AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾತೃಭೂಮಿಗೆ ಆಕ್ಸಿಜನ್​ ಸಿಲಿಂಡರ್​ ಕಳುಹಿಸಿಕೊಟ್ಟ ಅರಬ್​ ದೇಶದ ಹಿಂದೂ ಮುಖಂಡರು

Oxygen from Dubai: ವಿಮಾನ ನಿಲ್ದಾಣದಿಂದ ಆಕ್ಸಿಜನ್​ ಸಿಲಿಂಡರ್​ಗಳನ್ನು ಹೊತ್ತ ವಿಮಾನ ಹೊರಡುವ ಮುನ್ನ ಕೇಸರಿ ಧಿರಿಸು ತೊಟ್ಟು ಅಲ್ಲಿಗೆ ಬಂದ ಧಾರ್ಮಿಕ ಮುಖಂಡರುಗಳು, ಪುಷ್ಪಾರ್ಚನೆ ಮಾಡಿ ಸಿಲಿಂಡರ್​ಗೆ ಕೇಸರಿ ಬೊಟ್ಟು ಲೇಪಿಸುವ ಮೂಲಕ ಆಶೀರ್ವದಿಸಿ ಶುಭ ಹಾರೈಸಿ ಬೀಳ್ಕೊಟ್ಟಿದ್ದಾರೆ.

ಮಾತೃಭೂಮಿಗೆ ಆಕ್ಸಿಜನ್​ ಸಿಲಿಂಡರ್​ ಕಳುಹಿಸಿಕೊಟ್ಟ ಅರಬ್​ ದೇಶದ ಹಿಂದೂ ಮುಖಂಡರು
ಅಕ್ಸಿಜನ್​ ಸಿಲಿಂಡರ್​ಗಳನ್ನು ಕಳುಹಿಸಿಕೊಟ್ಟ ಹಿಂದೂ ಧಾರ್ಮಿಕ ಮುಖಂಡರು
Skanda
|

Updated on: May 11, 2021 | 1:12 PM

Share

ಭಾರತದಲ್ಲಿ ಕೊರೊನಾ ಎರಡನೇ ಅಲೆ ದುರ್ದೆಸೆಯಿಂದಾಗಿ ಪರಿಸ್ಥಿತಿ ಬಿಗಡಾಯಿಸಿದ್ದು, ಮೊದಲನೇ ಅಲೆಯನ್ನು ಬೇರೆಲ್ಲಾ ರಾಷ್ಟ್ರಗಳಿಗಿಂತ ಸಶಕ್ತವಾಗಿ ಎದುರಿಸಿದ್ದ ದೇಶವೀಗ ವೈದ್ಯಕೀಯ ಸಂಪನ್ಮೂಲ ಕೊರತೆಯಿಂದಾಗಿ ಸಂಕಷ್ಟದ ಕೂಪಕ್ಕೆ ಬಿದ್ದಿದೆ. ಕೊರೊನಾ ಲಸಿಕೆ ತಯಾರಿಯಲ್ಲಿ ಪ್ರಮುಖ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದ ಭಾರತ ಆರಂಭಿಕ ಹಂತದಲ್ಲಿ ಅನೇಕ ದೇಶಗಳಿಗೆ ಸಹಾಯ ಹಸ್ತ ಚಾಚಿದ್ದು, ಇದೀಗ ಬೇರೆ ದೇಶಗಳು ಭಾರತದ ಸಹಾಯಕ್ಕೆ ಧಾವಿಸಿವೆ. ವಿದೇಶಗಳ ಸರ್ಕಾರಗಳಷ್ಟೇ ಅಲ್ಲದೇ ಅಲ್ಲಿನ ಸಂಘ, ಸಂಸ್ಥೆಗಳು ಸಹ ಅಗತ್ಯ ಸೌಲಭ್ಯ ಪೂರೈಕೆಗೆ ಮುಂದಾಗಿವೆ. ಈ ಪೈಕಿ ಅರಬ್​ ರಾಷ್ಟ್ರದಲ್ಲಿರುವ ಹಿಂದೂ ದೇವಸ್ಥಾನವೂ ಮುಂದಡಿ ಇಟ್ಟಿದ್ದು, ಭಾರತಕ್ಕೆ ಅಗತ್ಯವಾಗಿ ಬೇಕಿರುವ ಆಕ್ಸಿಜನ್ ಸಿಲಿಂಡರ್​ಗಳನ್ನು ಕಳುಹಿಸಿಕೊಟ್ಟಿದೆ.

ನಿನ್ನೆ (ಮೇ 10) ಅರಬ್​ ರಾಷ್ಟ್ರದಲ್ಲಿರುವ ಹಿಂದೂ ದೇಗುಲದ ಸ್ವಯಂ ಸೇವಕರು ಒಗ್ಗೂಡಿಕೊಂಡು, ದುಬೈನ ಉತ್ತರ ಭಾಗದ ಜೇಬೆಲ್ ಅಲಿ ಪೋರ್ಟ್​ ವಿಮಾನ ನಿಲ್ದಾಣದಿಂದ ಭಾರತಕ್ಕೆ ಅಗತ್ಯ ವೈದ್ಯಕೀಯ ಪರಿಕರಗಳನ್ನು ಕಳುಹಿಸಿಕೊಟ್ಟಿದ್ದಾರೆ. ನೂರಾರು ಆಮ್ಲಜನಕದ ಸಿಲಿಂಡರ್​ಗಳು ಹಾಗೂ ಇನ್ನಿತರ ಪರಿಕರಗಳನ್ನು ಹೊತ್ತು ಭಾರತದತ್ತ ಹೊರಟ ವಿಮಾನವನ್ನು ಬೀಳ್ಕೊಟ್ಟಿದ್ದಾರೆ. ದುಬೈನಲ್ಲಿ ಹೀಲಿಯಂ ಉತ್ಪಾದನೆ ಮಾಡುತ್ತಿದ್ದ ಕಾರ್ಖಾನೆಯ ಭಾರತೀಯ ಮೂಲದ ಮಾಲೀಕರು ತಮ್ಮ ತವರು ನೆಲದಲ್ಲಿ ಪರಿಸ್ಥಿತಿ ಹದಗೆಡುತ್ತಿರುವ ಸುದ್ದಿ ಕೇಳುತ್ತಿದ್ದಂತೆಯೇ ಆಮ್ಲಜನಕ ಉತ್ಪಾದನೆಯನ್ನು ಆರಂಭಿಸಿದ್ದು ಇಲ್ಲಿ ಗಮನಾರ್ಹ.

ದುಬೈನ ಜನಸಂಖ್ಯೆಯಲ್ಲಿ ಸುಮಾರು ಶೇ.30ರಷ್ಟು ಭಾರತೀಯರೇ ಇದ್ದು, ಅದರಲ್ಲಿ ಹಲವರು ತಮ್ಮ ತವರಿನ ಕಷ್ಟಕ್ಕಾಗಿ ಅನೇಕ ರೀತಿಯಲ್ಲಿ ಸ್ಪಂದಿಸಿದ್ದಾರೆ. ಇದೀಗ ಹಿಂದೂ ಧಾರ್ಮಿಕ ಮುಖಂಡರು ಸಹ ಭಾರತಕ್ಕೆ ಆಕ್ಸಿಜನ್​ ಕಳುಹಿಸಿಕೊಡುವ ಮೂಲಕ ತಾಯ್ನಾಡು ಸಂಕಷ್ಟದಲ್ಲಿದ್ದಾಗ ಸಹಾಯ ಮಾಡುವ ಮನೋಧರ್ಮ ತೋರಿಸಿದ್ದಾರೆ. ವಿಮಾನ ನಿಲ್ದಾಣದಿಂದ ಆಕ್ಸಿಜನ್​ ಸಿಲಿಂಡರ್​ಗಳನ್ನು ಹೊತ್ತ ವಿಮಾನ ಹೊರಡುವ ಮುನ್ನ ಕೇಸರಿ ಧಿರಿಸು ತೊಟ್ಟು ಅಲ್ಲಿಗೆ ಬಂದ ಧಾರ್ಮಿಕ ಮುಖಂಡರುಗಳು, ಪುಷ್ಪಾರ್ಚನೆ ಮಾಡಿ ಸಿಲಿಂಡರ್​ಗೆ ಕೇಸರಿ ಬೊಟ್ಟು ಲೇಪಿಸುವ ಮೂಲಕ ಆಶೀರ್ವದಿಸಿ ಶುಭ ಹಾರೈಸಿ ಬೀಳ್ಕೊಟ್ಟಿದ್ದಾರೆ.

ಇದನ್ನೂ ಓದಿ: ಬಡ, ಮಧ್ಯಮ ಆದಾಯದ ರಾಷ್ಟ್ರಗಳಿಗೆ ಲಸಿಕೆ ಪೂರೈಸುತ್ತಿರುವ ಗವಿ ಮೈತ್ರಿಕೂಟದಿಂದ ಭಾರತಕ್ಕೆ ಕೊರೊನಾ ಲಸಿಕೆಯ ನೆರವು