UNSC: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ಇಲ್ಲದಿರುವುದು ಅಸಂಬದ್ಧವಾಗಿದೆ, ಇನ್ನಾದರೂ ಬದಲಾಗಿ ಎಲಾನ್ ಮಸ್ಕ್ ಕಿವಿಮಾತು
ಭಾರತವು ಎಂಟು ಅವಧಿಗಳಿಂದ (16 ವರ್ಷಗಳು) ಯುಎನ್ ಭದ್ರತಾ ಮಂಡಳಿಯಲ್ಲಿ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿದೆ. ಯುಎನ್ ಎಸ್‌ಸಿಯ ಖಾಯಂ ಸದಸ್ಯತ್ವವನ್ನು ಪಡೆಯಲು ಪರಸ್ಪರ ಬೆಂಬಲಿಸುವ ರಾಷ್ಟ್ರಗಳ ಗುಂಪು G4 ನ ಸದಸ್ಯ ರಾಷ್ಟ್ರವಾಗಿದೆ ಭಾರತ. ಹಾಗಾಗಿ ಈ ದೇಶಗಳು ಯುಎನ್‌ಎಸ್‌ಸಿಯಲ್ಲಿ ಸುಧಾರಣೆ ತರಬೇಕು ಎಂದು ಎಲಾನ್ ಮಸ್ಕ್ ಪ್ರತಿಪಾದಿಸಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋ: ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ಆಗಿಲ್ಲದಿರುವುದು ಅಸಂಬದ್ಧವಾಗಿದೆ ಎಂದು ಜರಿದಿರುವ ಟೆಸ್ಲಾ ಸಿಇಒ ಮತ್ತು ಟ್ವಿಟ್ಟರ್ ಮಾಲೀಕ ಎಲಾನ್ ಮಸ್ಕ್ ಅವರು ಇನ್ನಾದರೂ ಬದಲಾಗಿ, ವಿಶ್ವಸಂಸ್ಥೆಯ ಸಹ ಸಂಸ್ಥೆಗಳ ಸ್ವರೂಪವನ್ನು ಪರಿಷ್ಕರಣೆ ಮಾಡಿ ಎಂದು ಕಿವಿಮಾತು ಹೇಳಿದ್ದಾರೆ.
ಅಮೇರಿಕದ ವಾಣಿಜ್ಯೋದ್ಯಮಿ ಎಲಾನ್ ಮಸ್ಕ್ ಮೊನ್ನೆ ಭಾನುವಾರ ಯುಎನ್ ಸಹ ಸಂಸ್ಥೆಗಳ ಪರಿಷ್ಕರಣೆಯಲ್ಲಿನ ಸಮಸ್ಯೆಯನ್ನು ಎತ್ತಿ ತೋರಿಸಿದರು. ಇದೇ ವೇಳೆ ಹೆಚ್ಚುವರಿ ಶಕ್ತಿಯನ್ನು ಹೊಂದಿರುವ ದೇಶಗಳು ಅದನ್ನು ಬಿಟ್ಟುಕೊಡಲು ಬಯಸುವುದಿಲ್ಲ ಎಂದು ಹೇಳಿದರು. ಜೊತೆಗೆ ಆಫ್ರಿಕಾವು ಒಟ್ಟಾಗಿ ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯತ್ವವನ್ನು ಹೊಂದಿರಬೇಕು ಎಂದೂ ಅವರು ಬಯಸಿದರು. ಭೂಮಿಯ ಮೇಲೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದರೂ ಭಾರತವನ್ನು ಪರಿಗಣನೆಗೆ ತೆಗೆದುಕೊಳ್ಳದಿರುವುದು ಅಸಂಬದ್ಧವಾಗಿದೆ. ಆಫ್ರಿಕಾ ಒಟ್ಟಾಗಿ ಶಾಶ್ವತ ಸ್ಥಾನವನ್ನು ಹೊಂದಿರಬೇಕು ಎಂದು ಸೂಕ್ಷ್ಮವಾಗಿ ಅವರು ಹೆಳಿದರು. ಗಮನಾರ್ಹವೆಂದರೆ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರೂ ಸಹ ಇದೇ ಧಾಟಿಯಲ್ಲಿ ಮಾತನಾಡಿದ್ದು, ಯುಎನ್ ಇಂದಿನ ಜಗತ್ತನ್ನು ಪ್ರತಿಬಿಂಬಿಸಬೇಕೆಂದು ಭಾವೋದ್ರಿಕ್ತರಾಗಿ ಮನವಿ ಮಾಡಿದರು.
At some point, there needs to be a revision of the UN bodies.
Problem is that those with excess power don’t want to give it up.
India not having a permanent seat on the Security Council, despite being the most populous country on Earth, is absurd.
Africa collectively should…
— Elon Musk (@elonmusk) January 21, 2024
ಸೆಕ್ಯುರಿಟಿ ಕೌನ್ಸಿಲ್‌ನಲ್ಲಿ ಆಫ್ರಿಕಾಕ್ಕೆ ಇನ್ನೂ ಒಂದು ಖಾಯಂ ಸದಸ್ಯತ್ವ ಕೊಡದಿರುವುದನ್ನು ನಾವು ಹೇಗೆ ಒಪ್ಪಿಕೊಳ್ಳಬೇಕು? ಯುಎನ್ ಅಂಗ ಸಂಸ್ಥೆಗಳು ಇಂದಿನ ಜಗತ್ತನ್ನು ಪ್ರತಿಬಿಂಬಿಸಬೇಕು. 80 ವರ್ಷಗಳ ಹಿಂದೆ ಇದ್ದಂತೆ ಆಗಬಾರದು. ಸೆಪ್ಟೆಂಬರ್‌ನ ಭವಿಷ್ಯದ ಶೃಂಗಸಭೆಯು ಜಾಗತಿಕ ಆಡಳಿತ ಸುಧಾರಣೆಗಳನ್ನು ಪರಿಗಣಿಸಲು ಮತ್ತು ನಂಬಿಕೆಯನ್ನು ಮರು ನಿರ್ಮಿಸಲು ಒಂದು ಅವಕಾಶವಾಗಿದೆ ಗುಟೆರಸ್ ಅವರು ಜನವರಿ 21 ರಂದು ತಮ್ಮ ಪೋಸ್ಟ್ ಒಂದರಲ್ಲಿ ಹೇಳಿದ್ದಾರೆ.
Also Read: ವಿಶ್ವದ ಅತಿ ಎತ್ತರದ ಶ್ರೀರಾಮ ಮಂದಿರ 600 ಕೋಟಿ ವೆಚ್ಚದಲ್ಲಿ ಪರ್ತ್‌ನಲ್ಲಿ ಶೀಘ್ರವೇ ನಿರ್ಮಾಣ!
ಇದಕ್ಕೂ ಮುನ್ನ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಭಾರತದ ಖಾಯಂ ಸದಸ್ಯತ್ವಕ್ಕೆ ಜಾಗತಿಕ ಬೆಂಬಲ ಹೆಚ್ಚುತ್ತಿರುವ ಬಗ್ಗೆ ಒತ್ತು ನೀಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಕೆಲವೊಮ್ಮೆ ವಿಷಯಗಳನ್ನು ಉದಾರವಾಗಿ ನೀಡಲಾಗುವುದಿಲ್ಲ ಮತ್ತು ಅದನ್ನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು. ಸೆಪ್ಟೆಂಬರ್ 2023 ರಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ವಿಶ್ವಸಂಸ್ಥೆಗೆ ಅದರ ಅಂಗ ರಚನೆಯನ್ನು ಸುಧಾರಿಸಿಕೊಳ್ಳಲು ಇಷ್ಟವಿಲ್ಲ. ಹಾಗಾಗಿ ಸಂಸ್ಥೆಯು “ಅನಾಕ್ರೊನಿಸ್ಟಿಕ್” ಆಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ