ಅಫ್ಗಾನಿಸ್ತಾನ: ಇವತ್ತು ವಿಶ್ವದ ದೊಡ್ಡನ ಸ್ಥಾನದಲ್ಲಿ ನಿಂತು ಪೋಸ್ ಕೊಡ್ತಾ ಇರೋ ಅಮೆರಿಕವೇ(America) ಅಫ್ಗಾನಿಸ್ತಾನದ(Afghanistan) ಇಂದಿನ ಸ್ಥಿತಿಗೆ ನೇರಾನೇರ ಕಾರಣ ಅಂದ್ರೆ ತಪ್ಪಿಲ್ಲ. ತಾನೇ ಗಾಯ ಮಾಡಿ ನಂತರ ಅದಕ್ಕೆ ಔಷಧಿ ಹಚ್ಚೋ ಕೆಲಸ ಮಾಡೋ ಅಮೆರಿಕದ ಬಣ್ಣ ಅಫ್ಗಾನಿಸ್ತಾನದ ವಿಷಯದಲ್ಲಿ ಬಟಾಬಯಲಾಗಿದೆ.
ಅಮೆರಿಕದ ಸಹಕಾರದಿಂದಲೇ ಜನ್ಮತಾಳಿದ ತಾಲಿಬಾನ್((Taliban))
ನಾವು ತಾಲಿಬಾನ್ ಅಮೆರಿಕದ ಪಾಪದ ಕೂಸು ಅಂತ ಹೇಳುವುದಕ್ಕೆ ಕಾರಣವಿದೆ. ಇವತ್ತು ಅಫ್ಗಾನ್ಗೆ ಈ ಸ್ಥಿತಿ ಬರೋದಕ್ಕೆ ಕಾರಣ ಅಮೆರಿಕ. 1979ರ ಡಿಸೆಂಬರ್‌ನಲ್ಲಿ ಅಫ್ಗಾನ್ ಮೇಲೆ ದಂಡೆತ್ತಿ ಬಂದ ಸೋವಿಯತ್ ರಷ್ಯಾ ಯುದ್ಧ ಆರಂಭಿಸಿತ್ತು. ಅಫ್ಗಾನ್ ನೆಲದಲ್ಲಿ ರಷ್ಯಾ ರಣಕಹಳೆ ಮೊಳಗಿಸಿದ್ದೇ ತಡ, ಸೋವಿಯತ್ ರಷ್ಯಾ ವಿರೋಧಿ ಬಣ ಒಗ್ಗೂಡಿತ್ತು. ರಷ್ಯಾ ಪಡೆಗಳಿಗೆ ಬಿಸಿ ಮುಟ್ಟಿಸಲು ಅಮೆರಿಕದ ಸಾರಥ್ಯದಲ್ಲಿ ರಣತಂತ್ರ ರೂಪುಗೊಂಡಿತ್ತು. ನೇರವಾಗಿ ರಷ್ಯಾ ವಿರುದ್ಧ ಹೋರಾಟ ನಡೆಸದ ಅಮೆರಿಕ ಹಾಗೂ ಮಿತ್ರ ಪಡೆಗಳು, ಅಫ್ಗಾನ್ ಜನರನ್ನೇ ಬಳಸಿಕೊಂಡು ರಷ್ಯನ್ ಸೇನೆ ವಿರುದ್ಧ ರಣತಂತ್ರ ಹೆಣೆದಿದ್ದವು. ಇದೇ ವೇಳೆ ಅಮೆರಿಕದ ಸಹಕಾರದಿಂದಲೇ ತಾಲಿಬಾನ್ ಎಂಬ ಧರ್ಮಾಂಧ ರಾಕ್ಷಸರ ಗುಂಪು ಸೃಷಿಯಾಯಿತು.
ರಷ್ಯಾಕ್ಕೆ ಸೋಲು, ತಾಲಿಬಾನ್‌ಗೆ ಗೆಲುವು
ಮೊದಲಿಗೆ ಗೆಲುವಿನ ನಗೆ ಬೀರಿದ್ದ ಸೋವಿಯತ್ ರಷ್ಯಾ ನಿಧಾನಕ್ಕೆ ಸೋಲುತ್ತಾ ಬಂತು. ಹೀಗೆ ಕೆಲವೇ ದಿನಗಳಲ್ಲಿ ಯುದ್ಧ ಮುಗಿದು ಹೋಗಬಹುದು ಎಂಬ ಆಸೆಯಲ್ಲಿ ಅಫ್ಗಾನ್ ನೆಲಕ್ಕೆ ಬಂದಿಳಿದಿದ್ದ ಸೋವಿಯತ್ ರಷ್ಯಾ, ಬರೋಬ್ಬರಿ 9 ವರ್ಷಗಳಿಗೂ ಹೆಚ್ಚು ಕಾಲ ಅಫ್ಗಾನ್ ನೆಲದಲ್ಲಿ ಪರದಾಡುವ ಪರಿಸ್ಥಿತಿ ಎದುರಾಯಿತು. 1989ರಲ್ಲಿ ಸೋವಿಯತ್ ಒಕ್ಕೂಟ ಅಫ್ಗಾನಿಸ್ತಾನದಿಂದ ಸಂಪೂರ್ಣವಾಗಿ ಹೊರಬಂದ ನಂತರ ಕೂಡ, ರಷ್ಯಾ ಬೆಂಬಲಿತ ಕಮ್ಯುನಿಸ್ಟ್ ಸರ್ಕಾರ ಮತ್ತು ಮುಜಾಹಿದ್ದೀನ್ ಸಂಘಟನೆ ಮಧ್ಯೆ ಹಿಂಸಾಚಾರ ಮುಂದುವರಿದಿತ್ತು. ಏಪ್ರಿಲ್ 18, 1992 ರಂದು ಮೊಹಮ್ಮದ್ ನಜೀಬುಲ್ಲಾ ಸರ್ಕಾರ ಬಿದ್ದು ಹೋದ ಬಳಿಕ ಅಫ್ಗಾನಿಸ್ತಾನದಲ್ಲಿ ಅಧಿಕಾರ ಹಿಡಿಯಲು ಮುಜಾಹಿದ್ದೀನ್ ಗುಂಪುಗಳ ನಡುವೆ ಘರ್ಷಣೆ ಆರಂಭವಾಗಿತ್ತು. ಸತತ ಘರ್ಷಣೆಯಲ್ಲೇ ಮುಳುಗಿ ಹೋಗಿದ್ದ ಅಫ್ಗಾನ್ ನೆಲದಲ್ಲಿ ಸುಸ್ಥಿರ ಸರ್ಕಾರ ತರಬೇಕು ಎಂಬ ಉದ್ದೇಶ ಹೊಂದಿದ್ದ ತಾಲಿಬಾನ್, ಮುಜಾಹಿದ್ದೀನ್ ಗುಂಪುಗಳನ್ನೂ ಹಿಂದಿಕ್ಕಿ ಗೆಲುವು ಸಾಧಿಸಿತ್ತು.
1996ರಿಂದ ನಾಲ್ಕು ವರ್ಷಗಳ ಕಾಲ ತಾಲಿಬಾನ್ ಆಡಳಿತ
ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಹುಟ್ಟಿದ್ದೇ ಧರ್ಮದ ಆಧಾರದಲ್ಲಿ ರಾಜಕೀಯ ಮಾಡೋಕೆ. ಮೊದಲು ದೇಶ ಆಳೋಕೆ, ಬಳಿಕ ವಿಶ್ವವನ್ನೇ ಆಳೋಕೆ. ಈ ತಾಲಿಬಾನ್ ಅಧಿಕೃತವಾಗಿ 1994ರಲ್ಲಿ ಕಂದಹಾರ್‌ನಲ್ಲಿ ಸಂಘಟನೆ ಹುಟ್ಟಿಕೊಂಡಿತ್ತು. ಸೇನಾಡಳಿತವನ್ನು ಸಂಪೂರ್ಣವಾಗಿ ನಾಶ ಮಾಡಿ, ಅಫ್ಗಾನಿಸ್ತಾನ ಆಳಲು ತಾಲಿಬಾನ್ ಮುಖಂಡರು ರಣತಂತ್ರ ರೂಪಿಸಿದ್ದರು. ಯಾವಾಗ ಸೋವಿಯತ್ ರಷ್ಯಾ ಪಡೆಗಳು ಅಫ್ಗಾನಿಸ್ತಾನವನ್ನ ಬಿಟ್ಟು ಹೋದ್ರೋ, ಆಗ ಅಫ್ಗಾನಿಸ್ತಾನದಲ್ಲಿ ಅರಾಜಕತೆ ಸೃಷ್ಟಿಯಾಗಿತ್ತು. ಈ ಅರಾಜಕತೆಯನ್ನೇ ಬಳಸಿಕೊಂಡು ತಾಲಿಬಾನ್ ಈಗ ಹೇಗ್ ಮಾಡ್ತಾ ಇದ್ಯೋ, ಆಗ ತನ್ನ ಬಲ ಹೆಚ್ಚಿಸಿಕೊಂಡಿತ್ತು. 1996ರಲ್ಲಿ ಇಡೀ ಅಫ್ಗಾನಿಸ್ತಾನವನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ತಾಲಿಬಾನ್ ಆಡಳಿತ ನಡೆಸಿತ್ತು. ಸರಿಸುಮಾರು ನಾಲ್ಕು ವರ್ಷಗಳ ಕಾಲ ತಾಲಿಬಾನ್ ಆಡಳಿತ ನಡೆಸಿತ್ತು.
ತಾಲಿಬಾನ್ ಆಡಳಿತ ಅಂತ್ಯ, ಪ್ರಜಾಸತ್ತಾತ್ಮಕ ಸರ್ಕಾರ ಜಾರಿ
2001ರಲ್ಲಿ ಅಮೆರಿಕ, ನ್ಯಾಟೋ ಪಡೆಗಳ ನೆರವಿನಿಂದ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಕೊನೆಗಣಿಸಿ ಪ್ರಜಾಸತ್ತಾತ್ಮಕ ಸರ್ಕಾರ ಜಾರಿಗೆ ತರಲಾಯ್ತು. 2001ರಿಂದ 2021ರ ತನಕ ಅಫ್ಗಾನಿಸ್ತಾನದಲ್ಲೇ ಅಮೆರಿಕ ಸೇನೆ ಇತ್ತು. ಈ ಟೈಂನಲ್ಲಿ ಅಫ್ಘಾನಿಸ್ತಾನದಲ್ಲಿ ಈ ರೀತಿಯ ಅಹಿತರ ಘಟನೆಗಳು ನಡೆದಿರಲಿಲ್ಲ. ಅಂದ್ರೆ ತಾಲಿಬಾನ್ ಉಗ್ರರು ಈ ಮಟ್ಟಿಗೆ ಬಾಲ ಬಿಚ್ಚೋಕೆ ಆಗಿರಲಿಲ್ಲ. ಆದ್ರೆ ಅಮೆರಿಕ ತನ್ನ ಸೇನೆಯನ್ನ ಅಫ್ಗಾನ್‌ನಿಂದ ವಾಪಸ್ ಕರೆಸಿಕೊಳ್ಳುತ್ತಿದ್ದಂತೆ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆಯೋಕೆ ಶುರುಮಾಡಿದ್ದಾರೆ. ಇಡೀ ಅಫ್ಗಾನ್‌ನನ್ನ ವಶಕ್ಕೆ ಪಡೆದು ತನ್ನದೇ ಸರ್ಕಾರವನ್ನ ರಚಿಸಿದೆ. ತಾಲಿಬಾನ್ ಅಫ್ಗಾನಿಸ್ತಾನದಲ್ಲಿ ಮರು ಹುಟ್ಟುಪಡೆದು ಇಡೀ ದೇಶವನ್ನೇ ಆಹುತಿ ಪಡೆದಿದೆ. ಇದನ್ನೆಲ್ಲ ನೋಡ್ತಾ ಅಮೆರಿಕ ಸೈಲೆಂಟ್ ಆಗಿದೆ.
ಅಂದು ಅಮೆರಿಕದ ಶಕ್ತಿಯಿಂದ ಹುಟ್ಟಿಕೊಂಡ ಇದೇ ತಾಲಿಬಾನ್ ರಷ್ಯಾ ಸೇನೆ ವಾಪಸ್ ಹೋದ ನಂತ್ರ ಅಫ್ಗಾನ್‌ನಲ್ಲಿ 4 ವರ್ಷಗಳ ಕಾಲ ಅಧಿಕಾರ ನಡೆಸಿತ್ತು. ನಂತ್ರ ಅಮೆರಿಕ ಸೇನೆ ಅಫ್ಗಾನ್‌ಗೆ ಎಂಟ್ರಿಕೊಟ್ಟು ತಾಲಿಬಾನ್ ಆಟಕ್ಕೆ ಬ್ರೇಕ್ ಹಾಕಿತ್ತು. ಆದ್ರೆ ಈಗ ಅಮೆರಿಕ ಸೇನೆ ವಾಪಸ್ ಹೋಗುತ್ತಿದ್ದಂತೆ ತಾಲಿಬಾನ್ ಉಗ್ರರು ಹುಚ್ಚಾಟ ಶುರುವಾಗಿದೆ. ಇಡೀ ದೇಶವನ್ನ ವಶಕ್ಕೆ ಪಡೆದು ಪ್ರಪಂಚಕ್ಕೆ ಕೆಟ್ಟ ಮ್ಯಾಸೇಜ್ ರವಾನಿಸಿದ್ದಾರೆ. ಅಂದು ರಷ್ಯಾ ವಿರುದ್ಧ ಸೇಡಿಗಾಗಿ ತಾಲಿಬಾನ್‌ನನ್ನ ಅಮೆರಿಕ ಬೆಳೆಸದಿದ್ದರೆ ಇಂದು ಅಫ್ಗಾನ್‌ಗೆ ಈ ಸ್ಥಿತಿ ಬರ್ತಿರಲಿಲ್ಲ.
ಇದನ್ನೂ ಓದಿ: Taliban Rule In Afghanistan: ಮೊಬೈಲ್, ಇಂಟರ್ನೆಟ್, ಬಂದೂಕು, ಬದುಕು; ತಾಲಿಬಾನ್ 2.0 ಆಳ್ವಿಕೆಯಲ್ಲಿ ಅಫ್ಘಾನಿಸ್ತಾನ