ಯುದ್ಧಭೂಮಿ ಉಕ್ರೇನ್ಗೆ ತೆರಳಲಿದ್ದಾರಂತೆ ಈ ನಾಲ್ವರು ಕೇಂದ್ರ ಸಚಿವರು; ಪ್ರಧಾನಿ ನರೇಂದ್ರ ಮೋದಿಯವರ ತುರ್ತು ಸಭೆಯಲ್ಲಿ ನಿರ್ಣಯ
ಭಾನುವಾರ ಕೂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಸುಮಾರು ಎರಡು ತಾಸುಗಳ ದೀರ್ಘಾವಧಿ ಸಭೆ ನಡೆಸಿದ್ದರು. ಉಕ್ರೇನ್ನ ಪರಿಸ್ಥಿತಿ, ಭಾರತೀಯರ ಸುರಕ್ಷತೆ ಬಗ್ಗೆ ಚರ್ಚಿಸಿದ್ದರು. ಸದ್ಯ ಉಕ್ರೇನ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯೇ ನಮ್ಮ ಆದ್ಯತೆ ಎಂದು ಹೇಳಿದ್ದರು.
ರಷ್ಯಾ-ಉಕ್ರೇನ್ ಯುದ್ಧ (Russia-Ukraine War) ತೀವ್ರತೆ ದಿನೇದಿನೆ ಹೆಚ್ಚುತ್ತಿರುವ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ಕೇಂದ್ರ ಸಚಿವರು, ಉನ್ನತ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಉಕ್ರೇನ್ನಲ್ಲಿ (Ukraine Crisis) ಉಂಟಾದ ಯುದ್ಧ ಪರಿಸ್ಥಿತಿ ಮತ್ತು ಅಲ್ಲಿ ಸಿಲುಕಿರುವ ಭಾರತದ ವಿದ್ಯಾರ್ಥಿಗಳು, ಅವರ ರಕ್ಷಣಾ ಕಾರ್ಯಾಚರಣೆ ಬಗ್ಗೆ ಪರಿಶೀಲನೆ, ಚರ್ಚೆ ನಡೆಸಿದ್ದು, ಮುಂದೆ ಭಾರತ ಸರ್ಕಾರ (Government Of India) ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಮಾರ್ಗದರ್ಶನ ಮಾಡಿದ್ದಾರೆ. ಉಕ್ರೇನ್ನಲ್ಲಿರುವ ಭಾರತದ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದ್ದರೂ ಇನ್ನೂ ಸಾವಿರಾರು ಮಂದಿ ಅಲ್ಲಿಯೇ ಸಿಲುಕಿದ್ದಾರೆ. ಇನ್ನು ತಾಯ್ನಾಡಿಗೆ ತೆರಳಲು ಪೋಲ್ಯಾಂಡ್, ರೊಮೇನಿಯಾ ಗಡಿಗಳಿಗೆ ಬರುವ ಭಾರತೀಯರ ಮೇಲೆ ಕೂಡ ರಷ್ಯಾ ಸೈನಿಕರು ಕ್ರೌರ್ಯ ತೋರುತ್ತಿದ್ದಾರೆ. ಅದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ, ಉಕ್ರೇನ್ನಿಂದ ಭಾರತೀಯರನ್ನು ಆದಷ್ಟು ತ್ವರಿತವಾಗಿ ಸ್ವದೇಶಕ್ಕೆ ಕರೆತರುವ ಸಲುವಾಗಿ, ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಸಿಂಧ್ಯಾ, ಕಿರಣ್ ರಿಜಿಜು, ಜನರಲ್ ವಿ.ಕೆ.ಸಿಂಗ್ ಶೀಘ್ರದಲ್ಲೇ ಉಕ್ರೇನ್ಗೆ ತೆರಳಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
#WATCH | Prime Minister Narendra Modi calls a high-level meeting on the Ukraine crisis. Some Union Ministers may go to neighboring countries of Ukraine to coordinate the evacuations.#RussiaUkraineCrisis pic.twitter.com/yqTFYwspxo
— ANI (@ANI) February 28, 2022
ಉಕ್ರೇನ್ನಿಂದ ಭಾರತಕ್ಕೆ ಮೂರು ಬ್ಯಾಚ್ಗಳಲ್ಲಿ ಅಂದರೆ 1200 ಭಾರತೀಯ ವಿದ್ಯಾರ್ಥಿಗಳನ್ನೂ ಕರೆತರಲಾಗಿದ್ದರೂ ಇನ್ನೂ ಸುಮಾರು 16 ಸಾವಿರ ವಿದ್ಯಾರ್ಥಿಗಳು ಅಲ್ಲಿ ಸಿಲುಕಿದ್ದಾರೆ. ಅವರು ಬಂಕರ್ಗಳಲ್ಲಿ, ಹಾಸ್ಟೆಲ್ ಬೇಸ್ಮೆಂಟ್ಗಳಲ್ಲಿ ರಕ್ಷಣೆ ಪಡೆದಿದ್ದಾರೆ. ಊಟ-ತಿಂಡಿ-ನೀರು ಸಿಗದೆ ಪರದಾಡುತ್ತಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ. ಈ ಮಧ್ಯೆ ರಷ್ಯಾ ಸೇನೆಯ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಭಾರತೀಯ ವಿದ್ಯಾರ್ಥಿಗಳ ವಿಡಿಯೋವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಹಲವರು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಭಾನುವಾರ ಕೂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಸುಮಾರು ಎರಡು ತಾಸುಗಳ ದೀರ್ಘಾವಧಿ ಸಭೆ ನಡೆಸಿದ್ದರು. ಉಕ್ರೇನ್ನ ಪರಿಸ್ಥಿತಿ, ಭಾರತೀಯರ ಸುರಕ್ಷತೆ ಬಗ್ಗೆ ಚರ್ಚಿಸಿದ್ದರು. ಸದ್ಯ ಉಕ್ರೇನ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯೇ ನಮ್ಮ ಆದ್ಯತೆ ಎಂದು ಹೇಳಿದ್ದರು. ನಿನ್ನೆ ಉತ್ತರ ಪ್ರದೇಶದಲ್ಲಿ ಚುನಾವಣೆ ರ್ಯಾಲಿ ನಡೆಸಿದ ಬಳಿಕ ಇಂದು ಬೆಳಗ್ಗೆ ಮತ್ತೊಮ್ಮೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಇಂದಿನ ಸಭೆಯಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್.ಜೈಶಂಕರ್, ಈ ಸಚಿವಾಲಯದ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್ ರಿಜಿಜು ಇತರರು ಇದ್ದರು.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ; ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಜಾಣನಡೆ, ಮತ್ತೆ ಮತದಾನದಿಂದ ದೂರ !
Published On - 11:49 am, Mon, 28 February 22