ಭಾರತ ಯಶಸ್ವಿಯಾದರೆ ಬೇರೆಯವರಿಗೂ ಯಶಸ್ಸು; ಭಾರತದ ಬಗ್ಗೆ ಜಾಗತಿಕ ದಕ್ಷಿಣ ದೇಶಗಳಿಂದ ಗುಣಗಾನ

India-UN For Global South: ಜಾಗತಿಕ ದಕ್ಷಿಣಕ್ಕಾಗಿ ಭಾರತ ಮತ್ತು ವಿಶ್ವಸಂಸ್ಥೆ ಎಂಬ ಕಾರ್ಯಕ್ರಮದಲ್ಲಿ ತೃತೀಯ ವಿಶ್ವ ದೇಶಗಳ ನಾಯಕರು ಮಾತನಾಡಿ, ಭಾರತದ ಜಾಗತಿಕ ನಾಯಕತ್ವಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಲು ಭಾರತ ಅರ್ಹತೆ ಹೊಂದಿದೆ ಎನ್ನುವ ಈ ದೇಶಗಳು, ಭಾರತ ಯಶಸ್ವಿಯಾದರೆ ಇತರ ದೇಶಗಳ ಯಶಸ್ಸಿಗೂ ಸಾಧನ ಒದಗಿಸುತ್ತದೆ ಎಂದು ಭಾರತದ ಮಾನವೀಯತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ.

ಭಾರತ ಯಶಸ್ವಿಯಾದರೆ ಬೇರೆಯವರಿಗೂ ಯಶಸ್ಸು; ಭಾರತದ ಬಗ್ಗೆ ಜಾಗತಿಕ ದಕ್ಷಿಣ ದೇಶಗಳಿಂದ ಗುಣಗಾನ
ಸಭೆಯೊಂದರಲ್ಲಿ ಎಸ್ ಜೈಶಂಕರ್ ಮಾತನಾಡುತ್ತಿರುವ ಫೈಲ್ ಚಿತ್ರ ಇದು.
Edited By:

Updated on: Oct 12, 2026 | 1:34 PM

ಈ ಬಾರಿಯ ಜಿ20 ಸಭೆಯನ್ನು ತನ್ನ ನಾಯಕತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ ಭಾರತ ಜಾಗತಿಕ ನಾಯಕನಾಗಿ  ಗುರುತಾಗಿದೆ. ಜಿ20 ಗುಂಪಿಗೆ 50ಕ್ಕೂ ಹೆಚ್ಚು ದೇಶಗಳ ಒಕ್ಕೂಟವಾದ ಆಫ್ರಿಕನ್ ಯೂನಿಯನ್ ಅನ್ನು ಸೇರಿಸಿಕೊಳ್ಳುವ ಮೂಲಕ ಹೆಚ್ಚು ದೇಶಗಳನ್ನು ಮುನ್ನೆಲೆಗೆ ತಂದಿದೆ. ಜಾಗತಿಕ ದಕ್ಷಿಣ ದೇಶಗಳ ಮಹತ್ವವೇನೆಂಬುದನ್ನು ಮುಂದುವರಿದ ದೇಶಗಳಿಗೆ ತೋರಿಸಿದೆ. ಇದೀಗ ದಕ್ಷಿಣ ದೇಶಗಳು ಭಾರತದ ನಾಯಕತ್ವದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತಿವೆ. ಮೊನ್ನೆ ನಡೆದ ‘ಜಾಗತಿಕ ದಕ್ಷಿಣಕ್ಕಾಗಿ ಭಾರತ ಮತ್ತು ವಿಶ್ವಸಂಸ್ಥೆ’  ಕಾರ್ಯಕ್ರಮದಲ್ಲಿ ದಕ್ಷಿಣ ದೇಶಗಳು ಭಾರತದ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿವೆ. ಜಿ20ಯಲ್ಲಿ ಭಾರತದ ಅಧ್ಯಕ್ಷತೆ ಸಮರ್ಪಕವಾಗಿತ್ತು ಎಂದು ಈ ದೇಶಗಳ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಈ ಸಭೆಯಲ್ಲಿ ದಕ್ಷಿಣ ದೇಶಗಳ ವಿದೇಶಾಂಗ ಸಚಿವರು ಸೇರಿದಂತೆ ವಿವಿಧ ನಾಯಕರು ಮಾತನಾಡಿರುವ ವಿಡಿಯೋ ತುಣುಕನ್ನು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಗಯಾನ, ಡಾಮಿನಿಕಾ, ಸಮೋವಾ, ಸೇಂಟ್ ಲೂಷಿಯಾ, ಮಾರಿಷಸ್, ಮಾಲ್ಡೀವ್ಸ್ ಇತ್ಯಾದಿ ಕೆಲ ದೇಶಗಳ ನಾಯಕರು ಮಾತನಾಡಿದ್ದಾರೆ. ಗಯಾನದ ವಿದೇಶಾಂಗ ಸಚಿವ ಹೂಜ್ ಹಿಲ್ಟನ್ ಟಾಡ್ ಮಾತನಾಡಿ, ಜಾಗತಿಕ ದಕ್ಷಿಣವೆಂಬ ಪರಿಕಲ್ಪನೆ ಬರುವ ಮುನ್ನವೇ ಭಾರತ ತನ್ನ ಅಭಿವೃದ್ಧಿಯ ಪ್ರತಿಯೊಂದು ಹಂತದಲ್ಲೂ ಜಾಗತಿಕ ದಕ್ಷಿಣವನ್ನೂ ಜೊತೆಗೆ ಕೊಂಡೊಯ್ಯುತ್ತಿದೆ ಎಂದು ಹೇಳಿದ್ದಾರೆ.

‘ಭಾರತ ಯಶಸ್ವಿಯಾದರೆ ಬೇರೆಯವರೂ ಯಶಸ್ಸು ಸಾಧಿಸಲು ಸಾಧನಗಳನ್ನು ನೀಡುತ್ತದೆ. ನಾವು ನಿಮಗೆ ವಸ್ತುಗಳನ್ನು ಮಾರುತ್ತೇವೆ ಎಂದು ಭಾರತ ಹೇಳುವುದಿಲ್ಲ. ಅವರಿಗೆ ಸಮಾಜ ಏನೆಂಬುದು ಗೊತ್ತು. ನಿಮಗೆ ತರಬೇತಿ ಕೊಡುತ್ತಾರೆ, ನಿಮ್ಮನ್ನು ಸಜ್ಜುಗೊಳಿಸುತ್ತಾರೆ’ ಎಂದು ಗಯಾನದ ವಿದೇಶಾಂಗ ಸಚಿವರು ಭಾರತವನ್ನು ಮನದುಂಬಿ ಶ್ಲಾಘಿಸಿದ್ದಅರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಖಾಯಂ ಸದಸ್ಯನಾಗಬೇಕು ಎನ್ನುವ ಡಾಮಿನಿಕಾ ರಿಪಬ್ಲಿಕ್

ಡಾಮಿನಿಕಾ ರಿಪಬ್ಲಿಕ್​ನ ವಿದೇಶಾಂಗ ಸಚಿವ ವಿನ್ಸ್ ಹೆಂಡರ್ಸನ್ ಮಾತನಾಡಿ, ಭಾರತ ಈಗ ಬಹಳ ಮುಖ್ಯವಾದ ಜಾಗತಿಕ ಪಾತ್ರಧಾರಿಯಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಖಾಯಂ ಸದಸ್ಯನಾಗಲು ಪೂರ್ಣ ಅರ್ಹತೆ ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕ, ಕೆರಿಬಿಯನ್ ಹಾಗು ಇತರ ಸಣ್ಣ ದ್ವೀಪ ರಾಷ್ಟ್ರಗಳ ನಾಯಕರು ಈ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದ ನಾಯಕತ್ವವನ್ನು ಮೆಚ್ಚಿಕೊಂಡಿದ್ದಾರೆ. ಎಸ್ ಜೈಶಂಕರ್ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಗಯಾನ, ಡಾಮಿನಿಕಾದ ಸಚಿವರು ಮಾತ್ರವಲ್ಲದೇ ಸೇಂಟ್ ಲೂಷಿಯ, ಟ್ರಿನಿಡಾಡ್ ಅಂಡ್ ಟೊಬಾಗೊ, ಭೂತಾನ್, ಮಾರಿಷಸ್, ಮಾಲ್ಡೀವ್ಸ್ ದೇಶಗಳ ವಿದೇಶಾಂಗ ಸಚಿವರು ಮಾತನಾಡಿದ್ದಾರೆ.

Published On - 10:51 am, Mon, 25 September 23

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us