ರಷ್ಯಾ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್ನ ಸಹಾಯಕ್ಕೆ ಬನ್ನಿ, ಇಲ್ಲಿ ರಷ್ಯಾ ನಿರ್ಮಿಸುತ್ತಿರುವ ಗೋಡೆಯ ನಾಶ ಮಾಡಲು ಸಹಾಯ ಮಾಡಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜರ್ಮನಿಯ ಜನಪ್ರತಿನಿಧಿಗಳ ಬಳಿ ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ. ಇಂದು ಜರ್ಮನಿ ಸಂಸತ್ತನ್ನು ಉದ್ದೇಶಿಸಿ, ವಿಡಿಯೋ ಮೂಲಕ ಮಾತನಾಡಿದ ಝೆಲೆನ್ಸ್ಕಿ, ರಷ್ಯಾ ಉಕ್ರೇನ್ನಲ್ಲಿ ಗೋಡೆ ನಿರ್ಮಾಣ ಮಾಡುತ್ತಿದೆ. ಇದು ಬರ್ಲಿನ್ ವಾಲ್ನಂತಲ್ಲ, ಇದು ಮಧ್ಯ ಏಷ್ಯಾದಲ್ಲಿ, ಸ್ವಾತಂತ್ರ್ಯವನ್ನು ತಡೆಯಲು ಕಟ್ಟಿದ ದಾಸ್ಯವೆಂಬ ಗೋಡೆ. ರಷ್ಯಾ ಉಕ್ರೇನ್ ಮೇಲೆ ಒಂದೊಂದು ಬಾಂಬ್ ಹಾಕಿದಾಗಲೂ ಈ ಗೋಡೆಯ ಗಾತ್ರ ಹೆಚ್ಚುತ್ತಲೇ ಹೋಗುತ್ತಿದೆ ಎಂದು ಜರ್ಮನ್ ಸಂಸದರುಗಳ ಎದುರು ನೋವು ತೋಡಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಝೆಲೆನ್ಸ್ಕಿಯವರನ್ನು ನೋಡಿದರೆ, ಅವರೊಂದು ದೇಶದ ಅಧ್ಯಕ್ಷರಾ ಎಂಬ ಪ್ರಶ್ನೆ ಮೂಡುವಂತಾಗಿದೆ. ಒಂದು ಖಾಕಿ ಬಣ್ಣದ ಟಿ ಶರ್ಟ್ ತೊಟ್ಟಿದ್ದಾರೆ. ಕಣ್ಣ ಕೆಳಗೆ ಕಪ್ಪಾಗಿವೆ. ಝೆಲೆನ್ಸ್ಕಿ ಭಾವನಾತ್ಮಕವಾಗಿ ಮಾತನಾಡುತ್ತಿದ್ದಂತೆ, ಜರ್ಮನ್ ಸಂಸತ್ತಿನ ಕೆಳಮನೆಯ ಸದಸ್ಯರೆಲ್ಲ ಎದ್ದು ನಿಂತು, ಚಪ್ಪಾಳೆ ಹೊಡೆಯುತ್ತ ಗೌರವ ಸೂಚಿಸಿದ್ದಾರೆ. ಈ ಮೂಲಕ ಝೆಲೆನ್ಸ್ಕಿಯವರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಇದೇ ವೇಳೆ ಝೆಲೆನ್ಸ್ಕಿ, ರಷ್ಯಾದಿಂದ ಜರ್ಮನಿಗೆ ಬಾಲ್ಟಿಕ್ ಸಮುದ್ರದ ಮೂಲಕ ತರಲು ಉದ್ದೇಶಿಸಿರುವ ನೈಸರ್ಗಿಕ ಅನಿಲ ಪೈಪ್ಲೈನ್ ಯೋಜನೆ ನಾರ್ಡ್ ಸ್ಟ್ರೀಮ್ ಬಗ್ಗೆಯೂ ಉಲ್ಲೇಖ ಮಾಡಿ, ಅದನ್ನು ವಿರೋಧಿಸಿದ್ದಾರೆ. ಈ ಯೋಜನೆ ಉಕ್ರೇನ್ ಮತ್ತು ಯುರೋಪ್ ಭದ್ರತೆಗೆ ಧಕ್ಕೆಯುಂಟು ಮಾಡುತ್ತದೆ ಎಂದೂ ಹೇಳಿದ್ದಾರೆ.
ಜರ್ಮನಿ ರಷ್ಯಾದ ತೈಲಗಳ ಮೇಲೆ ತುಂಬ ಅವಲಂಬಿತವಾದ ದೇಶ. ಹಾಗಿದ್ದಾಗ್ಯೂ ರಷ್ಯಾ ಉಕ್ರೇನ್ ಮೇಲೆ ಮಾಡಿದ ಆಕ್ರಮಣವನ್ನು ಖಂಡಿಸಿದ್ದಲ್ಲದೆ, ಈ ವರ್ಷದ ಅಂತ್ಯದಲ್ಲಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದರಿಂದ ಸಂಪೂರ್ಣವಾಗಿ ಮುಕ್ತವಾಗುವ ಘೋಷಣೆಯನ್ನೂ ಮಾಡಿದೆ. ಈಗಾಗಲೇ ರಷ್ಯಾದ ಮೇಲೆ ಹಲವು ದೇಶಗಳು ವಿವಿಧ ನಿರ್ಬಂಧ ವಿಧಿಸಿವೆ. ಹೀಗಾಗಿ ರಷ್ಯಾದ ಆರ್ಥಿಕತೆಯೂ ಸಂಕಷ್ಟಕ್ಕೀಡಾಗುತ್ತಿದೆ.
ಇದನ್ನೂ ಓದಿ: ನಿಮ್ಮಲ್ಲಿ ಯಾರಾದರೂ ಲಂಚ ಕೇಳಿದರೆ ಇಲ್ಲ ಎಂದು ಹೇಳಬೇಡಿ, ಸಂಭಾಷಣೆ ರೆಕಾರ್ಡ್ ಮಾಡಿ ಕಳಿಸಿ: ಕೇಜ್ರಿವಾಲ್
Published On - 5:26 pm, Thu, 17 March 22