ಉಕ್ರೇನ್​ ಮೇಲೆ ರಷ್ಯಾ ಆಕ್ರಮಣದ ಬೆನ್ನಲ್ಲೇ ಒಂದು ಮಹತ್ವದ ಕ್ರಮ ಕೈಗೊಂಡ ಗೂಗಲ್​; ಏನದು?

| Updated By: Lakshmi Hegde

Updated on: Feb 28, 2022 | 1:02 PM

ಕೆಲವು ದಿನಗಳಿಂದ ಉಕ್ರಾವ್ಟೋಡರ್ ಎಂಬ ಉಕ್ರೇನ್​​ನ ಸರ್ಕಾರಿ ಕಂಪನಿಯೊಂದು ಎಲ್ಲ ಕಡೆಗಳಲ್ಲಿರುವ ರಸ್ತೆ ಮಾರ್ಗ ತೋರುವ ಬೋರ್ಡ್​​ಗಳು, ಸಂಕೇತಗಳನ್ನು ತೆಗೆದುಹಾಕುತ್ತಿದೆ. 

ಉಕ್ರೇನ್​ ಮೇಲೆ ರಷ್ಯಾ ಆಕ್ರಮಣದ ಬೆನ್ನಲ್ಲೇ ಒಂದು ಮಹತ್ವದ ಕ್ರಮ ಕೈಗೊಂಡ ಗೂಗಲ್​; ಏನದು?
ಪ್ರಾತಿನಿಧಿಕ ಚಿತ್ರ
Follow us on

ಗೂಗಲ್​ ಮ್ಯಾಪ್​ (ಗೂಗಲ್​ ನಕ್ಷೆ)ನ ಕೆಲವು ಟೂಲ್ಸ್​​ಗಳನ್ನು ಉಕ್ರೇನ್​​ನಲ್ಲಿ ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿದ್ದಾಗಿ ಗೂಗಲ್​ ತಿಳಿಸಿದೆ. ವಿಶ್ವದ ದಿಗ್ಗಜ ಸರ್ಚ್​ ಎಂಜಿನ್​ ಆಗಿರುವ ಆಲ್ಪಾಬೆಟ್​​ ಸಂಸ್ಥೆಯ ಗೂಗಲ್​, ಸುರಕ್ಷತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಮಾಹಿತಿ ನೀಡಿದೆ. ಉಕ್ರೇನ್​​ ಮೇಲೆ ರಷ್ಯಾ ಆಕ್ರಮಣ ಮಾಡಿದೆ. ನಾಲ್ಕೈದು ದಿನಗಳಿಂದ ಬೀದಿಬೀದಿಗಳಲ್ಲಿ ಹೊಡೆದಾಟ, ದಾಳಿಗಳು ನಡೆಯುತ್ತಿವೆ. ಅಲ್ಲಿನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ಉಕ್ರೇನ್​​ನಾದ್ಯಂತ ಟ್ರಾಫಿಕ್​ ಸ್ಥಿತಿಗಳ ಮತ್ತು ವಿವಿಧ ಪ್ರದೇಶಗಳು ಎಷ್ಟು ದಟ್ಟಣೆಯಿಂದ ಕೂಡಿವೆ ಎಂಬ ಮಾಹಿತಿಯನ್ನು ಲೈವ್​ ಆಗಿ ತೋರಿಸುವ ಆ್ಯಪ್​​ಗಳನ್ನು ನಿಷ್ಕ್ರಿಯಗೊಳಿಸಿದ್ದಾಗಿ ಗೂಗಲ್​ ತಿಳಿಸಿದೆ.

ಗೂಗಲ್​ ಮ್ಯಾಪ್​​ನ ಟ್ರಾಫಿಕ್​ ಲೇಯರ್​ ಮತ್ತು ಅಂಗಡಿಗಳು, ರೆಸ್ಟೋರೆಂಟ್​ಗಳಂತಹ ಪ್ರದೇಶಗಳಲ್ಲಿ ಎಷ್ಟರ ಮಟ್ಟಿಗೆ ಜನದಟ್ಟಣೆ ಇದೆ, ಯಾವ ಪ್ರಮಾಣದಲ್ಲಿ ಕಾರ್ಯನಿರವಾಗಿವೆ ಎಂಬುದರ ಬಗ್ಗೆ ಲೈವ್​ ಮಾಹಿತಿ (ನೈಜ ಸಮಯದ ಮಾಹಿತಿ) ನೀಡುವ ಟೂಲ್​​ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಅಂದರೆ ಉಕ್ರೇನ್​​ನಲ್ಲಿನ ಈ ಮಾಹಿತಿ ಸದ್ಯ ಜಾಗತಿಕವಾಗಿ ಸಿಗುವುದಿಲ್ಲ. ಅಲ್ಲಿನ ಪ್ರಾದೇಶಕ ಆಡಳಿತಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ಹೆಜ್ಜೆ ಇಡಲಾಗಿದ್ದು, ಜನರ ಸುರಕ್ಷತೆಗಾಗಿ ತೆಗೆದುಕೊಂಡ ಕ್ರಮ ಇದು ಎಂದೂ ಗೂಗಲ್ ಹೇಳಿಕೊಂಡಿದೆ.  ಹಾಗಿದ್ದಾಗ್ಯೂ ಗೂಗಲ್​ ಮ್ಯಾಪ್​​ನಲ್ಲಿ ಟರ್ನ್​ ಬೈ ಟರ್ನ್​ ನೇವಿಗೇಶನ್​ ಫೀಚರ್ ಬಳಸಿಕೊಂಡು ವಾಹನ ಚಾಲನೆ ಮಾಡಬಹುದಾಗಿದೆ. ಅಂಥವರಿಗೆ ಲೈವ್​ ಮಾಹಿತಿ ಲಭ್ಯ ಇರಲಿದೆ. ಯುದ್ಧ ಕಾರ್ಮೋಡದ ಮಧ್ಯೆ ಜನರ ಜೀವ ರಕ್ಷಣೆ ಎಷ್ಟು ಮುಖ್ಯವೋ ಅಷ್ಟೇ ಅವರ ಡಾಟಾ ರಕ್ಷಣೆ ಕೂಡ ಮುಖ್ಯ ಎಂದೂ ಗೂಗಲ್ ಅಭಿಪ್ರಾಯ ಪಟ್ಟಿದೆ.

ಇನ್ನು ಕೆಲವು ದಿನಗಳಿಂದ ಉಕ್ರಾವ್ಟೋಡರ್ ಎಂಬ ಉಕ್ರೇನ್​​ನ ಸರ್ಕಾರಿ ಕಂಪನಿಯೊಂದು ಎಲ್ಲ ಕಡೆಗಳಲ್ಲಿರುವ ರಸ್ತೆ ಮಾರ್ಗ ತೋರುವ ಬೋರ್ಡ್​​ಗಳು, ಸಂಕೇತಗಳನ್ನು ತೆಗೆದುಹಾಕುತ್ತಿದೆ.  ಜನರಿಗೆ ಅನುಕೂಲವಾಗುವಂತೆ ರಸ್ತೆ ಬದಿಯಲ್ಲಿ ರಸ್ತೆ ಮಾರ್ಗ ಸಂಕೇತಗಳ ಬೋರ್ಡ್​​ಗಳನ್ನು ಹಾಕುವುದು ಸಾಮಾನ್ಯ. ಹೊಸದಾಗಿ ಆ ಪ್ರದೇಶಗಳಿಗೆ ಬರುವವರು ಚಿಹ್ನೆ (Signs) ಗಳನ್ನು ನೋಡಿಯೇ ದಾರಿ ಅರಿಯುತ್ತಾರೆ. ಹಾಗೇ, ಉಕ್ರೇನ್​​ನಲ್ಲೂ ಹಾಕಲಾಗಿದ್ದ ಮಾರ್ಗಸೂಚಿ ಸೈನ್​ ಬೋರ್ಡ್​ಗಳನ್ನು ಈ ಕಂಪನಿ ತೆಗೆದುಹಾಕುತ್ತಿದೆ. ರಷ್ಯಾದ ಸೈನಿಕರಿಗೆ ಉಕ್ರೇನ್​ನ ದಾರಿಗಳು ಸರಿಯಾಗಿ ಗೊತ್ತಿಲ್ಲ. ಅಲ್ಲದೆ ಅವರು ಅತ್ಯಂತ ಕಳಪೆ ಸಂವಹನ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಇಲ್ಲಿನ ಭೂಪ್ರದೇಶಗಳನ್ನು ಸಂಕೇತಗಳ ಸಹಾಯವಿಲ್ಲದೆ ಪ್ರವೇಶಿಸಲಾರರು. ನಾವು ಶತ್ರುಗಳ ದಾರಿ ತಪ್ಪಿಸಲು ಆ ಬೋರ್ಡ್​ಗಳನ್ನೆಲ್ಲ ತೆಗೆದುಹಾಕುತ್ತಿದ್ದೇವೆ ಎಂದು ಫೇಸ್​ಬುಕ್ ಪೋಸ್ಟ್​ನಲ್ಲಿ ಹೇಳಿಕೊಂಡಿದೆ.

ಇದನ್ನೂ ಓದಿ: ಯುದ್ಧಭೂಮಿ ಉಕ್ರೇನ್​​ಗೆ ತೆರಳಲಿದ್ದಾರಂತೆ ಈ ನಾಲ್ವರು ಕೇಂದ್ರ ಸಚಿವರು; ಪ್ರಧಾನಿ ನರೇಂದ್ರ ಮೋದಿಯವರ ತುರ್ತು ಸಭೆಯಲ್ಲಿ ನಿರ್ಣಯ