ಶೂಟ್ ಮಾಡ್ಬೇಕಾ?; ಭೀಕರ ದಾಳಿಯ ಎಚ್ಚರಿಕೆ ನೀಡಿದ ಟ್ರಂಪ್​ಗೆ ಇರಾನ್ ತಿರುಗೇಟು

ಇಂದು ರಾತ್ರಿ ಇರಾನ್ ಮೇಲೆ ಅಮೆರಿಕ ಭೀಕರ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಿರುಗೇಟು ನೀಡಿರುವ ಇರಾನ್ ನಮ್ಮ ಬೆರಳು ಗನ್ ಮೇಲೆಯೇ ಇದೆ ಎಂದು ಹೇಳಿಕೆ ನೀಡುವ ಮೂಲಕ ಇನ್ನಷ್ಟು ಕೆರಳಿಸಿದೆ. ನಿನ್ನೆ ರಾತ್ರಿ ಇರಾನ್ ಮೇಲೆ ನಡೆಸಿದ ದಾಳಿಯನ್ನು ಸಮರ್ಥಿಸಿಕೊಂಡ ಟ್ರಂಪ್, ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ಇರಾನ್ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದಕ್ಕೆ ಈ ಕ್ರಮ ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ.

ಶೂಟ್ ಮಾಡ್ಬೇಕಾ?; ಭೀಕರ ದಾಳಿಯ ಎಚ್ಚರಿಕೆ ನೀಡಿದ ಟ್ರಂಪ್​ಗೆ ಇರಾನ್ ತಿರುಗೇಟು
Donald Trump
Image Credit source: AP

Updated on: Jul 08, 2026 | 10:35 PM

ಮುಖ್ಯಾಂಶಗಳು

  • ಗಲ್ಫ್ ರಾಷ್ಟ್ರಗಳಲ್ಲಿ ಮತ್ತೆ ಯುದ್ಧದ ಭೀತಿ
  • ಇಂದು ರಾತ್ರಿ ಭೀಕರ ದಾಳಿಯ ಎಚ್ಚರಿಕೆ ನೀಡಿದ ಟ್ರಂಪ್
  • ಟ್ರಂಪ್​ ಬೆದರಿಕೆಗೆ ಬಗ್ಗದ ಇರಾನ್ ಹೇಳಿದ್ದೇನು?

ಟೆಹ್ರಾನ್, ಜುಲೈ 8: ಕೊಂಚ ತಣ್ಣಗಾಗಿದ್ದ ಅಮೆರಿಕ ಮತ್ತು ಇರಾನ್ (Iran War) ನಡುವಿನ ಯುದ್ಧ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಕದನವಿರಾಮ ಅಂತ್ಯವಾಗಿದೆ ಎಂದು ಘೋಷಿಸಿರುವ ಟ್ರಂಪ್ ಇರಾನ್ ಮೇಲೆ ದಂಡೆತ್ತಿ ಹೋಗುವ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಿನ ಜಾಗತಿಕ ಯುದ್ಧ ಇದೀಗ ಮತ್ತಷ್ಟು ಭೀಕರವಾಗುತ್ತಿದೆ. ಇಂದು ರಾತ್ರಿಯೇ ಇರಾನ್ ಮೇಲೆ ಮತ್ತೊಂದು ಸುತ್ತಿನ ಭೀಕರ ಮಿಲಿಟರಿ ದಾಳಿ ನಡೆಸಲು ಅಮೆರಿಕ ಸಜ್ಜಾಗುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಒಂದುವೇಳೆ ಇರಾನ್ ತನ್ನ ಉದ್ಧಟತನವನ್ನು ಮುಂದುವರಿಸಿದರೆ ಇರಾನ್​ನ ಮೂಲಸೌಕರ್ಯಗಳನ್ನೂ ಧ್ವಂಸಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಇದಕ್ಕೆ ಇರಾನ್ ಕೂಡ ತಿರುಗೇಟು ನೀಡಿದೆ.

ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ಮತ್ತು ಗಲ್ಫ್ ವಲಯದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನ್ ಸರಣಿ ದಾಳಿ ನಡೆಸಿದ ಬೆನ್ನಲ್ಲೇ, ಟ್ರಂಪ್ ಕದನ ವಿರಾಮ ಒಪ್ಪಂದವನ್ನು ಕೊನೆಗೊಳಿಸಿದ್ದಾರೆ. ಇಂದು ಟರ್ಕಿಯ ಅಂಕಾರಾದಲ್ಲಿ ನಡೆಯುತ್ತಿರುವ ನ್ಯಾಟೋ (NATO) ಶೃಂಗಸಭೆಯ ಸಂದರ್ಭದಲ್ಲಿ ಮಾತನಾಡಿದ ಟ್ರಂಪ್, “ನಾವು ನಿನ್ನೆ ರಾತ್ರಿ ಇರಾನ್ ಮೇಲೆ ಅತ್ಯಂತ ಭೀಕರವಾಗಿ ದಾಳಿ ಮಾಡಿದ್ದೇವೆ. ಬಹುಶಃ ಇಂದು ರಾತ್ರಿ ಕೂಡ ಅವರ ಮೇಲೆ ಅಷ್ಟೇ ಭೀಕರವಾಗಿ ದಾಳಿ ನಡೆಸಲಿದ್ದೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕದನ ವಿರಾಮ ಅಂತ್ಯವೆಂದು ಘೋಷಿಸಿದ ಟ್ರಂಪ್; ಇರಾನ್ ಮೇಲೆ ಅಮೆರಿಕದಿಂದ ಭೀಕರ ವೈಮಾನಿಕ ದಾಳಿ

ಒಂದು ವೇಳೆ ಸಂಘರ್ಷ ಉಲ್ಬಣಿಸಿದರೆ, ಇರಾನ್‌ನ ವಿದ್ಯುತ್ ಉತ್ಪಾದನಾ ಘಟಕಗಳು ಮತ್ತು ಕುಡಿಯುವ ನೀರಿನ ಶುದ್ಧೀಕರಣ ಸ್ಥಾವರಗಳನ್ನು ಅಮೆರಿಕ ನಾಶ ಮಾಡಲಿದೆ ಎಂದು ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇರಾನ್‌ನ ಒಟ್ಟು ತೈಲ ರಫ್ತಿನ ಶೇ. 90ರಷ್ಟು ಭಾಗವನ್ನು ನಿರ್ವಹಿಸುವ ‘ಖಾರ್ಗ್ ದ್ವೀಪ’ವನ್ನು ಅಮೆರಿಕ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ ಎಂದು ಕೂಡ ಟ್ರಂಪ್ ಹೇಳಿದ್ದಾರೆ.


ಇರಾನ್ ಹೇಳಿದ್ದೇನು?:

ಅಮೆರಿಕದ ಬೆದರಿಕೆಗಳಿಗೆ ಇರಾನ್ ಕೂಡ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಇರಾನ್‌ನ ಸುಪ್ರೀಂ ನಾಯಕರ ಹಿರಿಯ ಸಲಹೆಗಾರರಾದ ಅಲಿ ಅಕ್ಬರ್ ವೇಲಾಯತಿ ಪ್ರತಿಕ್ರಿಯೆ ನೀಡಿದ್ದು, ಗಲ್ಫ್ ವಲಯದಲ್ಲಿ ಮತ್ತೆ ಯುದ್ಧದ ವಾತಾವರಣ ಸೃಷ್ಟಿಯಾಗಲು ಅಮೆರಿಕವೇ ಕಾರಣ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಒಪ್ಪಂದದ ರದ್ದತಿ ಘೋಷಣೆಯು ಇಡೀ ಪ್ರದೇಶವನ್ನು ಮತ್ತೆ ಬೆಂಕಿಯ ಜ್ವಾಲೆಗೆ ತಳ್ಳಿದೆ ಎಂದು ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಅಮೆರಿಕ- ಇರಾನ್ ನಡುವಿನ ಕದನ ವಿರಾಮ ಅಂತ್ಯ; ಭಾರತದ ತಲೆಬಿಸಿಗೆ ಕಾರಣಗಳಿವು 

ನಮ್ಮ ಬೆರಳು ಟ್ರಿಗರ್ ಮೇಲಿದೆ:

ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ವೇಲಾಯತಿ, “ಈ ಗಲ್ಫ್ ಪ್ರದೇಶವು ಸಣ್ಣ ದೇಶಗಳ ರಾಜಕೀಯ ಜೂಜಾಟದ ಮೈದಾನವಲ್ಲ ಎಂದು ನಾವು ಈ ಹಿಂದೆಯೇ ಎಚ್ಚರಿಸಿದ್ದೆವು. ಯಾವುದೇ ಆಕ್ರಮಣ ನಡೆದರೂ ನಾವು ತಕ್ಷಣವೇ ಅದಕ್ಕೆ ಪ್ರತ್ಯುತ್ತರ ನೀಡಲಿದ್ದೇವೆ ಎಂಬುದನ್ನು ಪದೇ ಪದೇ ಸಾಬೀತುಪಡಿಸಿದ್ದೇವೆ. ಈ ಬಾರಿಯೂ ಹಾಗೆಯೇ ಆಗಲಿದೆ. ನಮ್ಮ ಬೆರಳುಗಳು ಕೂಡ ಗನ್​ನ ಟ್ರಿಗರ್ ಮೇಲೆಯೇ ಇದೆ” ಎಂದಿದ್ದಾರೆ.

ಕಚ್ಚಾ ತೈಲದ ಬೆಲೆ ಏರಿಕೆ:

ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಅಂತ್ಯಗೊಂಡಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ದಿಢೀರನೆ ಏರಿಕೆ ಕಂಡಿವೆ. ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿದ್ದಾಗಲೂ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದಿರುವುದು ಇರಾನ್ ನಾಯಕತ್ವದೊಳಗಿನ ಆಂತರಿಕ ಭಿನ್ನಾಭಿಪ್ರಾಯವನ್ನು ತೋರಿಸುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇಸ್ರೇಲ್-ಇರಾನ್-ಅಮೆರಿಕದ ಯುದ್ಧದ ಆರಂಭದಲ್ಲೇ ಹತ್ಯೆಯಾಗಿದ್ದ ಇರಾನ್‌ನ ಸುಪ್ರೀಂ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಗುರುವಾರ ಮುಕ್ತಾಯಗೊಳ್ಳಲಿದ್ದು, ಅದರ ನಂತರ ದೀರ್ಘಾವಧಿಯ ಶಾಂತಿ ಮಾತುಕತೆಗಳು ಆರಂಭವಾಗಬೇಕಿತ್ತು. ಆದರೆ ಅಂತ್ಯಕ್ರಿಯೆಯ ಅವಧಿಯಲ್ಲೇ ಕದನ ವಿರಾಮ ಮುರಿದುಬಿದ್ದಿರುವುದರಿಂದ ಗಲ್ಫ್ ರಾಷ್ಟ್ರಗಳಲ್ಲಿ ಮತ್ತೆ ಯುದ್ಧದ ಭೀತಿ ಆವರಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:34 pm, Wed, 8 July 26

Loading...
Unable to load recommendations.
Follow Us