ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ: ಸಂಜಯ್ ರಾವುತ್
Sanjay Raut ನನ್ನನ್ನು ಟಾರ್ಗೆಟ್ ಮಾಡಿದ ದಿನ ಮತ್ತು ನನ್ನ ಆಪ್ತರ ಮೇಲೆ ದಾಳಿ ಮಾಡಿದಂದು ರಾತ್ರಿ ನಾನು ಅಮಿತ್ ಶಾಗೆ ಕರೆ ಮಾಡಿದೆ. ನಾನು ನಿಮಗೆ ಗೌರವ ನೀಡುತ್ತೇನೆ. ನೀವು ದೇಶದ ದೊಡ್ಡ ನಾಯಕ ಮತ್ತು ಗೃಹ ಮಂತ್ರಿ, ಆದರೆ ಏನು ನಡೆದೆದಿಯೋ ಅದು ಸರಿಯಲ್ಲ. ನಿಮಗೆ ನನ್ನೊಂದಿಗೆ ಯಾವುದೇ ದ್ವೇಷವಿದ್ದರೆ ನನ್ನನ್ನು ಗುರಿಯಾಗಿಸಿ...
ಮುಂಬೈ: ಮಹಾರಾಷ್ಟ್ರ (Maharashtra) ಸರ್ಕಾರವನ್ನು ಉರುಳಿಸಲು ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಸೇರಿದಂತೆ ಅದರ ನಾಯಕರು ಮತ್ತು ಅವರ ಕುಟುಂಬಗಳನ್ನು ಗುರಿಯಾಗಿಸಲು ಕೇಂದ್ರದಲ್ಲಿರುವ ಆಡಳಿತಾರೂಢ ಬಿಜೆಪಿ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ (Sanjay Raut) ಮಂಗಳವಾರ ಆರೋಪಿಸಿದ್ದಾರೆ. ಮುಂಬೈನ ದಾದರ್‌ನಲ್ಲಿರುವ ಶಿವಸೇನೆ ಪ್ರಧಾನ ಕಚೇರಿಯಲ್ಲಿ ಒಂದು ಗಂಟೆಗಳ ಕಾಲ ಮಾಧ್ಯಮಗೋಷ್ಠಿ ನಡೆಸಿದ ರಾವತ್, ತನಗೆ ಸಂಬಂಧಿಸಿದ ಜನರ ಮೇಲೆ ತನಿಖಾ ಸಂಸ್ಥೆ ದಾಳಿ ನಡೆಸಿದ ಬಳಿಕ ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕರೆ ಮಾಡಿದೆ ಎಂದು ಹೇಳಿದ್ದಾರೆ. “ನನ್ನನ್ನು ಟಾರ್ಗೆಟ್ ಮಾಡಿದ ದಿನ ಮತ್ತು ನನ್ನ ಆಪ್ತರ ಮೇಲೆ ದಾಳಿ ಮಾಡಿದಂದು ರಾತ್ರಿ ನಾನು ಅಮಿತ್ ಶಾಗೆ ಕರೆ ಮಾಡಿದೆ. ನಾನು ನಿಮಗೆ ಗೌರವ ನೀಡುತ್ತೇನೆ. ನೀವು ದೇಶದ ದೊಡ್ಡ ನಾಯಕ ಮತ್ತು ಗೃಹ ಮಂತ್ರಿ, ಆದರೆ ಏನು ನಡೆದೆದಿಯೋ ಅದು ಸರಿಯಲ್ಲ. ನಿಮಗೆ ನನ್ನೊಂದಿಗೆ ಯಾವುದೇ ದ್ವೇಷವಿದ್ದರೆ ನನ್ನನ್ನು ಗುರಿಯಾಗಿಸಿ, ನನಗೆ ಚಿತ್ರಹಿಂಸೆ ನೀಡಿ, ಅವರು (ಕೇಂದ್ರ ಏಜೆನ್ಸಿಗಳು) ನನ್ನ ಸ್ನೇಹಿತರು ಮತ್ತು ಸಂಬಂಧಿಕರನ್ನು ಏಕೆ ಗುರಿಯಾಗಿಸುತ್ತಾರೆ? ಎಂದು ನಾನು ಕೇಳಿದ್ದೆ ಅಂದಿದ್ದಾರೆ ರಾವುತ್.
ಹಣಕಾಸು ಅಪರಾಧಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಅಥವಾ ಇಡಿ ತನ್ನ ಮಗಳ ಮದುವೆಯಲ್ಲಿ ಭಾಗಿಯಾದ ಹೂವಿನಂಗಡಿಯವ, ಡೆಕೋರೇಟರ್, ಬ್ಯೂಟಿಷಿಯನ್ ಮತ್ತು ಅವರ ಟೈಲರ್ ಸೇರಿದಂತೆ ಜನರನ್ನು ವಿಚಾರಣೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ತಾವು ಅಥವಾ ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಶಿವಸೇನೆ, ಶರದ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಕಾಂಗ್ರೆಸ್‌ನ ಯಾವುದೇ ಸದಸ್ಯರೂ ಇಂತಹ ತಂತ್ರಗಳಿಗೆ ಮಣಿಯುವುದಿಲ್ಲ ಎಂದು ರಾವುತ್ ಹೇಳಿದ್ದಾರೆ.
ಕಳೆದ ತಿಂಗಳು ತಮ್ಮನ್ನು “ಕೆಲವು ಬಿಜೆಪಿ ನಾಯಕರು” ಸಂಪರ್ಕಿಸಿದ್ದು, ಅವರು ಪಕ್ಷವನ್ನು ಬದಲಾಯಿಸುವಂತೆ ಕೇಳಿಕೊಂಡರು ಮತ್ತು ಹಾಗೆ ಮಾಡದಿದ್ದಕ್ಕಾಗಿ ಅವರು ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದರು ಎಂದಿದ್ದಾರೆ ರಾವುತ್.
“20 ದಿನಗಳ ಹಿಂದೆ ಬಿಜೆಪಿಯ ಕೆಲವು ಹಿರಿಯರು ನನ್ನನ್ನು ಭೇಟಿಯಾಗಿ ನಿಷ್ಠೆಯನ್ನು ಬದಲಾಯಿಸುವಂತೆ ಕೇಳಿಕೊಂಡರು. ನಾವು ಹೇಗಾದರೂ ಈ ಸರ್ಕಾರವನ್ನು ಬೀಳಿಸಬೇಕೆಂದು ಬಯಸುತ್ತೇವೆ. ನಾವು ರಾಷ್ಟ್ರಪತಿ ಆಳ್ವಿಕೆಯನ್ನು ಹೇರುತ್ತೇವೆ ಅಥವಾ ನಾವು ಶಾಸಕರ ಗುಂಪನ್ನು ಒಡೆದು ಸರ್ಕಾರ ರಚಿಸುತ್ತೇವೆ ಎಂದಿದ್ದು, ನಾನು ಹಾಗೆ ಮಾಡುವುದಿಲ್ಲ ಎಂದು ಹೇಳಿದೆ.
ಹೀಗೆ ಬಗ್ಗದಿದ್ದರೆ ಕೇಂದ್ರ ಏಜೆನ್ಸಿಗಳು ಅವರನ್ನು “ಸರಿಪಡಿಸುತ್ತವೆ” ಎಂದು ಅವರು ಹೇಳಿದ್ದರು ಎಂದು ರಾವುತ್ ಆರೋಪಿಸಿದ್ದಾರೆ.
ಶರದ್ ಪವಾರ್ ಅವರ ಸಂಬಂಧಿಕರಿಗೆ ಹತ್ತಿರವಿರುವ ಜನರ ಮೇಲೆ ತನಿಖಾ ಸಂಸ್ಥೆ ನಡೆಸಿದ ದಾಳಿಗಳನ್ನು ಬಿಜೆಪಿ ನಾಯಕರು ಉಲ್ಲೇಖಿಸಿದ್ದಾರೆ ಎಂದು ರಾವುತ್ ಹೇಳಿದ್ದಾರೆ.
ಇದಾದ ಕೆಲವೇ ದಿನಗಳಲ್ಲಿ, ಜಾರಿ ನಿರ್ದೇಶನಾಲಯವು ತನ್ನ ಆಪ್ತರ ಮೇಲೆ “ಅತ್ಯಂತ ಕೆಟ್ಟ ರೀತಿಯಲ್ಲಿ” ಗುರಿಯಾಗಿಸಲು ಪ್ರಾರಂಭಿಸಿತು ಎಂದು ಶ ರಾವುತ್ ಹೇಳಿದರು.
“ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವನ್ನು ಉರುಳಿಸಲು ಕೇಂದ್ರ ಏಜೆನ್ಸಿಗಳನ್ನು ಬಳಸಲಾಗುತ್ತಿದೆ, ಆದರೆ ನಾವು ಬಗ್ಗುತ್ತೇವೆ ಎಂದು ನೀವು ಭಾವಿಸಿದರೆ, ಅದು ಸಾಧ್ಯವಿಲ್ಲ. ನಾವು ಇದನ್ನು ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರಿಂದ ಕಲಿತಿದ್ದೇವೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರದ ವೈನ್ ಮಾರಾಟ ನೀತಿ ವಿರುದ್ಧ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ರದ್ದು
Published On - 10:39 am, Wed, 16 February 22