Ukraine Crisis: ಉಕ್ರೇನ್‌ನಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ ಕೇಂದ್ರ ಕ್ರಮ; ವಿಮಾನ ಪ್ರಯಾಣದ ವೆಚ್ಚ ಭರಿಸಲಿರುವ ಸರ್ಕಾರ
Russia- Ukraine War: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಈ ಕುರಿತು ಹಲವು ಮಾಹಿತಿಗಳನ್ನು ಬಿಡುಗಡೆ ಮಾಡಲಾಗಿದೆ. ಹಾಗೆಯೇ ವಿಮಾನ ಪ್ರಯಾಣದ ವೆಚ್ಚವನ್ನು ಸರ್ಕಾರವೇ ಹೊರಲಿದೆ ಎಂದು ತಿಳಿಸಲಾಗಿದೆ.
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯದ ತಯಾರಿ ಭರದಿಂದ ಸಾಗಿದೆ. ಭಾರತದ ರಾಯಭಾರ ಕಚೇರಿಯಿಂದ ಮಹತ್ವದ ಸೂಚನೆ ನೀಡಲಾಗಿದ್ದು, ಉಕ್ರೇನ್ (Ukraine Crisis) ಗಡಿ ದೇಶದ ಚೆಕ್‌ಪೋಸ್ಟ್‌ಗೆ ಬರುವಂತೆ ತಿಳಿಸಲಾಗಿದೆ. ಪೋಲೆಂಡ್, ಸ್ಲೊವಾಕಿಯಾ, ರೊಮೇನಿಯಾ, ಹಂಗೇರಿ ದೇಶಗಳ ಗಡಿ ಭಾಗಕ್ಕೆ ಬರುವಂತೆ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. 4 ಪ್ರತ್ಯೇಕ ತಂಡಗಳನ್ನು ರಚನೆ ಮಾಡಿದ್ದು, ಈಗಾಗಲೇ ಅವು ನಾಲ್ಕು ದೇಶಗಳಲ್ಲಿವೆ. ನಾಲ್ಕು ರಾಷ್ಟ್ರಗಳ ಮೂಲಕ 4 ರಾಷ್ಟ್ರಗಳ ಮೂಲಕ ಉಕ್ರೇನ್ ಗಡಿಗೆ ತೆರಳಲಿರುವ ತಂಡಗಳು ಭಾರತೀಯರನ್ನು ರಕ್ಷಿಸಲಿವೆ. ಪ್ರಸ್ತುತ ಹಂಗೇರಿ ರಾಯಭಾರಿ ಕಚೇರಿ ತಿಳಿಸಿರುವಂತೆ, ಹಂಗೇರಿ ಹಾಗೂ ರೊಮೇನಿಯಾ ಗಡಿಯಿಂದ ಸ್ಥಳಾಂತರ ಪ್ರಕ್ರಿಯೆ ಕೈಗೊಳ್ಳಲು ಸರ್ಕಾರ ನಿರ್ಧರಿಸುತ್ತಿದೆ. ಮೂಲಗಳನ್ನು ಉಲ್ಲೇಖಿಸಿ ಎಎನ್ಐ ಮಾಹಿತಿ ನೀಡಿರುವಂತೆ, ‘ಭಾರತೀಯರ ಸ್ಥಳಾಂತರ ಪ್ರಕ್ರಿಯೆಯಲ್ಲಿ ವಿಮಾನ ಪ್ರಯಾಣದ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ. ಈ ಮೂಲಕ ಉಕ್ರೇನ್‌ನಲ್ಲಿ ಸಿಲುಕಿರುವವರನ್ನು ಉಚಿತವಾಗಿ ಭಾರತವಾಗಿ ಸ್ಥಳಾಂತರಿಸಲಾಗುತ್ತದೆ’ ಎಂದು ಹೇಳಲಾಗಿದೆ.
ಪ್ರಸ್ತುತ ರಕ್ಷಣೆಗೆ ತೆರಳಿರುವ ಭಾರತೀಯ ತಂಡಗಳು ರೊಮೇನಿಯನ್ ಗಡಿಯನ್ನು ತಲುಪಿದ್ದು, ಇದು ಉಕ್ರೇನಿಯನ್ ರಾಜಧಾನಿ ಕೈವ್‌ನಿಂದ ಸರಿಸುಮಾರು 12 ಗಂಟೆಗಳ ಪ್ರಯಾಣದ ದೂರದಲ್ಲಿದೆ. ನಾಗರಿಕ ವಿಮಾನಗಳಿಗೆ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ಮನೆಗೆ ಮರಳಲು ಬುಚಾರೆಸ್ಟ್‌ನಲ್ಲಿ ವಿಮಾನಗಳನ್ನು ಹತ್ತಲಿದ್ದಾರೆ. ಏತನ್ಮಧ್ಯೆ, ಹಲವಾರು ಭಾರತೀಯ ಪ್ರಜೆಗಳು ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದಾರೆ. ರಾಯಭಾರ ಕಚೇರಿ ಆವರಣದ ಸುತ್ತ ಶೆಲ್ ದಾಳಿ ನಡೆದಿರುವ ಬಗ್ಗೆ ವರದಿಗಳಿದ್ದರೂ ಯಾವುದೇ ಹಾನಿಯಾಗಿಲ್ಲ.
ವ್ಲಾಡಿಮಿರ್ ಪುಟಿನ್ ಅವರ ಪಡೆಗಳು ಉಕ್ರೇನ್ ಅನ್ನು ಆಕ್ರಮಿಸಿದಾಗಿನಿಂದ, ಭಾರತ ಆತಂಕದಲ್ಲಿದೆ. ಉಕ್ರೇನ್‌ನಲ್ಲಿರುವ ಪ್ರಜೆಗಳನ್ನು ಸಂಪೂರ್ಣ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೆಹಲಿಯಲ್ಲಿ 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನಾಗರಿಕರಿಗೆ ಸಲಹೆಗಳನ್ನು ನೀಡುತ್ತಿದೆ, ಹೆಚ್ಚಾಗಿ ವಿದ್ಯಾರ್ಥಿಗಳು ಎಲ್ಲಿದ್ದರೂ ಶಾಂತವಾಗಿರಲು, ಪರ್ಯಾಯ ಮಾರ್ಗದ ಮೂಲಕ ಸ್ಥಳಾಂತರಿಸುವ ವ್ಯವಸ್ಥೆಯಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದೆ.
ಈ ಕುರಿತ ಎಎನ್ಐ ಟ್ವೀಟ್ ಇಲ್ಲಿದೆ:
Govt of India & Embassy of India working to establish evacuation routes from Romania & Hungary. At present, teams are getting in place at CHOP-ZAHONY Hungarian border near Uzhhorod, PORUBNE-SIRET Romanian Border near Chernivtsi: Indian Embassy in Hungary#RussiaUkraineConflict pic.twitter.com/cLHCUWYbEg
— ANI (@ANI) February 25, 2022
Government of India will arrange evacuation flights for Indian nationals in Ukraine, cost will be borne by the government: Sources
— ANI (@ANI) February 25, 2022
ಇದರ ಜೊತೆಗೆ, ರಾಯಭಾರ ಕಚೇರಿಯು ಭಾರತೀಯ ಪ್ರಜೆಗಳಿಗೆ ಸಮೀಪದಲ್ಲಿ ಶೆಲ್ ದಾಳಿಯ ಸಂದರ್ಭದಲ್ಲಿ ಹತ್ತಿರದ ಬಾಂಬ್ ಶೆಲ್ಟರ್ ಅಥವಾ ಬಂಕರ್‌ಗಳಲ್ಲಿ ಆಶ್ರಯ ಪಡೆಯುವಂತೆ ಸಲಹೆ ನೀಡಿದೆ. ಆಯಾ ದೇಶಗಳೊಂದಿಗೆ ಉಕ್ರೇನಿಯನ್ ಗಡಿಯನ್ನು ದಾಟಿದ ನಂತರ ಭಾರತೀಯ ನಾಗರಿಕರು ಸಂಪರ್ಕಿಸಬಹುದಾದ ಅಧಿಕಾರಿಗಳ ಸಂಪರ್ಕ ವಿವರಗಳನ್ನು ವಿದೇಶಾಂಗ ಸಚಿವಾಲಯವು ಹಂಚಿಕೊಂಡಿದೆ. ವಿಮಾನಗಳನ್ನು ಸ್ಥಗಿತಗೊಳಿಸಿರುವುದರಿಂದ, ಗಡಿಯನ್ನು ದಾಟುವ ಭೂ ಮಾರ್ಗದ ಮೂಲಕ ಈ ದೇಶಗಳಿಗೆ ಪ್ರವೇಶಿಸುವುದು ಈಗ ಉಕ್ರೇನ್ ತೊರೆಯಲು ಬಯಸುವ ಭಾರತೀಯರಿಗೆ ಅತ್ಯುತ್ತಮ ಆಯ್ಕೆಯಾಗಿದೆ.
ಉಕ್ರೇನ್‌ನಿಂದ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 18,000 ಭಾರತೀಯರನ್ನು ಮರಳಿ ಕರೆತರಲು ಸಚಿವಾಲಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಉಕ್ರೇನ್‌ನಲ್ಲಿ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಕೇಂದ್ರ ಸರ್ಕಾರವು ಎಲ್ಲಾ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸುತ್ತದೆ ಎಂದು ಈ ಹಿಂದೆ ಸಚಿವರು ಹೇಳಿದ್ದರು.
ಇದನ್ನೂ ಓದಿ:
Russia-Ukraine war ಭೀಕರ ದುರಂತ ನಡೆದ ಚೆರ್ನೋಬಿಲ್ ಪರಮಾಣು ಸ್ಥಾವರವನ್ನು ರಷ್ಯಾ ವಶಪಡಿಸಿಕೊಂಡಿದ್ದು ಯಾಕೆ?