
ಇಸ್ಲಮಾಬಾದ್, ಅಕ್ಟೋಬರ್ 5: “ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ, ನಮ್ಮ ಪಡೆಗಳು ಎಲ್ಲ ಮಿತಿಯನ್ನೂ ಮೀರಿ ಗಡಿಯನ್ನು ದಾಟಬಹುದು” ಎಂದು ಭಾರತ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ (Pakistan) ಕೂಡ ಭಾರತಕ್ಕೆ ಎಚ್ಚರಿಕೆ ನೀಡಿದೆ. ಭಾರತದ ನಿರಾಕರಣೆಯ ನಡುವೆ ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನ 6 ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂಬ ಹೇಳಿಕೆಯನ್ನು ಪಾಕಿಸ್ತಾನ ಮತ್ತೆ ಪುನರುಚ್ಚರಿಸಿದೆ.
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಭಾರತದ ಎಚ್ಚರಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, “ಭಾರತವು ಅದರ ಯುದ್ಧ ವಿಮಾನಗಳ ಅವಶೇಷಗಳಡಿಯಲ್ಲಿ ಹೂತುಹೋಗಲಿದೆ” ಎಂದು ಎಚ್ಚರಿಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಆಸಿಫ್, ಭಾರತದ ಮಿಲಿಟರಿ ಮತ್ತು ರಾಜಕೀಯ ನಾಯಕರ ಇತ್ತೀಚಿನ ಹೇಳಿಕೆಗಳು ಅವರ ಕಳೆದುಹೋದ ವಿಶ್ವಾಸಾರ್ಹತೆಯನ್ನು ಪುನಃಸ್ಥಾಪಿಸುವ ವಿಫಲ ಪ್ರಯತ್ನ ಎಂದು ಟೀಕಿಸಿದ್ದಾರೆ. ದೇಶೀಯ ಪ್ರತಿಕ್ರಿಯೆಯಿಂದ ಜನರನ್ನು ಬೇರೆಡೆಗೆ ಸೆಳೆಯಲು ಸರ್ಕಾರವು ಉದ್ವಿಗ್ನತೆಯನ್ನು ಹುಟ್ಟುಹಾಕುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನದ 5 ಯುದ್ಧ ವಿಮಾನ ಪತನ; ಐಎಎಫ್ ಮುಖ್ಯಸ್ಥ ಮಹತ್ವದ ಮಾಹಿತಿ
“ಪಾಕಿಸ್ತಾನ ಅಲ್ಲಾಹನ ಹೆಸರಿನಲ್ಲಿ ನಿರ್ಮಿಸಲಾದ ರಾಷ್ಟ್ರ, ನಮ್ಮ ರಕ್ಷಕರು ಅಲ್ಲಾಹನ ಸೈನಿಕರು. ಈ ಬಾರಿ, ಭಾರತವೇನಾದರೂ ನಮ್ಮ ತಂಟೆಗೆ ಬಂದರೆ ಅದು ತನ್ನ ಯುದ್ಧವಿಮಾನಗಳ ಭಗ್ನಾವಶೇಷಗಳ ಅಡಿಯಲ್ಲಿ ಹೂತುಹೋಗಲಿದೆ. ಅಲ್ಲಾಹು ಅಕ್ಬರ್,” ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಮೇ 7ರಂದು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿ, ಭಯೋತ್ಪಾದಕ ಮೂಲಸೌಕರ್ಯಗಳನ್ನು ಹೊಡೆದುರುಳಿಸಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದಿತ್ತು. ಇದಾದ ನಂತರ, ಪಾಕಿಸ್ತಾನವು ಪುರಾವೆಗಳಿಲ್ಲದೆ ಪದೇ ಪದೇ ತಾನೇ ವಿಜಯ ಸಾಧಿಸಿರುವುದಾಗಿ ಹೇಳಿಕೊಂಡು ತಿರುಗಾಡುತ್ತಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ