ಕದನ ವಿರಾಮ ಮಾತುಕತೆಯಲ್ಲಿ ಭಾರತ ಮೂರನೇ ವ್ಯಕ್ತಿಯ ಪಾತ್ರವನ್ನು ನಿರಾಕರಿಸಿತ್ತು; ಪಾಕಿಸ್ತಾನ ಮಹತ್ವದ ಹೇಳಿಕೆ

ಕದನ ವಿರಾಮದ ಮಾತುಕತೆಯಲ್ಲಿ ಭಾರತ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಗೆ ಎಂದಿಗೂ ಒಪ್ಪಲಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಒಪ್ಪಿಕೊಂಡಿದ್ದಾರೆ. ಅಮೆರಿಕದ ಕದನ ವಿರಾಮ ಪ್ರಸ್ತಾಪವನ್ನು ಮಾಡಿತ್ತು. ಆದರೆ ಈ ವಿಷಯವನ್ನು ದ್ವಿಪಕ್ಷೀಯವಾಗಿ ನಿರ್ವಹಿಸಬೇಕು ಎಂದು ಭಾರತ ಹೇಳಿತ್ತು ಎಂದು ಪಾಕಿಸ್ತಾನ ಒಪ್ಪಿಕೊಂಡಿದೆ.

ಕದನ ವಿರಾಮ ಮಾತುಕತೆಯಲ್ಲಿ ಭಾರತ ಮೂರನೇ ವ್ಯಕ್ತಿಯ ಪಾತ್ರವನ್ನು ನಿರಾಕರಿಸಿತ್ತು; ಪಾಕಿಸ್ತಾನ ಮಹತ್ವದ ಹೇಳಿಕೆ
Ishaq Dar

Updated on: Sep 16, 2025 | 7:26 PM

ಇಸ್ಲಮಾಬಾದ್, ಸೆಪ್ಟೆಂಬರ್ 16: ತಾನೇ ಭಾರತ ಮತ್ತು ಪಾಕಿಸ್ತಾನದ (Pakistan) ನಡುವಿನ ಯುದ್ಧವನ್ನು ನಿಲ್ಲಿಸಿದ್ದು ಎಂದು ಪದೇಪದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡುತ್ತಲೇ ಇದ್ದಾರೆ. ಭಾರತವೂ ಅದನ್ನು ಪದೇಪದೆ ನಿರಾಕರಿಸುತ್ತಿದೆ. ಇದೀಗ ಪಾಕಿಸ್ತಾನ ಕೂಡ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನವಿರಾಮದಲ್ಲಿ ಅಮೆರಿಕದ ಪಾತ್ರವೇನೂ ಇಲ್ಲ ಎಂದು ಪಾಕಿಸ್ತಾನವೇ ಒಪ್ಪಿಕೊಂಡಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಭಾರತವು ಕದನ ವಿರಾಮ ಮಾತುಕತೆಯಲ್ಲಿ ಅಥವಾ ಬೇರಾವುದೇ ದ್ವಿಪಕ್ಷೀಯ ಮಾತುಕತೆಯಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಎಂದಿಗೂ ಸ್ವೀಕರಿಸಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಆಪರೇಷನ್ ಸಿಂಧೂರ್ ವೇಳೆ ನಡೆದ ಕದನವಿರಾಮದಲ್ಲೂ ಭಾರತ ಅಮೆರಿಕದ ಮಧ್ಯಸ್ಥಿಕೆಯನ್ನು ಒಪ್ಪಿಲ್ಲ ಎಂದು ಅವರು ಖಚಿತಪಡಿಸಿದ್ದಾರೆ.

ಕಾಶ್ಮೀರದ ವಿಷಯದಲ್ಲಿ ಅಮೆರಿಕದ ಮೂಲಕ ಮಾತುಕತೆಯ ಪ್ರಸ್ತಾಪ ಬಂದಿತ್ತು. ಆದರೆ ಭಾರತವು ಈ ವಿಷಯವು ದ್ವಿಪಕ್ಷೀಯವಾಗಿಯೇ ಉಳಿಯಬೇಕೆಂದು ಒತ್ತಾಯಿಸಿತು. ಮೂರನೇ ದೇಶದಿಂದ ಕದನವಿರಾಮದ ಮಾತುಕತೆಗೆ ಭಾರತ ಒಪ್ಪಲಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ. ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ತಮ್ಮನ್ನು ಆಹ್ವಾನಿಸಲಾಗಿದೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ತಳ್ಳಿಹಾಕಿದ ಇಶಾಕ್ ದಾರ್, ಎರಡೂ ದೇಶಗಳ ನಡುವಿನ ವಿವಾದಗಳಲ್ಲಿ ಭಾರತ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಎಂದಿಗೂ ಸ್ವೀಕರಿಸಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ.


ಇದನ್ನೂ ಓದಿ: ಏಷ್ಯಾ ಕಪ್‌ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಆಡಿದ್ದೇಕೆ? ಕಾರಣ ತಿಳಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು

“ಮೂರನೇ ವ್ಯಕ್ತಿಯ ಒಳಗೊಳ್ಳುವಿಕೆಗೆ ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಭಾರತವು ಇದು ದ್ವಿಪಕ್ಷೀಯ ವಿಷಯ ಎಂದು ಸ್ಪಷ್ಟವಾಗಿ ಹೇಳುತ್ತಿದೆ. ಈ ವಿಷಯದಲ್ಲಿ ನಮ್ಮ ಅಭ್ಯಂತರವಿಲ್ಲ. ಆದರೆ ಮಾತುಕತೆಗಳು ಸಮಗ್ರವಾಗಿರಬೇಕು, ಭಯೋತ್ಪಾದನೆ, ವ್ಯಾಪಾರ, ಆರ್ಥಿಕತೆ, ಜಮ್ಮು ಮತ್ತು ಕಾಶ್ಮೀರ, ನಾವು ಈ ಹಿಂದೆ ಚರ್ಚಿಸಿದ ಎಲ್ಲಾ ವಿಷಯಗಳನ್ನು ಒಳಗೊಂಡಿರಬೇಕೆಂಬುದು ನಮ್ಮ ಒತ್ತಾಯ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:24 pm, Tue, 16 September 25