ದೆಹಲಿ: ನೂತನ ಕೃಷಿ ಕಾಯ್ದೆ ವಿರುದ್ಧ ಹೋರಾಡುತ್ತಿರುವ ರೈತರ ದನಿ ಇದೀಗ ಭಾರತದ ಗಡಿಯಾಚೆಗೂ ಪ್ರತಿಧ್ವನಿಸಿದೆ. ಸಿಖ್ ಧರ್ಮೀಯರು ಗಮನಾರ್ಹ ಪ್ರಮಾಣದಲ್ಲಿರುವ ಕೆನಡಾದ ಗುರುನಾನಕ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೇ ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಪ್ರಸ್ತಾಪಿಸಿದ್ದಾರೆ.
ಭಾರತದ ಆಂತರಿಕ ವಿಚಾರಗಳ ಬಗ್ಗೆ ಮತ್ತೊಂದು ದೇಶದ ಪ್ರಧಾನಿ ಪ್ರತಿಕ್ರಿಯಿಸಿರುವುದಕ್ಕೆ ಭಾರತದ ವಿದೇಶಾಂಗ ಇಲಾಖೆ ಆಕ್ಷೇಪಿಸಿದೆ. ಪ್ರಸ್ತುತ ಎರಡೂ ದೇಶಗಳ ನಡುವೆ ಉತ್ತಮ ರಾಜತಾಂತ್ರಿಕ ಸಂಬಂಧವಿದೆ ಆದರೆ ಕೆನಡಾ ಪ್ರಧಾನಿಯ ಹೇಳಿಕೆಯನ್ನು ಭಾರತ ಗಂಭೀರವಾಗಿ ಪರಿಗಣಿಸಿ, ಪರೋಕ್ಷವಾಗಿ ಪ್ರತಿನಡೆಯ ಕ್ರಮಗಳಿಗೆ ಮುಂದಾದರೆ ಸಂಬಂಧದ ಮೇಲೆ ದೂರಗಾಮಿ ಪರಿಣಾಮಗಳು ಉಂಟಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಹಿಂದೆ ಮಲೇಷಿಯಾದ ಪ್ರಧಾನಿ ಭಾರತದ ಆಂತರಿಕ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿದ ನಂತರ ಆ ದೇಶದಿಂದ ಬರುತ್ತಿದ್ದ ತಾಳೆ ಎಣ್ಣೆಯ ಆಮದಿನ ಮೇಲೆ ಭಾರತ ಹೊಸ ನಿರ್ಬಂಧಗಳನ್ನು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
‘ಶಾಂತಿಯುತವಾದ ಪ್ರತಿಭಟನೆಯ ಹಕ್ಕನ್ನು ಕೆನಡಾ ದೇಶ ಸದಾ ಬೆಂಬಲಿಸುತ್ತದೆ. ಭಾರತದ ರೈತರ ಪ್ರತಿಭಟನೆಯನ್ನು ಗುರುತಿಸದೇ ಹೋದರೆ, ನಾನು ಅಜಾಗರೂಕ ವರ್ತನೆ ತೋರಿದಂತೆ ಆಗುತ್ತದೆ’ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೇ ಹೇಳಿದ್ದರು.
ಗುರುನಾನಕ್ ಜಯಂತಿಯಲ್ಲಿ ಮಾತನಾಡಿರುವ ವಿಡಿಯೊ ತುಣುಕನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, ಭಾರತೀಯ ನಾಯಕರನ್ನು ಈ ಸಂವಾದ ತಲುಪಬೇಕು ಎಂದು ಅಭಿಪ್ರಾಯಪಟ್ಟಿದ್ದರು.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾಸ್ತವ, ಕೆನಡಾ ಪ್ರಧಾನಿಯ ಹೇಳಿಕೆಯನ್ನು ಮಾಹಿತಿ ಕೊರತೆಯಿಂದ ಹೊರಬಿದ್ದ ಅನಗತ್ಯ ಮತ್ತು ಅನಾರೋಗ್ಯಕರ ನುಡಿ ಎಂದು ಟೀಕಿಸಿದ್ದಾರೆ.
ಪ್ರಜಾಪ್ರಭುತ್ವ ದೇಶದ ಆಂತರಿಕ ವಿಚಾರಗಳ ಬಗ್ಗೆ ಕೆನಡಾ ಮಾತನಾಡಿರುವುದನ್ನು ಅವರು ಖಂಡಿಸಿದ್ದಾರೆ. ರಾಜತಾಂತ್ರಿಕ ಸಂವಾದಗಳು ರಾಜಕೀಯ ಕಾರಣಕ್ಕಾಗಿ ತಪ್ಪಾಗಿ ನಿರೂಪಿತವಾಗಬಾರದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ಚಲೋ: ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಬಗ್ಗೆ ಇಂದಿನ ಸಭೆಯಲ್ಲಿ ರೈತರ ತೀರ್ಮಾನ
Published On - 5:42 pm, Tue, 1 December 20