ಭಾರತಕ್ಕೆ ಮತ್ತೊಂದು ಗೌರವ: ಸುಡಾನ್​ನಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನೆ ಕಮಾಂಡರ್​ ಆಗಿ ಭಾರತೀಯ ಸೇನೆಯ ಅಧಿಕಾರಿ ನೇಮಕ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 07, 2022 | 11:02 AM

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಈ ನೇಮಕ ಮಾಡಿದ್ದಾರೆ

ಭಾರತಕ್ಕೆ ಮತ್ತೊಂದು ಗೌರವ: ಸುಡಾನ್​ನಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನೆ ಕಮಾಂಡರ್​ ಆಗಿ ಭಾರತೀಯ ಸೇನೆಯ ಅಧಿಕಾರಿ ನೇಮಕ
ಲೆಫ್ಟಿನೆಂಟ್ ಜನರಲ್ ಮೋಹನ್ ಸುಬ್ರಹ್ಮಣ್ಯನ್
Follow us on

ನ್ಯೂಯಾರ್ಕ್​: ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಮೋಹನ್ ಸುಬ್ರಹ್ಮಣ್ಯನ್ ಅವರನ್ನು ದಕ್ಷಿಣ ಸುಡಾನ್​ನಲ್ಲಿ ನೆಲೆನಿಂತಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಕಮಾಂಡರ್ ಆಗಿ ನಿಯೋಜಿಸಲಾಗಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಈ ನೇಮಕ ಮಾಡಿದ್ದಾರೆ. ಈ ಮೊದಲೂ ಸಹ ದಕ್ಷಿಣ ಸುಡಾನ್​ನಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಕಮಾಂಡರ್ ಭಾರತೀಯರೇ ಆಗಿದ್ದರು ಎನ್ನುವುದು ಗಮನಾರ್ಹ ಸಂಗತಿ. ಈ ಹಿಂದೆ ಸುಡಾನ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೆಫ್ಟಿನೆಂಟ್ ಜನರಲ್ ಶೈಲೇಶ್ ಟಿನೈಕರ್ ಅವರ ಸ್ಥಾನಕ್ಕೆ ಇದೀಗ ಸುಬ್ರಹ್ಮಣ್ಯನ್ ಬಂದಿದ್ದಾರೆ. ಶೈಲೇಶ್ ಅವರ ಬದ್ಧತೆ, ನಾಯಕತ್ವದ ಗುಣ ಮತ್ತು ಸೇವಾ ಮನೋಭಾವವನ್ನು ಆಂಟೊನಿಯೊ ಗುಟೆರಸ್ ಶ್ಲಾಘಿಸಿದ್ದಾರೆ. ಲೆಫ್ಟಿನೆಂಟ್ ಜನರಲ್ ಶೈಲೇಶ್ ಅವರನ್ನು ಮೇ 2019ರಲ್ಲಿ ಶಾಂತಿಪಾಲನಾ ಪಡೆಯ ಕಮಾಂಡರ್ ಆಗಿ ನೇಮಿಸಲಾಗಿತ್ತು.

ಲೆಫ್ಟಿನೆಂಟ್ ಜನರಲ್ ಸುಬ್ರಹ್ಮಣ್ಯನ್ ಅವರು ಭಾರತೀಯ ಸೇನೆಯಲ್ಲಿ ಸುಮಾರು 36 ವರ್ಷ ಸೇವೆ ಸಲ್ಲಿಸಿದ್ದಾರೆ. ಶಾಂತಿಪಾಲನಾ ಪಡೆಗೆ ನಿಯೋಜನೆಯಾಗುವ ಮೊದಲು ಮಿಲಿಟರಿ ಕಾರ್ಯಾಚರಣೆ ಮತ್ತು ಕಟ್ಟೆಚ್ಚರ ವಿಭಾಗದಲ್ಲಿ ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಸೇನೆಯ ಒಟ್ಟಾರೆ ಸಿದ್ಧತೆಯ ಗುಣಮಟ್ಟದ ಮೇಲೆ ನಿಗಾ ಇರಿಸುತ್ತಿದ್ದರು. ಭಾರತೀಯ ಸೇನೆಯ ಮೌಂಟೇನ್ ಬ್ರಿಗೇಡ್​, ಇನ್​ಫೆಂಟ್ರಿ ಬ್ರಿಗೇಡ್, ಸ್ಟ್ರೈಕ್ ಇನ್​ಫೆಂಟ್ರಿ ಡಿವಿಷನ್, ಖರೀದಿ ಮತ್ತು ನೇಮಕಾತಿ ವಿಭಾಗಗಳ ಉನ್ನತ ಹುದ್ದೆಗಳಲ್ಲಿ ಸುಬ್ರಹ್ಮಣ್ಯನ್ ಕಾರ್ಯನಿರ್ವಹಿಸಿದ್ದರು.

ವಿಯೆಟ್ನಾಂ, ಲಾವೋಸ್ ಮತ್ತು ಕಾಂಬೋಡಿಯಾ ಸೇನೆಗಳ ವಿವಿಧ ಘಟಕಗಳಿಗೆ ಭಾರತೀಯ ಸೇನೆಯ ಪ್ರತಿನಿಧಿಯಾಗಿ ಮಾರ್ಗದರ್ಶನ ಮಾಡಿದ್ದರು. ಸಮಾಜಶಾಸ್ತ್ರ ಮತ್ತು ರಕ್ಷಣಾ ವಿದ್ಯಮಾನಗಳ ನಿರ್ವಹಣೆ ವಿಷಯಗಳಲ್ಲಿ ಎಂಫಿಲ್ ಪದವಿ ಪಡೆದಿದ್ದಾರೆ.

ಶಾಂತಿಪಾಲನಾ ಪಡೆಯಲ್ಲಿ ಭಾರತ

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಭಾರತವು ಗಮನಾರ್ಹ ಪ್ರಮಾಣದಲ್ಲಿ ಯೋಧರನ್ನು ಕಳಿಸುತ್ತಿದೆ. ದಕ್ಷಿಣ ಸುಡಾನ್​ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯು ಜುಲೈ 2011ರಿಂದ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಅಲ್ಲಿ ವಿವಿಧ ದೇಶಗಳ 17,982 ಯೋಧರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 2,285 ಮಂದಿ ಭಾರತೀಯರು ಎಂಬುದು ಗಮನಾರ್ಹ ಸಂಗತಿ.

Published On - 11:02 am, Thu, 7 July 22