
ನವದೆಹಲಿ, ಏಪ್ರಿಲ್ 21: ಸ್ಕಾಟ್ಲ್ಯಾಂಡ್ ದೇಶದಲ್ಲಿ ಹಿಂದೂಫೋಬಿಯಾ (Hinduphobia in Scotland) ಚಾಲನೆಯಲ್ಲಿರುವುದನ್ನು ವಿರೋಧಿಸಿ ಅಲ್ಲಿನ ಸಂಸತ್ನಲ್ಲಿ ಗೊತ್ತುವಳಿಯೊಂದನ್ನು ಮಂಡಿಸಲಾಗಿದೆ. ಸ್ಕಾಟ್ಲ್ಯಾಂಡ್ನ ಎಡಿನ್ಬರ್ಗ್ ಈಸ್ಟರ್ನ್ ಅನ್ನು ಪ್ರತಿನಿಧಿಸುವ ಆಲ್ಬಾ ಪಕ್ಷದ (Alba party) ಸಂಸದೆ ಆ್ಯಶ್ ರೇಗನ್ (Ash Regan) ಎನ್ನುವವರು ಗೊತ್ತುವಳಿ ಮಂಡನೆ ಮಾಡಿದವರು. ದೇಶದಲ್ಲಿ ಹಿಂದೂಗಳಿಗೆ ತಾರತಮ್ಯತೆ, ಕಡೆಗಣನೆ ಮಾಡಲಾಗುತ್ತಿದೆ ಎನ್ನುವ ಅಂಶಗಳನ್ನು ಎತ್ತಿತೋರಿಸಿರುವ ವರದಿಯೊಂದನ್ನು ಬೆಂಬಲಿಸಿ ಈ ಗೊತ್ತುವಳಿ ಮಂಡಿಸಲಾಗಿದೆ. ಹಿಂದೂಗಳ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಲು ಈ ಕ್ರಮ ಅನುಸರಿಸಲಾಗಿದೆ. ಸ್ಕಾಟ್ಲ್ಯಾಂಡ್ ಸಂಸತ್ತಿನಲ್ಲಿ ಹಿಂದೂಫೋಬಿಯಾ ಬಗ್ಗೆ ನೇರವಾಗಿ ವಿಚಾರ ಪ್ರಸ್ತಾಪವಾಗಿದ್ದು ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.
ಸ್ಕಾಟ್ಲ್ಯಾಂಡ್ನ ಗಾಂಧಿಯನ್ ಪೀಸ್ ಸೊಸೈಟಿ ಎನ್ನುವ ಚಾರಿಟಿ ಸಂಸ್ಥೆಯು ಹಿಂದೂಗಳ ವಿರುದ್ಧ ವಿವಿಧ ಸ್ತರಗಳಲ್ಲಿ ಇರುವ ತಾರತಮ್ಯತೆಗಳನ್ನು ಎತ್ತಿ ತೋರಿಸುವ ವರದಿಯೊಂದನ್ನು ಕಳೆದ ವಾರ ಬಿಡುಗಡೆ ಮಾಡಿತ್ತು. ‘ಸ್ಕಾಟ್ಲ್ಯಾಂಡ್ನಲ್ಲಿ ಹಿಂದೂ ಸಮುದಾಯದ ವಿರುದ್ಧ ಪೂರ್ವಗ್ರಹ ಧೋರಣೆಯನ್ನು ತೋರಿಸುವ ಗಾಂಧಿಯನ್ ಪೀಸ್ ಸೊಸೈಟಿಯ ಕಾರ್ಯವನ್ನು ಸಂಸತ್ತು ಪ್ರಶಂಸಿಸುತ್ತದೆ,’ ಎಂದು ಆ್ಯಶ್ ರೇಗನ್ ತಮ್ಮ ಗೊತ್ತುವಳಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಶೇಖ್ ಹಸೀನಾ ಸೇರಿ 12 ಮಂದಿಗೆ ರೆಡ್ ನೋಟೀಸ್ ಜಾರಿ ಮಾಡುವಂತೆ ಇಂಟರ್ಪೋಲ್ಗೆ ಬಾಂಗ್ಲಾದೇಶ ಮನವಿ
ಗೊತ್ತುವಳಿ ಮಂಡಿಸಿದ ಆ್ಯಶ್ ಗೇಗನ್ ಅವರ ಆಲ್ಬಾ ದೊಡ್ಡ ಪಕ್ಷವಲ್ಲವಾದರೂ ಅವರ ಗೊತ್ತುವಳಿಗೆ ಬಹುತೇಕ ಎಲ್ಲಾ ಪಕ್ಷಗಳ ಸದಸ್ಯರೂ ಬೆಂಬಲ ನೀಡಿರವುದು ಗಮನಾರ್ಹ.
ಧ್ರುವ ಕುಮಾರ್, ನೀಲ್ ಲಾಲ್, ಸುಖಿ ಬೇನ್ಸ್, ಅನುರಂಜನ್ ಝಾ ಮತ್ತು ಅಜಿತ್ ತ್ರಿವೇದಿ ಅವರು ‘ಹಿಂದೂಫೋಬಿಯಾ ಇನ್ ಸ್ಕಾಟ್ಲ್ಯಾಂಡ್’ ಹೆಸರಿನ ವರದಿಯನ್ನು ಬರೆದಿದ್ದಾರೆ. ಸ್ಕಾಟ್ಲ್ಯಾಂಡ್ನಲ್ಲಿ ಹಿಂದೂಗಳ ಸಮಸ್ಯೆಯ ಆಳಕ್ಕೆ ಹೋಗಿ ಅಧ್ಯಯನ ಮಾಡಿದ್ದು ಇದೇ ಮೊದಲಂತೆ.
‘ಪೂಜಾಸ್ಥಳಗಳ ಮೇಲೆ ದಾಳಿಯಾದರೆ, ಅಥವಾ ಕುಟುಂಬಗಳನ್ನು ಅವಹೇಳನ ಮಾಡಿದರೆ, ಅದು ಹಿಂದೂ ಸಮುದಾಯದ ಮೇಲೆ ಮಾಡಿದ ಆಕ್ರಮಣ ಮಾತ್ರವಲ್ಲ, ಸ್ಕಾಟ್ಲ್ಯಾಂಡ್ನ ಸಹನಾ ಮೌಲ್ಯಗಳಿಗೆ ಧಕ್ಕೆ ಮಾಡಿದಂತೆ. ನಮ್ಮ ಸಮಾಜಕ್ಕೆ ಈ ವರದಿ ಒಂದು ಕನ್ನಡಿ ಹಿಡಿದಿದೆ’ ಎಂದು ಸ್ಕಾಟ್ಲ್ಯಾಂಡ್ ಮತ್ತು ಯುಕೆಯ ಇಂಡಿಯನ್ ಕೌನ್ಸಿಲ್ ಅಧ್ಯಕ್ಷರಾದ ನೀಲ್ ಲಾಲ್ ಹೇಳುತ್ತಾರೆ.
ಇದನ್ನೂ ಓದಿ: ಕೆನಡಾದಲ್ಲಿ ಗುಂಡಿನ ದಾಳಿ: ಭಾರತೀಯ ವಿದ್ಯಾರ್ಥಿನಿ ಹರ್ಸಿಮ್ರತ್ ರಾಂಧಾವಾ ಸಾವು
‘ದೇಶದ ಪ್ರತಿಯೊಬ್ಬ ಪ್ರಜೆಯೂ ತಮ್ಮ ನಂಬಿಕೆಯ ಧರ್ಮವನ್ನು ನಿರ್ಭೀತಿಯಿಂದ ಆಚರಿಸುವಂತಹ ವಾತಾವರಣ ನಿರ್ಮಾಣವಾಗಬೇಕು ಎಂಬುದು ನಮ್ಮ ಆಶಯ. ಈ ವರದಿಯು ಭೇದ ಸೃಷ್ಟಿಸುತ್ತಿಲ್ಲ. ಒಗ್ಗಟ್ಟು ಬೇಕೆನ್ನುತ್ತದೆ. ಹಿಂದೂಫೋಬಿಯಾ ಬಗ್ಗೆ ಹೇಳುತ್ತಾ, ನಾವು ಎಲ್ಲಾ ಸಮುದಾಯಗಳ ನಡುವೆ ಬಾಂಧವ್ಯ ಬೆಸೆಯುತ್ತಿದ್ದೇವೆ’ ಎಂದು ವರದಿಯ ಲೇಖಕರಾದ ಅನುರಂಜನ್ ಝಾ ಮತ್ತು ಧ್ರುವ ಕುಮಾರ್ ತಿಳಿಸುತ್ತಾರೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ