ಅಫ್ಘಾನಿಸ್ತಾನದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ತಾಲಿಬಾನ್ ಸರ್ಕಾರವನ್ನು ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳು ಗುರುತಿಸದಿದ್ದರೆ ಹಾಗೂ ವಿದೇಶದಲ್ಲಿ ಇರುವ ಆಫ್ಘನ್ ನಿಧಿಯನ್ನು ಸ್ಥಗಿತಗೊಳಿಸುವುದನ್ನು ಮುಂದುವರಿಸಿದರೆ ಇದರಿಂದ ಅಫ್ಘಾನಿಸ್ತಾನಕ್ಕೆ ಮಾತ್ರ ಅಲ್ಲ, ಇಡೀ ವಿಶ್ವಕ್ಕೆ ತೊಂದರೆ ಆಗಲಿದೆ ಎಂದು ಧಮ್ಕಿ ಹಾಕಲಾಗಿದೆ. ಕಳೆದ ಆಗಸ್ಟ್ನಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ತೆಕ್ಕೆಗೆ ತೆಗೆದುಕೊಂಡಾಗಿನಿಂದಲೂ ಆ ಸರ್ಕಾರವನ್ನು ಯಾವುದೇ ದೇಶ ಅಧಿಕೃತವಾಗಿ ಗುರುತಿಸಿಲ್ಲ. ಇದರ ಜತೆಗೆ ಅಫ್ಘಾನಿಸ್ತಾನಕ್ಕೆ ಸೇರಿದ ಬಿಲಿಯನ್ಗಟ್ಟಲೆ ಡಾಲರ್ ಆಸ್ತಿ ಮತ್ತು ನಿಧಿ ವಿದೇಶಗಳಲ್ಲಿ ಸ್ಥಗಿತಗೊಂಡಿದೆ. ಅಫ್ಘಾನಿಸ್ತಾನದಲ್ಲಿ ತೀವ್ರತರದಲ್ಲಿ ಆರ್ಥಿಕ ಹಾಗೂ ಮಾನವೀಯ ಬಿಕ್ಕಟ್ಟು ತಲೆದೋರಿದ್ದರೂ ಈ ಆಸ್ತಿ, ನಿಧಿಯನ್ನು ಹಿಂತಿರುಗಿಸುತ್ತಿಲ್ಲ. “ಅಮೆರಿಕಕ್ಕೆ ನಮ್ಮ ಸಂದೇಶ ಏನೆಂದರೆ, ಒಂದು ವೇಳೆ ಗುರುತಿಸದಿರುವುದು ಹೀಗೇ ಮುಂದುವರಿದಲ್ಲಿ ಆಫ್ಘನ್ ಸಮಸ್ಯೆ ಮುಂದುವರಿಯುತ್ತದೆ. ಇದು ಈ ಭಾಗದ ಸಮಸ್ಯೆ ಮತ್ತು ವಿಶ್ವದ ಸಮಸ್ಯೆ ಆಗಿಯೂ ಬದಲಾಗಬಹುದು,” ಎಂದು ತಾಲಿಬಾನ್ ವಕ್ತಾರ ಝಬೀವುಲ್ಲಾ ಮುಜಾಹಿದ್ ಶನಿವಾ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ತಿಳಿಸಿರುವುದಾಗಿ ವರದಿ ಆಗಿದೆ.
ಕಳೆದ ಬಾರಿ ಕೂಡ ತಾಲಿಬಾನ್ ಮತ್ತು ಅಮೆರಿಕ ಮಧ್ಯೆ ಯುದ್ಧ ಆಗುವುದಕ್ಕೆ ಕಾರಣ ಆಗಿದ್ದು ಎರಡರ ಮಧ್ಯೆಯೂ ರಾಜತಾಂತ್ರಿಕ ಬಾಂಧವ್ಯ ಇಲ್ಲದಿದ್ದದ್ದು. ಸೆಪ್ಟೆಂಬರ್ 11, 2001ರ ದಾಳಿ ನಂತರ ಅಮೆರಿಕವು ಅಫ್ಘಾನಿಸ್ತಾನದ ಮೇಲೆ ಯುದ್ಧ ಸಾರಿತು. ಆಗಿನ ತಾಲಿಬಾನ್ ಸರ್ಕಾರವು ಅಲ್ ಕೈದಾದ ಒಸಾಮ ಬಿನ್ ಲಾಡೆನ್ ಜತೆಗೆ ಯಾವುದೇ ರೀತಿಯಲ್ಲೂ ಕೈ ಜೋಡಿಸಿಲ್ಲ ಎಂದ ಮೇಲೂ ದಾಳಿ ಮಾಡಲಾಗಿತ್ತು. “ಯಾವ ವಿಚಾರವು ಯುದ್ಧಕ್ಕೆ ಕಾರಣವಾಗಿತ್ತೋ ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ಅವರು ರಾಜಕೀಯ ಸಂಧಾನದ ಮೂಲಕವೂ ಬಗೆಹರಿಸಬಹುದಿತ್ತು,” ಎಂದು ಮುಜಾಹಿದ್ ಅಭಿಪ್ರಾಯ ಪಟ್ಟಿದ್ದಾಗಿ ಹೇಳಲಾಗಿದೆ. ತಾಲಿಬಾನ್ ಸರ್ಕಾರವನ್ನು ಗುರುತಿಸುವುದು ಆಫ್ಘನ್ ಜನರ ಹಕ್ಕು ಎಂದು ಕೂಡ ಆತ ಪ್ರತಿಪಾದಿಸಿದ್ದ ಬಗ್ಗೆ ವರದಿ ಆಗಿದೆ.
ತಾಲಿಬಾನ್ ಸರ್ಕಾರವನ್ನು ಯಾವುದೇ ದೇಶ ಗುರುತಿಸಿಲ್ಲ. ಆದ್ದರಿಂದ ಹಲವು ದೇಶಗಳ ಹಿರಿಯ ಅಧಿಕಾರಿಗಳು ಕಾಬೂಲ್ ಮತ್ತು ವಿದೇಶಗಳಲ್ಲಿ ಇರುವ ಚಳವಳಿಯ ನಾಯಕರನ್ನು ಭೇಟಿ ಆಗುತ್ತಿದ್ದಾರೆ. ತುರ್ಕ್ಮನ್ ವಿದೇಶಾಂಗ ಸಚಿವ ರಸಿತ್ ಮೆರೆಡೊವ್ ಶನಿವಾರ ಕಾಬೂಲ್ನಲ್ಲಿದ್ದರು. ಎರಡೂ ಕಡೆಯಿಂದಲೂ ತುರ್ಕ್ಮೇನಿಸ್ತಾನ್- ಅಫ್ಘಾನಿಸ್ತಾನ್-ಪಾಕಿಸ್ತಾನ್-ಇಂಡಿಯಾ (TAPI) ಅನಿಲ ಪೈಪ್ಲೈನ್ ಶೀಘ್ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಯಿತು ಎಂದು ಟ್ವಿಟ್ಟರ್ನಲ್ಲಿ ಮುಜಾಹಿದ್ ಮಾಹಿತಿ ಹಂಚಿಕೊಂಡಿರುವುದರಿಂದ ತಿಳಿದುಬಂದಿದೆ.
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಈ ವಾರದ ಆರಂಭದಲ್ಲಿ ಕತಾರ್‌ನಲ್ಲಿ ತಾಲಿಬಾನ್ ಅಧಿಕಾರಿಗಳನ್ನು ಭೇಟಿಯಾದರು. ಸಾರಿಗೆ, ಮೂಲಸೌಕರ್ಯಕ್ಕೆ ಹಣಕಾಸು ಒದಗಿಸುವುದಾಗಿ ಚೀನಾ ಭರವಸೆ ನೀಡಿದೆ. ನೆರೆಯ ಪಾಕಿಸ್ತಾನದ ಮೂಲಕ ಚೀನಾದ ಮಾರುಕಟ್ಟೆಗಳಿಗೆ ಕಾಬೂಲ್‌ನ ರಫ್ತು ಪ್ರವೇಶವನ್ನು ನೀಡುವುದಾಗಿ ಮುಜಾಹಿದ್ ಶನಿವಾರ ಮಾಹಿತಿ ನೀಡಿದ್ದು, ಗಡಿ ದಾಟುವಿಕೆಗಳನ್ನು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿ, ವಿಶೇಷವಾಗಿ ಪಾಕಿಸ್ತಾನದೊಂದಿಗೆ ಇತ್ತೀಚಿನ ದಿನಗಳಲ್ಲಿ ಆಗಾಗ ಗಡಿ ಮುಚ್ಚುವಿಕೆ ಮತ್ತು ಪ್ರತಿಭಟನೆಗಳನ್ನು ಕಂಡಿದೆ. ಅಫ್ಘಾನಿಸ್ತಾನಕ್ಕೆ ಕ್ರಾಸಿಂಗ್‌ಗಳು ನಿರ್ಣಾಯಕವಾಗಿವೆ. ಕಳೆದ ವಾರ ಪಾಕಿಸ್ತಾನದ ವಿದೇಶಾಂಗ ಸಚಿವರು ಕಾಬೂಲ್‌ಗೆ ತೆರಳಿದ್ದ ಸಂದರ್ಭದಲ್ಲಿ ಈ ಕುರಿತು ಗಂಭೀರ ಮಾತುಕತೆ ನಡೆಸಲಾಗಿತ್ತು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನ ಉಗ್ರರ ಪಾಲಿನ ಸ್ವರ್ಗವಾಗದಿರಲಿ; ತಾಲಿಬಾನ್ಗೆ ಭಾರತ, ಅಮೆರಿಕ ಒತ್ತಾಯ