ಬ್ಯಾಚ್‌ಗಳಲ್ಲಿ ಬಿಡುಗಡೆ ಮಾಡಲಾಯಿತು. 13 ಒತ್ತೆಯಾಳುಗಳ ಎರಡನೇ ಗುಂಪನ್ನು ದಕ್ಷಿಣ ಗಾಜಾ ಪಟ್ಟಿಯ ಖಾನ್ ಯೂನಿಸ್‌ನಲ್ಲಿ ವರ್ಗಾಯಿಸಲಾಯಿತು. ನಾಳೆಯೊಳಗೆ 1,900 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ ಕೈದಿಗಳನ್ನು ವಿನಿಮಯ ಮಾಡಿಕೊಳ್ಳುವ ನಿರೀಕ್ಷೆಯಿದೆ.
ಹಮಾಸ್ ಮತ್ತು ಇಸ್ರೇಲ್ ನಡುವಿನ 10 ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ.
- ಇಂದು ಹಮಾಸ್ 20 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಅವರನ್ನು ಇಸ್ರೇಲ್‌ನಲ್ಲಿರುವ ಕುಟುಂಬಗಳೊಂದಿಗೆ ಮತ್ತೆ ಸೇರಿಸಲಾಗುತ್ತದೆ ಮತ್ತು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ.
- ಇಸ್ರೇಲ್‌ನಲ್ಲಿ ಬಂಧಿಸಲ್ಪಟ್ಟ 1,900ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ ಕೈದಿಗಳೊಂದಿಗೆ ಒಟ್ಟು 20 ಜೀವಂತ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಮೃತ 28 ಒತ್ತೆಯಾಳುಗಳ ಶವಗಳು ಸಹ ಒಪ್ಪಂದದ ಭಾಗವಾಗಿದೆ. ಆದರೂ ಅವರ ದೇಹಗಳ ಹಿಂದಿರುಗುವ ನಿಖರವಾದ ಸಮಯ ಅನಿಶ್ಚಿತವಾಗಿದೆ.
- ಇಸ್ರೇಲಿ ಟಿವಿ ಒತ್ತೆಯಾಳುಗಳನ್ನು ರೆಡ್‌ಕ್ರಾಸ್‌ಗೆ ಸುರಕ್ಷಿತವಾಗಿ ವರ್ಗಾಯಿಸುವುದಾಗಿ ಘೋಷಿಸಿದಾಗ ಟೆಲ್ ಅವಿವ್‌ನಲ್ಲಿ ನೆರೆದಿದ್ದ ಕುಟುಂಬಗಳು ಮತ್ತು ಸ್ನೇಹಿತರು ಹರ್ಷೋದ್ಗಾರ ಮಾಡಿದರು.
- ಇಸ್ರೇಲ್ ಬಂಧಿಸಿರುವ ನೂರಾರು ಕೈದಿಗಳ ಬಿಡುಗಡೆಗಾಗಿ ಗಾಜಾದಲ್ಲಿರುವ ಪ್ಯಾಲೆಸ್ಟೀನಿಯನ್ನರು ಕಾಯುತ್ತಿದ್ದರು. ಖಾನ್ ಯೂನಿಸ್‌ನಲ್ಲಿ ಅವರ ವರ್ಗಾವಣೆಗಾಗಿ ಬಸ್‌ಗಳು ಸಾಲುಗಟ್ಟಿ ನಿಂತಿದ್ದವು, ಆದರೂ ನಿಖರವಾದ ಸಮಯವನ್ನು ಘೋಷಿಸಲಾಗಿಲ್ಲ.
- ಈ ಯುದ್ಧವು ಗಾಜಾವನ್ನು ಧ್ವಂಸಗೊಳಿಸಿದೆ. ಅದರ 2 ಮಿಲಿಯನ್ ನಿವಾಸಿಗಳಲ್ಲಿ ಸುಮಾರು 90% ಜನರನ್ನು ಸ್ಥಳಾಂತರಿಸಿದೆ. ಅನೇಕರನ್ನು ಹಸಿವಿನಿಂದ ನರಳಿದ್ದಾರೆ. ಕದನ ವಿರಾಮದ ಭಾಗವಾಗಿ ಆಹಾರ, ಇಂಧನ ಮತ್ತು ವೈದ್ಯಕೀಯ ಸರಬರಾಜುಗಳ ನೂರಾರು ಟ್ರಕ್‌ಗಳ ನೆರವನ್ನು ನಿರೀಕ್ಷಿಸಲಾಗಿದೆ.
- ಕದನ ವಿರಾಮ ಜಾರಿಯನ್ನು ಮೇಲ್ವಿಚಾರಣೆ ಮಾಡಲು, ಒತ್ತೆಯಾಳುಗಳ ಕುಟುಂಬಗಳನ್ನು ಭೇಟಿ ಮಾಡಲು ಮತ್ತು ಯುದ್ಧಾನಂತರದ ಯೋಜನೆಗಳನ್ನು ಚರ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್‌ಗೆ ಆಗಮಿಸಿದ್ದಾರೆ. ನಂತರ ಅವರು ಗಾಜಾದ ಭವಿಷ್ಯದ ಕುರಿತು 20ಕ್ಕೂ ಹೆಚ್ಚು ದೇಶಗಳ ನಾಯಕರೊಂದಿಗೆ ಶೃಂಗಸಭೆಯನ್ನು ಮುನ್ನಡೆಸಲು ಈಜಿಪ್ಟ್‌ಗೆ ಪ್ರಯಾಣ ಬೆಳೆಸಿದ್ದಾರೆ.
- ಅಕ್ಟೋಬರ್ 7, 2023ರಂದು ಹಮಾಸ್ ಉಗ್ರಗಾಮಿಗಳು ದಕ್ಷಿಣ ಇಸ್ರೇಲ್ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ಸುಮಾರು 1,200 ನಾಗರಿಕರನ್ನು ಕೊಂದು 251 ಒತ್ತೆಯಾಳುಗಳನ್ನು ತೆಗೆದುಕೊಂಡಾಗ ಯುದ್ಧ ಪ್ರಾರಂಭವಾಯಿತು.
- ಇಸ್ರೇಲ್‌ನ ನಂತರದ ಮಿಲಿಟರಿ ಕಾರ್ಯಾಚರಣೆಗಳು 67,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರನ್ನು ಹತ್ಯೆ ಮಾಡಿದವು. ಅವರಲ್ಲಿ ಅರ್ಧದಷ್ಟು ಭಾಗ ಮಹಿಳೆಯರು ಮತ್ತು ಮಕ್ಕಳು ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.
- ಇಸ್ರೇಲ್ ಗಾಜಾ ನಗರ ಮತ್ತು ಖಾನ್ ಯೂನಿಸ್‌ನ ಕೆಲವು ಭಾಗಗಳಿಂದ ಹಿಂದೆ ಸರಿದಿದೆ. ಆದರೆ ಸೇನಾಪಡೆಗಳು ರಫಾ ಮತ್ತು ಗಡಿಯಲ್ಲಿ ಉಳಿದಿವೆ. ಕದನ ವಿರಾಮವು ಈಜಿಪ್ಟ್ ಮತ್ತು ಜೋರ್ಡಾನ್‌ನಿಂದ ತರಬೇತಿ ಪಡೆದ ಅರಬ್ ನೇತೃತ್ವದ ಭದ್ರತಾ ಪಡೆ ಮತ್ತು ಪ್ಯಾಲೆಸ್ಟೀನಿಯನ್ ಪೊಲೀಸರ ಯೋಜನೆಗಳನ್ನು ಒಳಗೊಂಡಿದೆ.
- ಕೈದಿಗಳ ವಿನಿಮಯದ ಹೊರತಾಗಿಯೂ ಹಮಾಸ್, ಗಾಜಾ ಆಡಳಿತ ಮತ್ತು ಸಂಭಾವ್ಯ ಪ್ಯಾಲೆಸ್ಟೀನಿಯನ್ ರಾಜ್ಯದ ಸಮಸ್ಯೆ ಸಂಪೂರ್ಣವಾಗಿ ಮುಗಿದಿಲ್ಲ. ಕದನ ವಿರಾಮವು ಪರಿಹಾರ ಮತ್ತು ಮಾನವೀಯ ಸಹಾಯವನ್ನು ನೀಡುತ್ತದೆಯೇ ವಿನಃ ಪ್ರಮುಖ ರಾಜಕೀಯ ಪ್ರಶ್ನೆಗಳನ್ನು ಇನ್ನೂ ಬಗೆಹರಿಸಲು ಸಾಧ್ಯವಾಗಿಲ್ಲ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:03 pm, Mon, 13 October 25
