
ಟೆಲ್ ಅವೀವ್, ಅಕ್ಟೋಬರ್ 1: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಹಾರಾಟದ ವೇಳೆ ಕಾಕ್‌ಪಿಟ್‌ನಲ್ಲಿ ಗಂಭೀರ ಘಟನೆ ನಡೆದಿದೆ. ಸಹ-ಪೈಲಟ್‌ನಿಂದ ಕ್ಯಾಪ್ಟನ್ ಮೇಲೆ ದಾಳಿ ನಡೆದ ಬಳಿಕ ವಿಮಾನದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಾಯಗೊಂಡಿದ್ದರೂ ಕ್ಯಾಪ್ಟನ್ ಸಮಯಪ್ರಜ್ಞೆಯಿಂದ ಕಾಕ್‌ಪಿಟ್ ಬಾಗಿಲು ತೆರೆಯಲು ಸಾಧ್ಯವಾಗಿದ್ದು, ಬಳಿಕ ಇತರ ಪೈಲಟ್‌ಗಳು ನಿಯಂತ್ರಣ ವಹಿಸಿಕೊಂಡು ವಿಮಾನವನ್ನು ಸೌದಿ ಅರೇಬಿಯಾದ ತಬುಕ್‌ನಲ್ಲಿ ಸುರಕ್ಷಿತವಾಗಿ ಇಳಿಸಿದ್ದಾರೆ. ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರನ್ನು ರಿಯಲ್ ಹೀರೋ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಬಣ್ಣಿಸಿದ್ದಾರೆ.
ಹಾರಾಟದ ಮಧ್ಯದಲ್ಲೇ ಸಹ-ಪೈಲಟ್ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದಾಗಲೂ, ತೀವ್ರ ರಕ್ತಸ್ರಾವದ ನಡುವೆಯೇ ಕಾಕ್‌ಪಿಟ್ ಬಾಗಿಲನ್ನು ಅನ್‌ಲಾಕ್ ಮಾಡುವ ಮೂಲಕ ವಿಮಾನದಲ್ಲಿದ್ದ 174 ಮಂದಿಯ ಪ್ರಾಣವನ್ನು ಉಳಿಸಿದ್ದಾರೆ.
ಸೆಪ್ಟೆಂಬರ್ 30 ರಂದು ಬೋಯಿಂಗ್ 737 MAX 8 ವಿಮಾನವು ಟೆಲ್ ಅವೀವ್ ಕಡೆಗೆ ಹಾರುತ್ತಿದ್ದಾಗ ಕಾಕ್‌ಪಿಟ್‌ನಲ್ಲಿ ಈ ಭೀಕರ ಸಂಘರ್ಷ ನಡೆದಿದೆ.
ಸಹ-ಪೈಲಟ್‌ನಿಂದ ಹಠಾತ್ ಇರಿತ: ವಿಮಾನ ನಿಯಂತ್ರಣದಲ್ಲಿದ್ದಾಗ ಓಮನ್ ಮೂಲದವನೆನ್ನಲಾದ ಸಹ-ಪೈಲಟ್ ಏಕಾಏಕಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದ. ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅದನ್ನು ಕೆಳಕ್ಕೆ ಅಪ್ಪಳಿಸುವ ಹುನ್ನಾರ ಇದಾಗಿತ್ತು ಎಂದು ಶಂಕಿಸಲಾಗಿದೆ.
ಮತ್ತಷ್ಟು ಓದಿ:
ದುಬೈ-ಟೆಲ್ ಅವೀವ್ ವಿಮಾನ ಅಪಹರಣ ಆತಂಕ: ಹೈಜಾಕ್ ಸಿಗ್ನಲ್ ರವಾನೆ ಬೆನ್ನಲ್ಲೇ ಗಡಿಗಿಳಿದ ಇಸ್ರೇಲ್ ಫೈಟರ್ ಜೆಟ್‌ಗಳು
ಧೃತಿಗೆಡದೆ ಬಾಗಿಲು ತೆರೆದ ಕ್ಯಾಪ್ಟನ್: ತೀವ್ರ ಗಾಯಗಳಾಗಿದ್ದರೂ ಮಚ್ಚರ್ ದಾಳಿಕೋರನ ವಿರುದ್ಧ ಹೋರಾಟ ಮುಂದುವರೆಸಿದ್ದರು. ತಮ್ಮ ಪ್ರಜ್ಞೆ ತಪ್ಪುವ ಮುನ್ನವೇ ಹೇಗೋ ಮಾಡಿ ಲಾಕ್ ಆಗಿದ್ದ ಕಾಕ್‌ಪಿಟ್ ಸುರಕ್ಷತಾ ಬಾಗಿಲನ್ನು ಅನ್‌ಲಾಕ್ ಮಾಡುವಲ್ಲಿ ಯಶಸ್ವಿಯಾದರು. ಬಾಗಿಲು ತೆರೆಯುತ್ತಿದ್ದಂತೆ ಇಸ್ರೇಲಿ ಪ್ರಯಾಣಿಕ ಯಾನೀವ್ ಹಯೂನ್ ಸೇರಿದಂತೆ ಇತರ ಪ್ರಯಾಣಿಕರು ಮತ್ತು ಕ್ಯಾಬಿನ್ ಸಿಬ್ಬಂದಿ ಒಳನುಗ್ಗಿ, ದಾಳಿಕೋರ ಕೋ-ಪೈಲಟ್‌ನ ಕುತ್ತಿಗೆ ಬಿಗಿದು ದೂರ ಎಳೆದರು.
ಸುರಕ್ಷಿತ ಲ್ಯಾಂಡಿಂಗ್: ವಿಮಾನದಲ್ಲೇ ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದ ಕರ್ತವ್ಯದಲ್ಲಿಲ್ಲದ (Off-duty) ಇಬ್ಬರು ಫ್ಲೈದುಬೈ ಪೈಲಟ್‌ಗಳು ತಕ್ಷಣವೇ ನಿಯಂತ್ರಣ ವಹಿಸಿಕೊಂಡು, ವೇಗವಾಗಿ ಕೆಳಮುಖವಾಗಿ ಬೀಳುತ್ತಿದ್ದ ವಿಮಾನವನ್ನು ಸ್ಥಿರಗೊಳಿಸಿ ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದರು. ದಾಳಿಕೋರನನ್ನು ಸೌದಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಸ್ರೇಲ್ ಪ್ರಧಾನಿ ನೆತನ್ಯಾಹು: “ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಅಸಾಧಾರಣ ಧೈರ್ಯಕ್ಕೆ ನನ್ನ ಸಲ್ಯೂಟ್. ತೀವ್ರವಾಗಿ ಗಾಯಗೊಂಡಿದ್ದರೂ ಅವರು ಕಾಕ್‌ಪಿಟ್ ಬಾಗಿಲು ತೆರೆದು ಮಧ್ಯ-ಗಾಳಿಯ ಮಹಾ ದುರಂತವನ್ನು ತಪ್ಪಿಸಿದರು. ಅವರು 174 ಜನರ ಜೀವ ಉಳಿಸಿದ ನಿಜವಾದ ಹೀರೋ ಎಂದು ಎಕ್ಸ್‌ನಲ್ಲಿ ಶ್ಲಾಘಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್: ನೆತನ್ಯಾಹು ಜೊತೆ ಚರ್ಚಿಸಿದ ನಂತರ ಮಾತನಾಡಿದ ಟ್ರಂಪ್, ಸಹ-ಪೈಲಟ್‌ನ ಈ ದುಷ್ಕೃತ್ಯ ಭಯೋತ್ಪಾದನೆ ಅಥವಾ ವಂಚನೆಯ ಕೆಲಸದಂತೆ ಕಾಣುತ್ತಿದೆ. ಕಠಿಣ ಸ್ಥಿತಿಯಲ್ಲೂ ಬಾಗಿಲು ತೆರೆದ ಭಾರತೀಯ ಪೈಲಟ್ ಅದ್ಭುತ ಹೀರೋ ಎಂದು ಬಣ್ಣಿಸಿದ್ದಾರೆ.
ಪೋಸ್ಟ್
Prime Minister Benjamin Netanyahu:
My salute to the Indian pilot Captain Smit Machchhar for his extraordinary bravery.
Despite being stabbed and seriously injured, he fought back, resisted, opened the cockpit door, and enabled passengers and crew to overpower the attacker —…
— Prime Minister of Israel (@IsraeliPM) September 30, 2026
ಕ್ಯಾಪ್ಟನ್ ಸ್ಮಿತ್ ಮಚ್ಚರ್ ಹಿನ್ನೆಲೆ: ಭಾರತೀಯ ವಾಯುಯಾನ ಕ್ಷೇತ್ರದಲ್ಲಿ ಸುಮಾರು 13 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಮಚ್ಚರ್, 9,750 ಗಂಟೆಗಳಿಗೂ ಹೆಚ್ಚು ಕಾಲ ವಿಮಾನ ಹಾರಾಟ ನಡೆಸಿದ ಅನುಭವಿ ಪೈಲಟ್. ಫ್ಲೈದುಬೈಗೆ ಸೇರುವ ಮುನ್ನ ಭಾರತದ ‘ಸ್ಪೈಸ್‌ಜೆಟ್’ ಸಂಸ್ಥೆಯಲ್ಲಿ ಸುಮಾರು 11 ವರ್ಷಗಳ ಕಾಲ ಹಿರಿಯ ಕಮಾಂಡರ್ ಮತ್ತು ಲೈನ್ ಟ್ರೈನಿಂಗ್ ಕ್ಯಾಪ್ಟನ್ ಆಗಿ ಯುವ ಪೈಲಟ್‌ಗಳಿಗೆ ತರಬೇತಿ ನೀಡಿದ್ದರು. 2022 ರಲ್ಲಿ ಇವರು ದುಬೈ ಏರ್‌ಲೈನ್ಸ್‌ಗೆ ನೇರ ಪ್ರವೇಶ ಕ್ಯಾಪ್ಟನ್ ಆಗಿ ನಿಯೋಜನೆಗೊಂಡಿದ್ದರು. ಇದೀಗ ಸ್ಮಿತ್ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಾಕ್‌ಪಿಟ್ ಸುರಕ್ಷತಾ ಬಾಗಿಲಿನ ನಿಯಮ (9/11 ನಂತರ): 2001ರ ಸೆಪ್ಟೆಂಬರ್ 11ರ ಅಮೆರಿಕದ ಭಯೋತ್ಪಾದಕ ದಾಳಿಯ ನಂತರ ವಿಶ್ವದ ಎಲ್ಲಾ ವಾಣಿಜ್ಯ ವಿಮಾನಗಳಲ್ಲಿ ಕಾಕ್‌ಪಿಟ್ ಬಾಗಿಲುಗಳನ್ನು ಬುಲೆಟ್-ಪ್ರೂಫ್ ಮತ್ತು ಹೊರಗಿನಿಂದ ಯಾರೂ ಸುಲಭವಾಗಿ ತೆರೆಯಲಾಗದಂತೆ ಅತ್ಯಂತ ಕಟ್ಟುನಿಟ್ಟಾದ ಆಂತರಿಕ ಕೋಡ್ ಲಾಕಿಂಗ್ ವ್ಯವಸ್ಥೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಕ್ಯಾಪ್ಟನ್ ಒಳಗಿನಿಂದ ಅನ್‌ಲಾಕ್ ಮಾಡದಿದ್ದರೆ ಹೊರಗಿನ ಪ್ರಯಾಣಿಕರು ಒಳಗೆ ಪ್ರವೇಶಿಸಲು ಸಾಧ್ಯವೇ ಇರಲಿಲ್ಲ, ಹಾಗಾಗಿ ಮಚ್ಚರ್ ಅವರ ಆ ನಿರ್ಧಾರವೇ ಇಡೀ ವಿಮಾನವನ್ನು ರಕ್ಷಿಸಿತು.
ಸಹ-ಪೈಲಟ್ ಉದ್ದೇಶದ ತನಿಖೆ: ವಿಮಾನವನ್ನು ಹೈಜಾಕ್ ಮಾಡಿ ಅಪಘಾತಕ್ಕೀಡು ಮಾಡಲು ಯತ್ನಿಸಿದ ಆಪಾದಿತ ಕೋ-ಪೈಲಟ್‌ನ ಮಾನಸಿಕ ಸ್ಥಿತಿ, ಭಯೋತ್ಪಾದಕ ಸಂಘಟನೆಗಳ ಜೊತೆಗಿನ ಸಂಪರ್ಕ ಅಥವಾ ವೈಯಕ್ತಿಕ ದ್ವೇಷದ ಆಯಾಮಗಳ ಬಗ್ಗೆ ಸೌದಿ ಅರೇಬಿಯಾ, ಇಸ್ರೇಲ್ ಹಾಗೂ ಯುಎಇ ಭದ್ರತಾ ತನಿಖಾ ಸಂಸ್ಥೆಗಳು ಜಂಟಿಯಾಗಿ ಸಮಗ್ರ ತನಿಖೆ ನಡೆಸುತ್ತಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:42 am, Thu, 1 October 26