ಉಕ್ರೇನ್ನಿಂದ ವಾಪಸ್ ತೆರಳುವಂತೆ ಜಗತ್ತಿನ ಹಲವು ದೇಶಗಳು ರಷ್ಯಾಕ್ಕೆ (Russia) ಆಗ್ರಹ ಮಾಡುತ್ತಿದ್ದರೂ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಕಿವಿಗೊಡದೆ ಯುದ್ಧವನ್ನು ಮುಂದುವರಿಸುತ್ತಲೇ ಇದೆ ಆ ದೇಶ. ಈ ಮಧ್ಯೆ ಬೀದಿಬೀದಿಯಲ್ಲಿ ನಿಂತಿರುವ ರಷ್ಯಾ ಸೈನಿಕರನ್ನು ಉಕ್ರೇನ್ ನಾಗರಿಕರು ಮಾತನಾಡಿಸುತ್ತಿದ್ದಾರೆ. ಇಲ್ಲೇಕೆ ಬಂದಿರಿ? ನಿಮ್ಮದೇಶದಲ್ಲಿ ನಿಮಗೆ ಮಾಡಲು ಕೆಲಸವಿಲ್ಲವಾ? ಎಂಬಿತ್ಯಾದಿ ವ್ಯಂಗ್ಯ, ಆಕ್ರೋಶ ಭರಿತ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಹೀಗೆ ಉಕ್ರೇನ್ ನಾಗರಿಕರು ರಷ್ಯಾ ಸೈನಿಕರನ್ನು ಮಾತನಾಡಿಸುವ ಹಲವು ದೃಶ್ಯಗಳನ್ನು ಒಳಗೊಂಡ ವಿಡಿಯೋವೊಂದನ್ನು ಉಕ್ರೇನಿಯನ್ ವಿದೇಶಾಂಗ ವ್ಯವಹಾರಗಳ ಇಲಾಖೆ ಶೇರ್ ಮಾಡಿಕೊಂಡಿದೆ.
ರಷ್ಯಾ ತನ್ನ ಸೈನಿಕರನ್ನು ಉಕ್ರೇನ್ಗೆ ಕಳಿಸುವಾಗ ಅವರಿಗೆ, ನಿಮ್ಮನ್ನು ಉಕ್ರೇನ್ನಲ್ಲಿ ನಾಗರಿಕರು ಹೂವುಕೊಟ್ಟು ಸ್ವಾಗತಿಸುತ್ತಾರೆ ಎಂಬ ಭರವಸೆ ನೀಡಿತ್ತು. ಉಕ್ರೇನ್ ಸರ್ಕಾರ ಅಲ್ಲಿನ ಅನೇಕ ಜನರನ್ನು ಹಲವು ವರ್ಷಗಳಿಂದಲೂ ಸೆರೆಯಲ್ಲಿ ಇಟ್ಟಿದೆ. ಹಾಗಾಗಿ ನಾಗರಿಕರು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ ಎಂಬ ಸುಳ್ಳನ್ನು ಅನೇಕ ವರ್ಷಗಳಿಂದ ಹೇಳಿಕೊಂಡು ಬಂದಿದೆ. ಆದರೆ ವಾಸ್ತವವನ್ನು ಈ ವಿಡಿಯೋದಲ್ಲಿ ನೋಡಬಹುದು. ಉಕ್ರೇನ್ ಜನರು ಖಾಲಿ ಕೈಯಲ್ಲಿಯೇ ರಷ್ಯಾದ ಸೈನಿಕರು ಮತ್ತು ಯುದ್ಧ ಟ್ಯಾಂಕ್ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಉಕ್ರೇನ್ ಸಚಿವಾಲಯ ಕ್ಯಾಪ್ಷನ್ ಬರೆದಿದೆ.
ಉಕ್ರೇನ್ನ ರಸ್ತೆ ಬದಿಗಳಲ್ಲಿ ಯುದ್ಧ ಟ್ಯಾಂಕ್ಗಳು, ಸಾಮಗ್ರಿಗಳೊಂದಿಗೆ ನಿಂತ ರಷ್ಯಾ ಸೈನಿಕರೊಂದಿಗೆ ಉಕ್ರೇನ್ ನಾಗರಿಕರು ನಡೆಸಿದ ಮಾತುಕತೆ, ಅವರನ್ನು ವಿರೋಧಿಸಿದ ರೀತಿಯ ಹಲವು ತುಣುಕುಗಳನ್ನು ವಿಡಿಯೋ ಒಳಗೊಂಡಿದೆ. ಅದರಲ್ಲಿ ಉಕ್ರೇನಿಯನ್ ಪ್ರಜೆಯೊಬ್ಬ ರಷ್ಯಾದ ಯುದ್ಧ ಟ್ಯಾಂಕ್ನ್ನು ತನ್ನ ಕೈಯಲ್ಲೇ ಹಿಡಿದಿಡಲು ಪ್ರಯತ್ನ ಪಟ್ಟಿದ್ದನ್ನು ನೋಡಬಹುದು. ಟ್ಯಾಂಕ್ ಮುಂದೆ ಚಲಿಸದಂತೆ ನಿಲ್ಲಿಸಲು ಆತ ತನ್ನ ದೇಹವನ್ನೇ ಅಡ್ಡಕೊಟ್ಟಿದ್ದಾನೆ. ಹಾಗೇ, ಇನ್ನೊಬ್ಬಳು ಮಹಿಳೆ ರಷ್ಯಾದ ಸೈನಿಕನ ಎದುರು ನಿಂತು ಆತನಿಗೆ ರಷ್ಯಾದ ರಾಷ್ಟ್ರೀಯ ಹೂವಾದ ಸೂರ್ಯಕಾಂತಿ ಬೀಜಗಳನ್ನು ನೀಡಿ, ನೀವು ಅತಿಕ್ರಮಣದಾರರು, ನೀವು ಫ್ಯಾಸಿಸ್ಟರು. ನಮ್ಮ ನೆಲದಲ್ಲಿ ನೀವೇನು ಮಾಡುತ್ತಿದ್ದೀರಿ ಎಂದು ದೈರ್ಯವಾಗಿ ಪ್ರಶ್ನಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ, ಸೂರ್ಯಕಾಂತಿ ಬೀಜಗಳನ್ನು ಕೊಟ್ಟು, ನೀವಿದನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ. ಈ ಯುದ್ಧದಲ್ಲಿ ನೀವೆಲ್ಲ ಸತ್ತು ಭೂಮಿಯೊಳಗೆ ಸೇರಿದಾಗ ಅಲ್ಲಿ ಸೂರ್ಯಕಾಂತಿ ಗಿಡವಾದರೂ ಹುಟ್ಟಿಕೊಳ್ಳಲಿ ಎಂದು ಹೇಳಿದ್ದಾರೆ. ಇಂಥ ಹತ್ತು ಹಲವು ತುಣುಕುಗಳನ್ನೊಳಗೊಂಡ ವಿಡಿಯೋವನ್ನು ಉಕ್ರೇನ್ ಸಚಿವಾಲಯ ಶೇರ್ ಮಾಡಿಕೊಂಡಿದೆ.
?? promised its soldiers they would be greeted in ?? w/ flowers. ?? has been lying for years about how the ??authorities are keeping ?? people in “captivity”. But ?? people are free and ready to stop ?? tanks with their bare hands.
Video by @Ukrainer?https://t.co/li4bpHFjLy
— MFA of Ukraine ?? (@MFA_Ukraine) February 28, 2022
ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿ ಇಂದು 6ನೇ ದಿನ. ರಷ್ಯಾದ ಆಕ್ರಮಣ ತಡೆಯಲು ಉಕ್ರೇನ್ನ ನಾಗರಿಕರು ಅನೇಕರು ತಮ್ಮ ಕೈಯ್ಯಲ್ಲಾದ ಪ್ರಯತ್ನ ಮಾಡುತ್ತಲೇ ಇದ್ದಾರೆ. ಖಂಡಿತ ಉಕ್ರೇನ್ ಗೆಲ್ಲುತ್ತದೆ, ನೀವೆಲ್ಲ ಸಾಯುತ್ತೀರಿ ಎಂದು ರಷ್ಯಾದ ಸೈನಿಕರ ಎದುರು ನಿಂತು ಧೈರ್ಯವಾಗಿ, ಕೂಗಿ ಹೇಳುತ್ತಿದ್ದಾರೆ. ಇಂದು ಕಾರ್ಖೀವ್ನಲ್ಲಿ ವಿಪರೀತ ಬಾಂಬ್, ಗುಂಡಿನ ದಾಳಿಯ ಶಬ್ದ ಕೇಳಿಬರುತ್ತಿದೆ. ಈಗಾಗಲೇ ಬೆಲಾರಸ್ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆಯೂ ನಡೆದಿದೆ. ಈ ಮಧ್ಯೆ ರಷ್ಯಾ ಉಕ್ರೇನ್ನಲ್ಲಿ ಆಕ್ರಮಣ ತೀವ್ರತೆಯನ್ನು ಕಡಿಮೆ ಮಾಡಿದ ಎಂಬ ವರದಿಯೂ ಬಂದಿತ್ತು. ಆದರೆ ಸ್ಥಳೀಯ ಮಾಧ್ಯಮಗಳು ಅದನ್ನು ಅಲ್ಲಗಳೆದಿವೆ.