13 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಮಾಡಿದ್ದ ವಸತಿ ಶಾಲೆ ಶಿಕ್ಷಕನಿಗೆ ಇಂಡೋನೇಷ್ಯಾ ನ್ಯಾಯಾಲಯ (Indonesian Court) ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿಯ ಹೆಸರು ಹೆರ್ರಿ ವಿರಾವಾನ್. ಬೋರ್ಡಿಂಗ್ ಶಾಲೆಯ (Boarding School) ಮಾಲೀಕನೂ ಹೌದು ಈತ. ಅಷ್ಟೇ ಅಲ್ಲ ಧಾರ್ಮಿಕ ಗುರು. ಅಲ್ಲಿರುವ 11-16ವಯಸ್ಸಿನ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. 2016ರಿಂದ ಸುಮಾರು 13 ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ್ದ. ಅದರಲ್ಲಿ ಎಂಟು ಬಾಲಕಿಯರು ಗರ್ಭಿಣಿಯರೂ ಆಗಿ, ಮಕ್ಕಳಿಗೆ ಜನ್ಮ ನೀಡಿದ್ದಾರೆ. ಕಳೆದ ವರ್ಷ ಈತ ಕಾಮಕಾಂಡ ಬಯಲಿಗೆ ಬಂದು, ಇಡೀ ಇಂಡೋನೇಷ್ಯಾವನ್ನೇ ಬೆಚ್ಚಿಬೀಳಿಸಿತ್ತು. ವಿರಾವಾನ್ಗೆ ಮರಣದಂಡನೆ ವಿಧಿಸಬೇಕು, ಅದಿಲ್ಲದೆ ಇದ್ದರೆ, ರಾಸಾಯನಿಕವನ್ನು ಇಂಜೆಕ್ಟ್ ಮಾಡುವ ಮೂಲಕ ಪುರುಷತ್ವ ಹರಣ ಮಾಡಬೇಕು ಎಂದು ಪ್ರಾಸಿಕ್ಯೂಟರ್ ಆಗ್ರಹಿಸಿದ್ದರು. ಅದೆರಡನ್ನೂ ಕೋರ್ಟ್ ತಿರಸ್ಕರಿಸಿ, ಜೀವಾವಧಿ ಶಿಕ್ಷೆ ವಿಧಿಸಿದೆ.
2016ರಲ್ಲಿ ಈ ವಿರಾವಾನ್ ಪಶ್ಚಿಮ ಜಾವಾದ ಬಂಡಂಗ್ ನಗರದಲ್ಲಿ ಇಸ್ಲಾಮಿಕ್ ವಸತಿ ಶಾಲೆ ತೆರೆದಿದ್ದ. ತನ್ನ ಶಾಲೆಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಸ್ಕಾಲರ್ಶಿಪ್ ಸೇರಿ ಇನ್ನಿತರ ಆಮಿಷ ಒಡ್ಡುತ್ತಿದ್ದ. ಹೀಗಾಗಿ ಸ್ವಲ್ಪ ಬಡವರಾದವರು ತಮ್ಮ ಮಕ್ಕಳನ್ನು ಅಲ್ಲಿಯೇ ಸೇರಿಸಲು ಮುಂದಾಗುತ್ತಿದ್ದರು. 2016ರಿಂದ 2021ರವರೆಗೆ ಈತ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಮಾಡುತ್ತಲೇ ಇದ್ದ. ಕಳೆದ ವರ್ಷ ಮೇ ತಿಂಗಳಲ್ಲಿ ಈತನಿಂದ ಅತ್ಯಾಚಾರಕ್ಕೆ ಒಳಗಾದ ವಿದ್ಯಾರ್ಥಿನಿಯೊಬ್ಬಳು ಗರ್ಭ ಧರಿಸಿದ್ದಳು. ಅದನ್ನು ಗಮನಿಸಿದ ಪಾಲಕರು ದೂರು ಕೊಟ್ಟಾಗ ತನಿಖೆ ನಡೆಯಿತು. ಆಗಲೇ ವಿರಾವಾನ್ ಕಾಮ ಪ್ರಕರಣಗಳು ಬಯಲಿಗೆ ಬಂದಿದ್ದು.
ಹೆರ್ರಿ ವಿರಾವಾನ್ ತನ್ನ ವಸತಿ ಶಾಲೆಗೆ ಬರುವ ಹೆಣ್ಣುಮಕ್ಕಳಿಗೆ ನಿರ್ಬಂಧ ವಿಧಿಸುತ್ತಿದ್ದ. ಅವರ ಮೊಬೈಲ್ಗಳನ್ನು ವಶಪಡಿಸಿಕೊಳ್ಳುತ್ತಿದ್ದ. ಮನೆಯವರೊಂದಿಗೆ ಸಂಪರ್ಕದಲ್ಲಿರಲು ಬಿಡುತ್ತಿರಲಿಲ್ಲ. ವರ್ಷಕ್ಕೊಮ್ಮೆ ಮಾತ್ರ ಹೆಣ್ಣುಮಕ್ಕಳು ಮನೆಗೆ ಹೋಗಬಹುದಾಗಿತ್ತು. ಹೀಗಾಗಿ ತಮಗಾಗುತ್ತಿರುವ ಕಷ್ಟವನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ ಕಷ್ಟಪಡುತ್ತಿದ್ದರು. ಆದರೆ 2021ರ ಮೇ ತಿಂಗಳಲ್ಲಿ ಈತ ಸಿಕ್ಕಿಬಿದ್ದಿದ್ದಾನೆ. ಆಗಿನಿಂದಲೂ ಇಂಡೋನೇಷ್ಯಾದಲ್ಲಿ ಪ್ರಕರಣದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲದೆ, ಲೈಂಗಿಕ ದೌರ್ಜನ್ಯ ನಿರ್ಮೂಲನಾ ಕಾಯ್ದೆ ಜಾರಿಯಾಗಲೇಬೇಕು ಎಂಬ ಆಗ್ರಹವೂ ಜಾಸ್ತಿಯಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ: ಸಂಜಯ್ ರಾವುತ್
Published On - 9:38 am, Wed, 16 February 22