Interpol: ಶೇಖ್ ಹಸೀನಾ ಸೇರಿ 12 ಮಂದಿಗೆ ರೆಡ್ ನೋಟೀಸ್ ಜಾರಿ ಮಾಡುವಂತೆ ಇಂಟರ್ಪೋಲ್ಗೆ ಬಾಂಗ್ಲಾದೇಶ ಮನವಿ
Requests for Interpol to send Red Notice to Sheikh Hasina: 2024ರಲ್ಲಿ ವಿದ್ಯಾರ್ಥಿ ದಂಗೆ ಬಳಿಕ ಬಾಂಗ್ಲಾದೇಶದಿಂದ ನಿರ್ಗಮಿಸಿ ಭಾರತಕ್ಕೆ ಬಂದಿದ್ದ ಶೇಖ್ ಹಸೀನಾ ಮತ್ತಿತರರನ್ನು ಹಿಡಿಯಲು ಇಂಟರ್ಪೋಲ್ ನೆರವಿಗೆ ಬಾಂಗ್ಲಾ ಪ್ರಯತ್ನಿಸುತ್ತಿದೆ. ಶೇಖ್ ಹಸೀನಾ ಸೇರಿದಂತೆ 12 ಮಂದಿಗೆ ರೆಡ್ ಕಾರ್ನರ್ ನೋಟೀಸ್ ನೀಡುವಂತೆ ಇಂಟರ್ಪೋಲ್ಗೆ ಬಾಂಗ್ಲಾದೇಶ ಮನವಿ ಮಾಡಿದೆ. ವಿವಿಧ ಪ್ರಕರಣಗಳಲ್ಲಿ ಶೇಖ್ ಹಸೀನಾ ಮೇಲೆ ಗುರುತರ ಆರೋಪಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ನವದೆಹಲಿ, ಏಪ್ರಿಲ್ 20: ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಎದ್ದ ದಂಗೆಯಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದ ಅಲ್ಲಿಯ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ರೆಡ್ ನೋಟೀಸ್ (Interpol Red Notice) ನೀಡುವಂತೆ ಇಂಟರ್ಪೋಲ್ಗೆ ಮನವಿ ಮಾಡಲಾಗಿದೆ ಎನ್ನುವ ಸುದ್ದಿ ಬಂದಿದೆ. ಬಾಂಗ್ಲಾದೇಶ ಪೊಲೀಸ್ನ ನ್ಯಾಷನಲ್ ಸೆಂಟ್ರಲ್ ಬ್ಯೂರೋ ಈ ಮನವಿ ಸಲ್ಲಿಸಿದೆ ಎಂದು ಬಾಂಗ್ಲಾದೇಶದ ದಿ ಡೈಲಿ ಸ್ಟಾರ್ ಪತ್ರಿಕೆಯಲ್ಲಿ ವರದಿಯಾಗಿದೆ.
ಶೇಖ್ ಹಸೀನಾ ಅವರು ಬಾಂಗ್ಲಾದಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಾಗಿನಿಂದ ಅಲ್ಲಿನ ಹಂಗಾಮಿ ಸರ್ಕಾರವು ಮಾಜಿ ಪ್ರಧಾನಿಯನ್ನು ವಶಕ್ಕೆ ಒಪ್ಪಿಸುವಂತೆ ಭಾರತದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದೆ. ಬಾಂಗ್ಲಾದಲ್ಲಿ ಶೇಖ್ ಹಸೀನಾ ವಿರುದ್ದ ಹಲವು ಪ್ರಕರಣಗಳಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ ಎಂದು ಅಲ್ಲಿನ ಸರ್ಕಾರ ಹೇಳುತ್ತಿದೆ.
ಇದನ್ನೂ ಓದಿ: ಈ ವರ್ಷ ಭಾರತಕ್ಕೆ ಭೇಟಿ ನೀಡುತ್ತೇನೆ; ಮೋದಿ ಜೊತೆ ಮಾತುಕತೆ ಬಳಿಕ ಎಲಾನ್ ಮಸ್ಕ್ ಮಾಹಿತಿ
ನೊಬೆಲ್ ಪ್ರಶಸ್ತಿ ವಿಜೇತರಾದ ಮೊಹಮ್ಮದ್ ಯೂನುಸ್ ನೇತೃತ್ವದಲ್ಲಿ ಸದ್ಯ ಬಾಂಗ್ಲಾದಲ್ಲಿ ಹಂಗಾಮಿ ಸರ್ಕಾರ ಅಸ್ತಿತ್ವದಲ್ಲಿದೆ. ಈ ಸರ್ಕಾರವನ್ನು ಬೀಳಿಸಲು ಶೇಖ್ ಹಸೀನಾ ಪಿತೂರಿ ನಡೆಸುತ್ತಿದ್ಧಾರೆ ಎನ್ನುವ ಆರೋಪವೂ ಬಾಂಗ್ಲಾದಲ್ಲಿ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಈಗ ಅವರಿಗೆ ರೆಡ್ ಕಾರ್ನರ್ ನೋಟೀಸ್ ನೀಡುವಂತೆ ಇಂಟರ್ಪೋಲ್ಗೆ ಮನವಿ ಹೋಗಿದೆ.
ಬಾಂಗ್ಲಾದೇಶದ ಕೋರ್ಟ್ಗಳು, ತನಿಖಾ ಸಂಸ್ಥೆಗಳು ಮೊದಲಾದವುಗಳಿಂದ ಮನವಿಗಳು ಬಂದಾಗ ನ್ಯಾಷನಲ್ ಸೆಂಟ್ರಲ್ ಬ್ಯೂರೋ ಇಂಟರ್ಪೋಲ್ಗೆ ಈ ರೀತಿಯ ಮನವಿ ಮಾಡುತ್ತದೆ ಎನ್ನಲಾಗಿದೆ. ವಿವಿಧ ಪ್ರಕರಣಗಳಲ್ಲಿ ನಡೆಯುತ್ತಿರುವ ತನಿಖೆ ವೇಳೆ ಕೇಳಿ ಬಂದ ಆರೋಪಗಳ ಸಂಬಂಧ ಈ ಮನವಿಗಳನ್ನು ಮಾಡಲಾಗಿದೆ ಎಂದು ಅಲ್ಲಿನ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ದೇಶಭ್ರಷ್ಟರಾದ ಶೇಖ್ ಹಸೀನಾ ಹಾಗೂ ಇತರರನ್ನು ಬಂಧಿಸಲು ಇಂಟರ್ಪೋಲ್ನ ನೆರವು ಪಡೆಯುವಂತೆ ಕಳೆದ ವರ್ಷದ ನವೆಂಬರ್ ತಿಂಗಳಲ್ಲೇ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ಮುಖ್ಯ ಪ್ರಾಸಿಕ್ಯೂಟರ್ ಕಚೇರಿಯು ಬಾಂಗ್ಲಾದ ಪೊಲೀಸ್ಗೆ ತಿಳಿಸಿತ್ತು.
ಇದನ್ನೂ ಓದಿ: ಪಂಬಾಬ್ನಲ್ಲಿ ನಡೆದ 14 ಸ್ಫೋಟಗಳ ಹಿಂದಿನ ಮಾಸ್ಟರ್ಮೈಂಡ್ ಹರ್ಪ್ರೀತ್ ಸಿಂಗ್ ಅಮೆರಿಕದಲ್ಲಿ ಅರೆಸ್ಟ್
ವಿದ್ಯಾರ್ಥಿ ಪ್ರತಿಭಟನೆ ಬಳಿಕ ಹಸೀನಾ ಸರ್ಕಾರ ಪತನ
ಬಾಂಗ್ಲಾದೇಶದಲ್ಲಿ ಹಲವು ವರ್ಷಗಳಿಂದ ಪ್ರಧಾನಿಯಾಗಿದ್ದ ಶೇಖ್ ಹಸೀನಾ 2024ರಲ್ಲಿ ಬಾಂಗ್ಲಾದೇಶದಲ್ಲಿ ಬೃಹತ್ ವಿದ್ಯಾರ್ಥಿ ಪ್ರತಿಭಟನೆ ಬೆನ್ನಲ್ಲೇ ಭಾರತಕ್ಕೆ ತಪ್ಪಿಸಿಕೊಂಡು ಬಂದಿದ್ದರು. ಹಸೀನಾ ಅವರು ಭಾರತದ ಜೊತೆ ಸ್ನೇಹ ಸಂಬಂಧ ಹೊಂದಿದ್ದರು. ಅವರ ನಿರ್ಗಮನದ ಬಳಿಕ ಅಸ್ತಿತ್ವಕ್ಕೆ ಬಂದಿರುವ ಸರ್ಕಾರವು ಸ್ಪಷ್ಟವಾಗಿ ಭಾರತ ವಿರೋಧಿ ನಿಲುವನ್ನು ಹೊಂದಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ